ಬೀಜಿಂಗ್ : ಭಾರತ ಯಾವುದೇ ಶರತ್ತುಗಳನ್ನು ಒಡ್ಡದೇ ವಿವಾದಿತ ಡೋಕ್‌ಲಾಂ ಪ್ರದೇಶದಿಂದ ತನ್ನ ಸೇನೆಯನ್ನು ಈ ಕೂಡಲೇ ಹಿಂದೆಗೆದುಕೊಳ್ಳಬೇಕು ಎಂದು ಚೀನ ಇಂದು ಬುಧವಾರ ಮತ್ತೆ ಹೊಸ ಎಚ್ಚರಿಕೆಯನ್ನು ನೀಡಿದೆ.
ಸಿಕ್ಕಿಂ ಗಡಿಯಲ್ಲಿನ ಡೋಕ್‌ಲಾಂ ಟ್ರೈ ನೇಶನ್ ಜಂಕ್ಷನ್ ಪ್ರದೇಶವು ತನ್ನದೆಂದು ಚೀನ ಹೇಳಿಕೊಂಡಿದೆ. ಅದೇ ವೇಳೆ ಭೂತಾನ್, ಡೋಕ್‌ಲಾಂ ತನಗೆ ಸೇರಿದ್ದೆಂದು ಹೇಳಿ ಚೀನಕ್ಕೆ ಪ್ರತಿಭಟನೆ ಸಲ್ಲಿಸಿದೆ.
ತನ್ನ ಮತ್ತು ಭೂತಾನ್ ಭದ್ರತೆಗೆ ಬದ್ಧನಾಗಿರುವ ಭಾರತ, ಡೋಕ್‌ಲಾಂ ನಲ್ಲಿ ಚೀನ ಸೇನೆಯ ರಸ್ತೆ ನಿರ್ಮಾಣ ಕಾರ್ಯವನ್ನು ತಡೆದಿದೆ. ಅಲ್ಲಿಯ ಬಳಿಕ ಕಳೆದ ಜೂನ್ 16ರಿಂದ ಡೋಕ್‌ಲಾಂ ನಲ್ಲಿ ಭಾರತ – ಚೀನ ಸೇನೆಯ ಮುಖಾಮುಖೀ ಇಂದಿನ ವರೆಗೂ ಮುಂದುವರಿದಿದೆ.
ಭಾರತ ಮತ್ತು ಚೀನ ಪರಸ್ಪರ 3,488 ಕಿ.ಮೀ.ಉದ್ದದ ಗಡಿಯನ್ನು ಹೊಂದಿದ್ದು ಇದರಲ್ಲಿ 220 ಕಿ.ಮೀ. ಭಾಗವು ಸಿಕ್ಕಿಂ ಪ್ರದೇಶದಲ್ಲಿದೆ.
ಕಳೆದ ಜು.28ರಂದು ಬ್ರಿಕ್ಸ್ ಎನ್‌ಎಸ್‌ಎಗಳ ಸಮಾವೇಶದಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್ ಅವರು ಚೀನದ ಸಮಾನಾಧಿಕಾರಿ ಯಾಂಗ್ ಜೇಶೀ ಅವರೊಂದಿಗೆ ಮೊದಲ ಬಾರಿಗೆ ಮಾತುಕತೆ ನಡೆಸಿದ್ದರು.
ಈ ಮಾತುಕತೆಯ ವಿವರಗಳನ್ನು ನೀಡಿರುವ ಚೀನದ ವಿದೇಶ ಸಚಿವಾಲಯ, ಉಭಯ ಅಧಿಕಾರಿಗಳು ಬ್ರಿಕ್ಸ್ ಸಹಕಾರ, ದ್ವಿಪಕ್ಷೀಯ ಸಂಬಂಧ ಮತ್ತು ಉಭಯ ರಾಷ್ಟ್ರಗಳ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು ಎಂದು ತಿಳಿಸಿದೆ.