Advertisement

ಪುದಿನ ಆದಾಯ ಪ್ರತಿದಿನ

12:15 PM Jul 02, 2018 | Harsha Rao |

ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಗಂಗನಹಳ್ಳಿಯಲ್ಲಿ ಶೇ.90 ರಷ್ಟು ಜನ ಜೀವನೋಪಾಯಕ್ಕಾಗಿ ಸೊಪ್ಪು ಬೆಳೆಯನ್ನೇ ನಂಬಿಕೊಂಡಿದ್ದಾರೆ. ಇವರ ಮಧ್ಯೆ ಯಶವಂತ ಕುಮಾರ್‌  ಎಂಬ ಯುವಕ ಸ್ವಲ್ಪ ಭಿನ್ನ ಎನಿಸುತ್ತಾರೆ.

Advertisement

ಏಕೆಂದರೆ, ತಮಗಿರುವ ಚಿಕ್ಕ ಜಮೀನಿನಲ್ಲಿ ಅವರು ಪುದೀನವನ್ನು ಪ್ರಧಾನವಾಗಿ ಬೆಳೆಯುತ್ತಿದ್ದಾರೆ. ಜೊತೆಗೆ ಕೊತ್ತಂಬರಿ, ಮೆಂತ್ಯ, ಪಾಲಕ್‌, ಬಸಳೆ, ದಂಟು, ಅರಿವೆ, ಹೀಗೆ ಹಲವಾರು ರೀತಿಯ ಸೊಪ್ಪುಗಳೂ ಇವೆ. ಐದು ವರ್ಷಗಳಿಂದ ಈ ಬೇಸಾಯದಲ್ಲಿ ತೊಡಗಿರುವ ಯಶವಂತ್‌ ತನ್ನಲ್ಲಿರುವ ಒಂದು ಎಕರೆ ಜಮೀನಿನನ್ನು ಸೊಪ್ಪಿನ ಬೆಳೆಗಾಗಿಯೇ  ತೆರೆದಿಟ್ಟಿದ್ದಾರೆ.

ಇವರು ಪುದಿನ ಬೆಳೆಯಲು ಕಾರಣವೂ ಇದೆ.  ಇದಕ್ಕೆ ದೊಡ್ಡ ಪ್ರಮಾಣದ ಹೂಡಿಕೆ ಬೇಕಿಲ್ಲ. ಜೊತೆಗೆ ಒಣ ಭೂಮಿಗೆ ಸರಿ ಹೊಂದುವ ಬೇಸಾಯ ಇದು. ನೀರಿನ ಪ್ರಮಾಣ ಕಡಿಮೆ ಇದ್ದರೂ ಇದನ್ನು ಬೆಳೆಯ ಬಹುದು ಅನ್ನೋದು ದೊಡ್ಡ ಪ್ಲಸ್‌ ಪಾಯಿಂಟ್‌.

ಬೆಳೆ ತೆಗೆಯುವುದು ಹೇಗೆ?
ಹಸನಾದ ಭೂಮಿಗೆ  ನೀರು ಹರಿಸಲು ಸುಲಭವಾಗುವ ರೀತಿ ಚಿಕ್ಕ ಚಿಕ್ಕ ಮಡಿಗಳನ್ನು ನಿರ್ಮಿಸಬೇಕು. ನಂತರ ಹೊಂಗೆ ಇಂಡಿ, ಸಗಣಿ ಹಾಗೂ ಸ್ವಲ್ಪ ಪ್ರಮಾಣದ ರಾಸಾಯನಿಕ ಗೊಬ್ಬರಗಳನ್ನು (ಡಿ.ಎ.ಪಿ ಹಾಕಿದರೆ ಉತ್ತಮ) ಹಾಕಿ ಪುದಿನ ಸಸಿಗಳ ಬೇರುಗಳನ್ನು ನೆಡಬೇಕು. ಬಿಸಿಲು ಹೆಚ್ಚಿದ್ದರೆ ಮೂರು ನಾಲ್ಕು ದಿನಗಳಿಗೊಮ್ಮೆ ನೀರುಣಿಸಿದರೆ ಉತ್ತಮ. ನಾಟಿ ಮಾಡಿದ ತಿಂಗಳಿಗೆ ಚಿಗುರುತ್ತದೆ. ನಂತರ ತಿಂಗಳೊಳಗಾಗಿ ಸೊಪ್ಪು ಮಾರಾಟಕ್ಕೆ ಸಿದ್ಧವಾಗುತ್ತದೆ. ಎಲೆಗಳಲ್ಲಿ ತೂತು ಅಥವಾ ಇನ್ಯಾವುದೇ ರೋಗಗಳು ಕಂಡುಬಂದರೆ ವಾತಾವರಣಕ್ಕೆ ಹೊಂದಿಕೊಳ್ಳುವ ಔಷಧವನ್ನು ಸಿಂಪಡಿಸಿದರೆ ಸಾಕು.

ಮಾರುಕಟ್ಟೆ
ಯಶವಂತರ ಪುದಿನ ಸೊಪ್ಪಿನ ಮಾರುಕಟ್ಟೆ ಶಿರಾ ಹಾಗೂ ಅಲ್ಲಿ ಪ್ರತಿ ಮಂಗಳವಾರ ನಡೆಯುವ ಸಂತೆಯೇ ಆಗಿದೆ.
ಇವರು ಸೊಪ್ಪನ್ನು ಕೆ.ಜಿ ಲೆಕ್ಕದಲ್ಲಿ ಹಾಗೂ ಕಟ್ಟುಗಳ ರೀತಿಯಲ್ಲಿ ಮಾರಾಟ ಮಾಡುತ್ತಾರೆ.  ಪ್ರತಿ ದಿನ ಕಟ್ಟಿಗೆ ನಾಲ್ಕು ರೂ.ನಂತೆ ಹೆಚ್ಚು ಕಮ್ಮಿ 300 ಕಟ್ಟುಗಳನ್ನು ಮಾರುತ್ತಾರೆ. ಅಂದರೆ ಒಂದು ದಿನಕ್ಕೆ ಪುದಿನಾ ಸೊಪ್ಪಿನ ಮಾರಾಟದಿಂದಲೇ  1,200 ರೂ. ಆದಾಯ.  ಯಶವಂತರ ಬಳಿ ಟಿ.ವಿ.ಎಸ್‌ ಎಕ್ಸೆಲ್‌ ವಾಹನವಿರುವುದರಿಂದ ಸುಲಭವಾಗಿ ಪುದಿನ ಸೊಪ್ಪಿನ ಗಂಟುಗಳನ್ನು ಮಾರಾಟ ಮಾಡುತ್ತಾರೆ. ” ಮನೆಯಲ್ಲಿ ನಾಲ್ಕು ಜನ  ಸದಸ್ಯರು ಇದ್ದಾರೆ.  ಪ್ರತಿ ದಿನ ಮಧ್ಯಾಹ್ನದಿಂದ ಸಂಜೆಯವರೆಗೂ ಸೊಪ್ಪು ಕೊಯ್ದು, ತೊಳೆದು ನಂತರ ಗಂಟುಗಳನ್ನು ಮಾಡುತ್ತಾರೆ.  ಅದನ್ನು ನಾನು ಮುಂಜಾನೆ ಮಾರುಕಟ್ಟೆಗೆ ಹಾಕುತ್ತೇನೆ’ ಎನ್ನುತ್ತಾರೆ ಯಶವಂತ್‌.  

Advertisement

– ಗಿರೀಶ ಗಂಗನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next