ಕೋಲಾರ: ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜನವರಿ 28 ರಂದು ಮೊದಲ ಸುತ್ತಿನ ಹಾಗೂ ಮಾರ್ಚ್ 11 ರಂದು ಎರಡನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಲತಾ ಪ್ರಮಿಳಾ ತಿಳಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಮೊದಲ ಸುತ್ತಿನ ಕಾರ್ಯಕ್ರಮದ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಸಹಭಾಗಿತ್ವ ಅತ್ಯಗತ್ಯ: ಕಾರ್ಯಕ್ರಮದ ಯಶಸ್ಸಿಗೆ ಶಿಕ್ಷಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಸಾರಿಗೆ, ಎನ್ ಜಿಒಗಳು,ರೋಟರಿ ಮುಂತಾದ ಸಂಸ್ಥೆಗಳ ಸಹಭಾಗಿತ್ವ ಅತ್ಯಗತ್ಯ ಎಂದು ತಿಳಿಸಿದರು.
ಪ್ರತಿ ಶನಿವಾರ ಶಾಲೆಗಳಿಂದ ಜಾಥಾ: ಕಾರ್ಯಕ್ರಮದ ಬಗ್ಗೆ ಪ್ರಚಾರ ನೀಡಲು ಪ್ರತಿ ಶನಿವಾರ ಶಾಲೆಗಳಿಂದ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಗ್ರಾಮ ಪಂಚಾಯಿತಿಗಳು ಭಿತ್ತಿ ಪತ್ರಗಳು, ಕರಪತ್ರಗಳನ್ನು ಹಂಚಬೇಕು. ಚರ್ಚ್‌ಗಳು,ಮಸೀದಿಗಳ ಮೂಲಕ ಮೈಕ್‌ನಲ್ಲಿ ಪ್ರಚಾರ ನಡೆಸಲಾಗುವುದು. ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಸಭೆ ನಡೆಸಿ ಬೂತ್ ಮಟ್ಟದಲ್ಲಿ ಅವರಿಂದ ಚಾಲನೆ ನೀಡಬೇಕು. ಲಸಿಕೆ ನೀಡುವ ದಿನಗಳಂದು ಶಾಲೆಗಳು ತೆರೆದಿರಬೇಕೆಂದು ಮಾಹಿತಿ ನೀಡಿದರು.
ಜಂತುಹುಳು ನಿವಾರಣಾ ಮಾತ್ರೆ: ರಾಷ್ಟ್ರೀಯ ಜಂತುಹುಳು ನಿವಾರಣಾ ಮಾತ್ರೆಯನ್ನು ಫೆಬ್ರವರಿ 12 ರಂದು ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲಾ ಮಕ್ಕಳಿಗೆ ನೀಡಬೇಕು. ಚಿಕ್ಕ ಮಕ್ಕಳಿಗೆ ಅರ್ಧ ಮಾತ್ರೆ ಹಾಗೂ 2 ರಿಂದ 19 ವರ್ಷದವರೆಗಿನವರಿಗೆ 1 ಮಾತ್ರೆ ನೀಡಬೇಕೆಂದರು.
30ಕ್ಕೆ ಲೆಪ್ರಸಿ ಚಿಕಿತ್ಸೆ: ಜನವರಿ 30 ರಂದು ಲೆಪ್ರಸಿ ಚಿಕಿತ್ಸೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಲೆಪ್ರಸಿ ಕಾಯಿಲೆಯಿಂದ ಗುಣಮುಖರಾದವರಿಗೆ ವಿಕಲ ಚೇತನರಿಗೆ ದೊರೆಯುವ ಎಲ್ಲಾ ಸೌಲಭ್ಯಗಳು ಸರ್ಕಾರದಿಂದ ದೊರೆಯುತ್ತವೆ ಎಂದು ತಿಳಿಸಿದರು.
ಮತದಾನದ ಕುರಿತೂ ಪ್ರಚಾರ ಮಾಡಿ: ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ಪ್ರಚಾರ ಮಾಡುವಾಗ ಮತದಾನದ ಮಹತ್ವದ ಕುರಿತು ಹೆಚ್ಚಿನ ಪ್ರಚಾರ ಮಾಡಬೇಕು. ಕಾರ್ಯಕ್ರಮಕ್ಕೆ ಬಳಸುವ ಪ್ರತಿ ಬ್ಯಾನರ್‌ನಲ್ಲಿ ಮತದಾನದ ಬಗ್ಗೆ ಘೋಷಣೆಗಳು ಇರಬೇಕು. ಚುನಾವಣಾ ಶಾಖೆಯಿಂದ ಮತದಾನದ ಬಗ್ಗೆ ಇರುವ ಭಿತ್ತಿ ಪತ್ರಗಳು, ಕರಪತ್ರಗಳನ್ನು ಬಳಸಿಕೊಂಡು ವ್ಯಾಪಕ ಪ್ರಚಾರ ನೀಡಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ತಿಳಿಸಲಾಯಿತು. ಸಭೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಗಳು, ಆರೋಗ್ಯಾಧಿಕಾರಿಗಳು, ಸಿಆರ್‌ಪಿಗಳು,ನಗರಸಭೆ ಅಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದ.