Advertisement

Pudu ಗ್ರಾಮದ ಪುರಾತನ ಫರಂಗಿ ಕೆರೆ; ನರೇಗಾದಲ್ಲಿ ಪ್ರಯತ್ನಿಸಿದರೂ ಕೈಗೂಡದ ಅಭಿವೃದ್ಧಿ ಕಾರ್ಯ

12:05 AM May 22, 2024 | Team Udayavani |

ಬಂಟ್ವಾಳ: ಒಂದು ಕಾಲದಲ್ಲಿ ಹತ್ತಾರು ಎಕರೆ ಗದ್ದೆಗಳಿಗೆ ನೀರಿನಾಶ್ರಯವಾಗಿದ್ದ ಪುದು ಗ್ರಾಮದ ತೇವು ಎಂಬಲ್ಲಿರುವ ಫರಂಗಿ ಕೆರೆಯು ಹತ್ತಾರು ವರ್ಷಗಳಿಂದ ಪಾಳು ಬಿದ್ದಂತಿದೆ. ಕಳೆದೆರಡು ವರ್ಷಗಳ ಹಿಂದೆ ನರೇಗಾ ಯೋಜನೆ ಮೂಲಕ ಕೆರೆಯ ಅಭಿವೃದ್ಧಿಗೆ ಪ್ರಯತ್ನಿಸಿದರೂ ಪೂರ್ಣ ಪ್ರಮಾಣದ ಅಭಿವೃದ್ಧಿ ಸಾಧ್ಯವಾಗಿಲ್ಲ.
ಸುಮಾರು 40 ಸೆಂಟ್ಸ್‌ನಲ್ಲಿ “ಫರಂಗಿ ಕೆರೆ’ ವಿಸ್ತರಿಸಿಕೊಂಡಿದೆ.

Advertisement

ಫರಂಗಿಪೇಟೆಯ ಸಮೀಪವಿರುವ ಕಾರಣ ಈ ಹೆಸರು ಬಂತೇ ಅಥವಾ ಬ್ರಿಟಿಷರಿಗೂ ಈ ಕೆರೆಗೂ ಸಂಬಂಧವಿತ್ತೇ ಎಂಬ ಕುರಿತು ದಾಖಲೆಗಳಿಲ್ಲ.

ತೇವು ಭಾಗದ ಹಲವಾರು ರೈತರೇ ಕೆರೆಯನ್ನು ನಿರ್ವಹಣೆ ಮಾಡಿಕೊಂಡು ಕೃಷಿಕರ ಗದ್ದೆಗಳಿಗೆ ಕೃಷಿಗೆ ನೀರನ್ನು ಬಳಸುತ್ತಿದ್ದರು. ಸಾಧಾರಣ ಫೆಬ್ರವರಿವರೆಗೂ ನೀರು ಬಳಕೆಗೆ ಸಿಗುತ್ತಿತ್ತು. ಕೆರೆಯ ಮಧ್ಯದಲ್ಲಿ ಹೊಂಡವೊಂದಿದ್ದು, ಅಲ್ಲಿ ಕೊನೆಯವರೆಗೂ ನೀರು ಇರುತ್ತಿತ್ತು. ಆದರೆ ಈಗ ಅಲ್ಲಿ ಸಂಪೂರ್ಣ ಹೂಳು ತುಂಬಿ ಹೊಂಡ ಮಾಯವಾಗಿದೆ. ಒಟ್ಟಿನಲ್ಲಿ ಕೆರೆಯ ರೂಪವೇ ಬದಲಾಗಿ ಸಮತಟ್ಟಾಗಿದೆ.

ಕೆರೆಯ ಸುತ್ತ ಕಲ್ಲಿನ ಕಟ್ಟಗಳ ಕುರುಹು ಇಗಲೂ ಇದೆ. ಒಂದು ಭಾಗದಲ್ಲಿ ಪೈಪು ಹಾಕಿರುವ ಕುರುಹು ಕೂಡ ಇದ್ದು, ಅದೇ ಪೈಪಿನಲ್ಲಿ ನೀರು ಹೋಗಿ ಬಳಿಕ ಕಣಿಯ (ಚರಂಡಿ) ಮೂಲಕ ನೀರು ಹರಿಯುತ್ತಿತ್ತು ಎನ್ನಲಾಗಿದೆ.

ಅಭಿವೃದ್ಧಿಗೆ ಪ್ರಯತ್ನ
ಬಂಟ್ವಾಳ ತಾ.ಪಂ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೂಲಕ ಪುದು ಗ್ರಾ.ಪಂ. ಸಹಯೋಗದಲ್ಲಿ ಅಮೃತ ಸರೋವರ ಕೆರೆ ಪುನಶ್ಚೇತನ ಯೋಜನೆಯಲ್ಲಿ ಸುಮಾರು 3.95 ಲಕ್ಷ ರೂ. ಯೋಜನೆಯಲ್ಲಿ 245 ಮಾನವ ದಿನಗಳ ಕೂಲಿಯಲ್ಲಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿದ್ದರೂ ಕೆರೆಯನ್ನು ಪೂರ್ತಿ ಅಭಿವೃದ್ಧಿಗೊಳಿಸಲು ಸಾಧ್ಯವಾಗಿಲ್ಲ. ಅಂದರೆ ಕೆರೆಯ ತಳ ಭಾಗದಲ್ಲಿ ಕಲ್ಲುಗಳನ್ನು ಇರುವುದರಿಂದ ಮಾನವ ಕೂಲಿಯಿಂದ ಅದನ್ನು ತೆರವು ಮಾಡುವುದು ಅಸಾಧ್ಯವಾಗಿ ಅಭಿವೃದ್ಧಿ ಕಾರ್ಯ ಅರ್ಧಕ್ಕೆ ನಿಂತಿದೆ. ಪ್ರಸ್ತುತ ಪುದು ಗ್ರಾ.ಪಂ.ನಿಂದ 15ನೇ ಹಣಕಾಸು ಯೋಜನೆಯಲ್ಲಿ 1 ಲಕ್ಷ ರೂ. ಅಭಿವೃದ್ಧಿಗೆ ಮೀಸಲಿರಿಸಲಾಗಿದ್ದು, ಮುಂದೆ 2024-25ನೇ ಸಾಲಿನಲ್ಲಿ ಮತ್ತೆ ಅನುದಾನ ಇರಿಸಿ ಕೆರೆಯನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಮಾಡುವ ಯೋಜನೆ ರೂಪಿಸಲಾಗಿದೆ. ಹೂಳನ್ನು ತೆಗೆದು ತಳದಲ್ಲಿರುವ ಪಾದೆಯನ್ನು ತೆರವುಗೊಳಿಸಿ ಆಳ ಮಾಡಿದರೆ ಬೇಸಗೆಯಲ್ಲೂ ನೀರಿರುವ ಸಾಧ್ಯತೆ ಇದೆ. ಅಂತರ್ಜಲ ವೃದ್ಧಿಗೆ ಇದು ಸಹಕಾರಿಯಾಗಲಿದೆ.

Advertisement

ಅನುದಾನ ಮೀಸಲು
ಕೆರೆಯನ್ನು ಅಭಿವೃದ್ಧಿ ಮಾಡುವ ದೃಷ್ಟಿಯಿಂದ ನರೇಗಾ ಮೂಲಕ ಪ್ರಯತ್ನ ಮಾಡಲಾಗಿದ್ದು, ತಳ ಭಾಗದಲ್ಲಿ ಕಲ್ಲು ಇರುವ ಕಾರಣ ಅದನ್ನು ಹುಡಿ ಮಾಡಿ ತೆಗೆಯಬೇಕಿದೆ. ಹೀಗಾಗಿ 15ನೇ ಹಣಕಾಸು ಯೋಜನೆಯಲ್ಲಿ 1 ಲಕ್ಷ ರೂ. ಅನುದಾನ ಇರಿಸಲಾಗಿದ್ದು, ಮುಂದೆ ಮತ್ತೆ ಅನುದಾನ ಇರಿಸಿ ಕೆರೆಯನ್ನು ಅಭಿವೃದ್ಧಿ ಮಾಡುವ ಯೋಜನೆ ಇದೆ.
– ಹರೀಶ್‌ ಕೆ.ಎ.,
ಪುದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ

ಬಳಕೆ ಕ್ಷೀಣಿಸಿ ಹೂಳು ತುಂಬಿದೆ
ಹತ್ತಾರು ವರ್ಷಗಳ ಹಿಂದೆ ತೇವು ಭಾಗದ ಹಲವಾರು ಗದ್ದೆಗಳಿಗೆ ಅದೇ ಕೆರೆಯ ನೀರು ಹರಿದು ಬರುತ್ತಿದ್ದು, ನಮ್ಮ ಗದ್ದೆಗೂ ಅದನ್ನು ಉಪಯೋಗ ಮಾಡಿದ್ದೇವೆ. ಸುಗ್ಗಿ ಬೇಸಾಯದವರೆಗೆ ಕೆರೆಯ ನೀರು ಲಭಿಸುತ್ತಿತ್ತು. ಅದರ ಬಳಕೆ ಕಡಿಮೆಯಾದ ಬಳಿಕ ಹೂಳು ತುಂಬಿ ನೀರು ಕೂಡ ಇಲ್ಲವಾಗಿದೆ.
– ವಿಶ್ವನಾಥ ಶೆಟ್ಟಿ ತೇವು,
ಸ್ಥಳೀಯ ಕೃಷಿಕ

-  ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next