Advertisement

ಪುಲ್ವಾಮ ದಾಳಿಗೂ ಮುಂಚೆ ಪತ್ನಿಗೆ ವಿಡಿಯೋ ಕಳಿಸಿದ್ದ ಯೋಧ!

03:50 AM Feb 23, 2019 | Karthik A |

ಕಳೆದ ವಾರ ಕಣಿವೆ ರಾಜ್ಯದ ಪುಲ್ವಾಮ ಜಿಲ್ಲೆಯ ಆವಂತಿಪೋರಾ ಸಮೀಪ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕರ್ತವ್ಯಕ್ಕೆ ಸಾಗುತ್ತಿದ್ದ ಕೇಂದ್ರ ಮೀಸಲು ಪಡೆಯ ಯೋಧರ ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆಸಿ 40 ಮಂದಿಯನ್ನು ಬಲಿ ಪಡೆದ ಘಟನೆ ಇನ್ನೂ ದೇಶವಾಸಿಗಳ ಮನಸ್ಸಿನಿಂದ ಮಾಸಿಲ್ಲ. ಈ ದುರ್ಘಟನೆಗೂ ಸ್ವಲ್ಪ ಹೊತ್ತಿಗೆ ಮುಂಚೆ ಆ ನತದೃಷ್ಟ ವಾಹನದಲ್ಲಿದ್ದ ಯೋಧರೊಬ್ಬರು ದಾಳಿಗೂ ಮುನ್ನ ಚಿತ್ರೀಕರಣ ಮಾಡಿ ತನ್ನ ಪತ್ನಿಗೆ ಕಳುಹಿಸಿ​​​ದ್ದ ವಿಡಿಯೋ ಒಂದು ಇದೀಗ ಬಹಿರಂಗಗೊಂಡಿದೆ. ಸಿ.ಆರ್.ಪಿ.ಎಫ್.ನ 76ನೇ ಬೆಟಾಲಿಯನ್ ನಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹುತಾತ್ಮ ಯೋಧ ಸುಖ್ಜಿಂದರ್ ಸಿಂಗ್ ಅವರೇ ಈ ವಿಡಿಯೋವನ್ನು ತನ್ನ ಪತ್ನಿಗೆ ಕಳುಹಿಸಿದವರಾಗಿದ್ದಾರೆ.

Advertisement

ತನ್ನ ಪತಿಯ ಸಾವಿನ ದುಃಖದಲ್ಲಿದ್ದ ​​​​​​ಸುಖ್ಜಿಂದರ್ ಅವರ ಪತ್ನಿ ಈ ವಿಡಿಯೋವನ್ನು ಶುಕ್ರವಾರವಷ್ಟೇ ತನ್ನ ಮೊಬೈಲ್ ನಲ್ಲಿ ನೋಡಿದ್ದಾರೆ. ತನ್ನ ಪತ್ನಿಗೆ ಸಿಂಗ್ ಕಳುಹಿಸಿರುವ ವಿಡಿಯೋದಲ್ಲಿ ಅವರು ಪ್ರಯಾಣಿಸುತ್ತಿದ್ದ ಸೇನಾ ವಾಹನದ ಒಳಭಾಗ ಮತ್ತು ಹಿಮಾವೃತ ಹೆದ್ದಾರಿ ಬದಿಯ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಆದರೆ ದುರದೃಷ್ಟವೆಂದರೆ ಸಿಂಗ್ ಅವರ ಪತ್ನಿ ಈ ವಿಡೀಯೊವನ್ನು ನೋಡುವ ಮುಂಚೆಯೇ ತನ್ನ ಪತಿ ಉಗ್ರ ದಾಳಿಯಲ್ಲಿ ಹುತಾತ್ಮರಾದ ಸುದ್ದಿ ಬರಸಿಡಿಲಿನಂತೆ ಎರಗಿತ್ತು. ಆ ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಹುತಾತ್ಮ ಯೋಧನ ಪತ್ನಿ ಶುಕ್ರವಾರವಷ್ಟೇ ತನ್ನ ಮೊಬೈಲ್ ಪರಿಶೀಲಿಸುತ್ತಿರುವ ಸಂದರ್ಭದಲ್ಲಿ ಪತಿ ಕಳುಹಿಸಿದ ಈ ವಿಡಿಯೋವನ್ನು ಅವರು ನೋಡಿದ್ದಾರೆ ಎನ್ನಲಾಗುತ್ತಿದೆ.

ಸುಖ್ಜಿಂದರ್ ಸಿಂಗ್ ಅವರು ಪಂಜಾಬ್ ನವರಾಗಿದ್ದಾರೆ. ಹುತಾತ್ಮ ಯೋಧ ಸಿಂಗ್ ಅವರಿಗೆ ಏಳು ತಿಂಗಳ ಹಿಂದೆಯಷ್ಟೇ ಮಗು ಜನಿಸಿತ್ತು. ಸಿಂಗ್ 2003ರಲ್ಲಿ ತನ್ನ 19ನೇ ವರ್ಷ ಪ್ರಾಯದಲ್ಲಿಯೇ ಸೇನೆಗೆ ಸೇರ್ಪಡೆಗೊಂಡಿದ್ದರು. ಎಂಟು ತಿಂಗಳ ಹಿಂದೆಯಷ್ಟೇ ಸಿಂಗ್ ಅವರಿಗೆ ಹೆಡ್ ಕಾನ್ಸ್ಟೇಬಲ್ ಆಗಿ ಭಡ್ತಿ ಸಿಕ್ಕಿತ್ತು. ಆದರೆ ಇದ್ಯಾವುದನ್ನೂ ಸಂಭ್ರಮಿಸುವ ಸ್ಥಿತಿಯಲ್ಲಿ ಇವತ್ತು ಅವರ ಕುಟುಂಬ ಇಲ್ಲವೆಂಬುದೇ ದುಃಖದ ವಿಷಯ.

Video Courtesy: India Today

Advertisement

Udayavani is now on Telegram. Click here to join our channel and stay updated with the latest news.

Next