ಇಸ್ಲಾಮಾಬಾದ್ : ‘ಭಾರತವು ಗುರುತು ಹಾಕಿಕೊಟ್ಟಿರುವ 22 ಉಗ್ರ ತಾಣಗಳನ್ನು ನಾವು ಕೂಲಂಕಷವಾಗಿ ಪರಿಶೀಲಿಸಿದ್ದು ಅಲ್ಲೆಲ್ಲೂ ಉಗ್ರ ಶಿಬಿರಗಳು ಕಂಡು ಬಂದಿಲ್ಲ’ ಎಂದು ಪಾಕಿಸ್ಥಾನ ಹೊಸದಿಲ್ಲಿಗೆ ತಿಳಿಸಿದೆ.
‘ನಿಮ್ಮ ಕೋರಿಕೆಯ ಮೇರೆಗೆ ನೀವೇ ಗುರತಿಸಿಕೊಟ್ಟಿರುವ ಉಗ್ರ ತಾಣಗಳ ಪರಿಶೀಲನೆಗೆ ನಾವು ಅವಕಾಶವನ್ನು ಕಲ್ಪಿಸುತ್ತೇವೆ; ನೀವೇ ಇಲ್ಲಿಗೆ ಬಂದು ಆ ತಾಣಗಳನ್ನು ಪರೀಕ್ಷಿಸಬಹುದಾಗಿದೆ’ ಎಂದು ಪಾಕ್ ವಿದೇಶದ ಕಾರ್ಯಾಲಯ ಭಾರತಕ್ಕೆ ತಿಳಿಸಿದೆ.
‘ಇದೇ ರೀತಿ ಪುಲ್ವಾಮಾ ಉಗ್ರ ದಾಳಿಗೆ ಸಂಬಂಧಿಸಿ ಹೊಸದಿಲ್ಲಿ ಕೊಟ್ಟಿರುವಂತಹ ಪ್ರಾಥಮಿಕ ಮಾಹಿತಿಯನ್ವಯ ನಾವು ಈಗಾಗಲೇ ಬಂಧಿಸಿರುವ 54 ಮಂದಿಗೂ ಪುಲ್ವಾಮಾ ಉಗ್ರ ದಾಳಿಗೂ ಯಾವುದೇ ಸಂಬಂಧ ಇಲ್ಲದಿರುವುದನ್ನು ನಾವು ತನಿಖೆಯಿಂದ ಕಂಡು ಕೊಂಡಿದ್ದೇವೆ’ ಎಂದು ಪಾಕ್ ವಿದೇಶ ಕಾರ್ಯಾಲಯ ತಿಳಿಸಿದೆ.
‘ಪುಲ್ವಾಮಾ ದಾಳಿಗೆ ಸಂಬಂಧಿಸಿ ನೀವು ಕೊಟ್ಟಿರುವ ಪ್ರಾಥಮಿಕ ಮಾಹಿತಿಗಳನ್ನು ಮತ್ತು ಕೆಲವು ಪ್ರಶ್ನಾವಳಿಗಳನ್ನು ನಾವು ಪರಿಶೀಲಿಸಿದ್ದೇವೆ; ನೀವು ಗುರುತು ಹಾಕಿ ಕೊಟ್ಟಿರುವ ನಮ್ಮಲ್ಲಿನ 22 ತಾಣಗಳಲ್ಲಿ ಯಾವುದೇ ಉಗ್ರ ಶಿಬಿರಗಳು ಇಲ್ಲದಿರುವುದನ್ನು ಮತ್ತು ಪುಲ್ವಾಮಾ ದಾಳಿ ಸಂಬಂಧ ನಾವು ಬಂಧಿಸಿರುವ 54 ಶಂಕಿತರಿಗೂ ಪುಲ್ವಾಮಾ ದಾಳಿಗೂ ಯಾವುದೇ ನಂಟು ಇಲ್ಲದಿರುವುದನ್ನು ತನಿಖೆಯಿಂದ ಕಂಡುಕೊಂಡಿದ್ದೇವೆ. ನಿಮ್ಮ ದಾಖಲೆ ಪತ್ರಗಳಲ್ಲಿ ಉಲ್ಲೇಖೀಸಲಾಗಿರುವ ಸಾಮಾಜಿಕ ಮಾಧ್ಯಮಗಳ ಹೂರಣ ಮತ್ತು ತಾಂತ್ರಿಕ ಅಂಶಗಳ ಆಧಾರದಲ್ಲೂ ನಾವು ತನಿಖೆ ನಡೆಸಿದ್ದೇವೆ; ಈ ಎಲ್ಲ ವಿಷಯಗಳನ್ನು ನಾವು ಇಸ್ಲಾಮಾಬಾದ್ ನಲ್ಲಿರುವ ನಿಮ್ಮ ದೂತಾವಾಸದ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದೇವೆ ಎಂದು ಪಾಕ್ ವಿದೇಶ ಕಾರ್ಯಾಲಯ ಹೇಳಿದೆ.
ಕಳೆದ ಫೆ.14ರಂದು 40 ಸಿಆರ್‌ಪಿಎಫ್ ಯೋಧರನ್ನು ಬಲಿಪಡೆಯಲಾದ ಪುಲ್ವಾಮಾ ಉಗ್ರ ದಾಳಿಯನ್ನು ಅನುಸರಿಸಿ ಭಾರತ ಆರು ಭಾಗಗಳಿರುವ 91 ಪುಟಗಳ ತನಿಖೆ ಕಡತವನ್ನು ಪಾಕಿಸ್ಥಾನಕ್ಕೆ “ಉಗ್ರ ನಿಗ್ರಹ ಕ್ರಮ’ಕ್ಕಾಗಿ ಒಪ್ಪಿಸಿತ್ತು.
‘ಪುಲ್ವಾಮಾ ಸಂಬಂಧಿತ ನಿಮ್ಮ ಕಡತದ ಭಾಗ 2 ಮತ್ತು 3 ಮಾತ್ರವೇ ಪುಲ್ವಾಮಾ ದಾಳಿಗೆ ಸಂಬಂಧಿಸಿದ್ದಾಗಿದ್ದು ಉಳಿದ ಭಾಗಗಳು, ಭಯೋತ್ಪಾದನೆ ಕುರಿತ ಸಾಮಾನ್ಯ ಅಭಿಪ್ರಾಯಗಳನ್ನು ಒಳಗೊಂಡಿವೆ’ ಎಂದು ಪಾಕ್ ವಿದೇಶ ಕಾರ್ಯಾಲಯ ಭಾರತಕ್ಕೆ ಹೇಳಿದೆ.