ಹೊಸದಿಲ್ಲಿ : ಕನಿಷ್ಠ 40 ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದ ಪುಲ್ವಾಮಾ ಆತ್ಮಾಹುತಿ ಬಾಂಬ್ ದಾಳಿಗೆ ಜೈಶ್ ಉಗ್ರನು ಬಳಸಿದ್ದ ಕೆಂಪು ಇಕೋ ಕಾರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಿಸಿಟಿವಿಯಲ್ಲಿ ದಾಖಲಾಗಿರುವ ಚಿತ್ರಿಕೆಯಲ್ಲಿ ಪತ್ತೆ ಹಚ್ಚಿದೆ.
ಸ್ಫೋಟಕ ತುಂಬಿದ್ದ ಈ ಕೆಂಪು ಇಕೋ ಕಾರನ್ನು ಉಗ್ರ ಆದಿಲ್ ಅಹ್ಮದ್ ದಾರ್ ಚಲಾಯಿಸಿಕೊಂಡು ಬರುತ್ತಿರುವುದು ಸಿಸಿಟಿವಿ ಚಿತ್ರಿಕೆಯಲ್ಲಿ ಕಂಡು ಬಂದಿದೆ.
ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ
ಬಸ್ಸಿಗೆ ಈ ಕೆಂಪು ಕಾರನ್ನು ಉಗ್ರ ಆದಿಲ್ ಢಿಕ್ಕಿ ಹೊಡೆಸುವ ಸ್ವಲ್ಪ ಹೊತ್ತಿಗೆ ಮೊದಲಿನ ದೃಶ್ಯಾವಳಿ ಈ ಸಿಸಿಟಿವಿ ವಿಡಿಯೋ ಚಿತ್ರಿಕೆಯಲ್ಲಿ ದಾಖಲಾಗಿದೆ.
ಈ ಚಿತ್ರಿಕೆಯ ಆಧಾರದಲ್ಲಿ ಸ್ಫೋಟಕ್ಕೆ ಬಳಸಲಾಗಿದ್ದ ಈ ಕೆಂಪು ಕಾರಿನ ಮಾಲಕ ಯಾರೆಂಬುದನ್ನು ಎನ್‌ಐಎ ಪತ್ತೆ ಹಚ್ಚಿದೆ. ಆತ್ಮಾಹುತಿ ದಾಳಿ ನಡೆದ ದಿನದಿಂದಲೇ ಆತನು ನಾಪತ್ತೆಯಾಗಿರುವುದು ಕೂಡ ಈಗ ಗೊತ್ತಾಗಿದೆ.
2010-11ರ ಮಾಡೆಲ್‌ನ ಈ ಕಾರನ್ನು ರೀ-ಪೇಂಟ್ ಮಾಡಲಾಗಿದೆ. ಆತ್ಮಾಹುತಿ ದಾಳಿ ನಡೆದ ತಾಣದಲ್ಲಿ ಈ ಕಾರಿನ ಶಾಕರ್‌ಗಳು ಪತ್ತೆಯಾಗಿವೆ. ಅವುಗಳ ಆಧಾರದಲ್ಲಿ ಕಾರಿನ ಮಾಡೆಲ್ ದೃಡಪಟ್ಟಿದೆ ಎಂದು ಮೂಲಗಳು ತಿಳಿಸಿವೆ.