ರಾಯಚೂರು: ತಾಲೂಕು ಕೇಂದ್ರವಾಗಬೇಕು ಎಂಬ ಮಹತ್ವದ ಬೇಡಿಕೆಯುಳ್ಳ ಹೋಬಳಿ ಕೇಂದ್ರ ಗಬ್ಬೂರಿನಲ್ಲಿ ಸಮಸ್ಯೆಯೊಂದು ಬಗೆ ಹರಿಯದೆ ಉಳಿದಿದೆ. ರಾಯಚೂರು-ಕಲಬುರಗಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಹೆದ್ದಾರಿಯಲ್ಲೇ ಚರಂಡಿ ನೀರು ಶೇಖರಣೆಯಾಗುತ್ತಿದ್ದು, ಸಾರ್ವಜನಿಕರಿಗೆ ಕಂಟಕವಾಗಿ ಪರಿಣಮಿಸಿದೆ.
ದೇವದುರ್ಗ ಕ್ಷೇತ್ರಕ್ಕೆ ಒಳಪಡುವ ಈ ಊರಿನ ಸಮಸ್ಯೆ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಮೇಲ್ನೋಟಕ್ಕೆ ಇದು ಸಂಪೂರ್ಣ ಅವೈಜ್ಞಾನಿಕ ಕಾಮಗಾರಿಯಿಂದಾದ ಸಮಸ್ಯೆ. ಗ್ರಾಪಂ ಕೇಂದ್ರವಾಗಿರುವ ಈ ಊರಿನಲ್ಲಿ ಸಮಸ್ಯೆಯೊಂದು ತಿಂಗಳಾನುಗಟ್ಟಲೇ ಜೀವಂತವಾಗಿರುವುದು ವಿಪರ್ಯಾಸ. ಇದು ರಾಜ್ಯ ಹೆದ್ದಾರಿಯಾಗಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುವುದರಿಂದ ಸಮಸ್ಯೆ ತೀವ್ರತೆ ಹೆಚ್ಚಾಗುತ್ತಿದೆ. ಏನಿದು ಸಮಸ್ಯೆ?: ಸುಮಾರು 15 ವರ್ಷಗಳ ಹಿಂದೆ ಇಲ್ಲಿ ಚರಂಡಿ ನಿರ್ಮಿಸಲಾಗಿತ್ತು.
ಆಗ ಈ ಊರು ನಿರೀಕ್ಷಿತ ಮಟ್ಟದಲ್ಲಿ ಬೆಳೆದಿರಲಿಲ್ಲ. ಈಗ ತಾಲೂಕು ಕೇಂದ್ರವಾಗುವ ಮಟ್ಟಿಗೆ ಬೆಳೆದಿದ್ದು, ಜನಸಂಖ್ಯೆ, ಗ್ರಾಮದ ವಿಸ್ತಾರ ಕೂಡ ಹೆಚ್ಚಾಗಿದೆ. ಖಾಸಗಿಯವರ ಜಮೀನಿಗೆ ಚರಂಡಿ ಕಾಮಗಾರಿ ಕೊನೆಗಾಣಿಸಲಾಗಿತ್ತು. ಆದರೆ, ಈಗ ಆ ಜಮೀನಿನ ಮಾಲೀಕರು ಚರಂಡಿ ನೀರು ಹೊಲಕ್ಕೆ ಹರಿಸದಂತೆ ಆಕ್ಷೇಪ ವ್ಯಕ್ತಪಡಿಸಿದ್ದು, ಅಡ್ಡಗಟ್ಟಿದ್ದಾರೆ. ಬರೀ ಮಳೆ ನೀರಾದರೆ ಜಮೀನಿಗೆ ಹರಿಸಲು ಅಭ್ಯಂತರವಿಲ್ಲ. ಆದರೆ, ಕೊಚ್ಚೆ ನೀರು ಜಮೀನಿಗೆ ಬಿಟ್ಟುಕೊಳ್ಳುವುದು ಹೇಗೆ ಎಂಬುದು ಜಮೀನಿನ ಮಾಲೀಕರ ಆಕ್ಷೇಪ.
ಅಲ್ಲದೇ, ಇದೇ ಸ್ಥಳದಲ್ಲೇ ಕಾಲುವೆ ಹಾದು ಹೋಗಿದ್ದು, ಕಾಲುವೆಗೆ ಹರಿಸಿದರೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶೀಘ್ರ ಇತ್ಯರ್ಥಗೊಳ್ಳಬೇಕಿದೆ: ಸಮಸ್ಯೆ ದಿನೇ-ದಿನೇ ಜಟಿಲಗೊಳ್ಳುತ್ತ ಸಾಗುತ್ತಿದೆ. ಗ್ರಾಮಸ್ಥರು ಈ ಸಮಸ್ಯೆ ಬಗ್ಗೆ ಈಗಾಗಲೇ ಸಂಬಂಧಿ ಸಿದ ಇಲಾಖೆಗಳ ಅ ಧಿಕಾರಿಗಳಿಗೆ ತಿಳಿಸಿದ್ದಾರೆ. ಅಧಿ ಕಾರಿಗಳು ಕೂಡ ಸ್ಥಳ ಪರಿಶೀಲಿಸಿದ್ದು, ಮುಂದಿನ ಕ್ರಮಗಳ ಭರವಸೆ ನೀಡಿದ್ದಾರೆ. ಆದರೆ, ತಿಂಗಳುಗಳೇ ಕಳೆದರೂ ಯಾವೊಂದು ಬೆಳವಣಿಗೆ ಕಂಡು ಬರುತ್ತಿಲ್ಲ.
ಈ ರಸ್ತೆ ಮುಖ್ಯ ವಾಣಿಜ್ಯಕ ತಾಣವಾಗಿದ್ದು, ಹೋಟೆಲ್‌ಗಳು, ವಾಣಿಜ್ಯ ಮಳಿಗೆಗಳು, ಬೃಹತ್ ದೇವಸ್ಥಾನ, ಮನೆಗಳ ಮಾಲೀಕರು ಇದೇ ಚರಂಡಿಗೆ ನೀರು ಹರಿಸುತ್ತಿದ್ದಾರೆ. ಎಲ್ಲ ನೀರು ರಸ್ತೆಯಲ್ಲೇ ನಿಂತ ಕಾರಣ ಫುಟಪಾತ್ ಕೂಡ ಮುಳುಗಿ ಓಡಾಡುವುದು ಕಷ್ಟವಾಗುತ್ತಿದೆ. ಕೊಚ್ಚೆ ನೀರಿನಲ್ಲಿ ಜನ ವ್ಯಾಪಾರ ಮಾಡಲು ಬಾರದ ಕಾರಣ ವರ್ತಕರಿಗೆ ನಷ್ಟವಾಗುತ್ತಿದೆ. ಹೆದ್ದಾರಿಯೆಲ್ಲ ಹಾಳಾಗಿ ಹೋಗಿದೆ. ಈ ಮಾರ್ಗದಿಂದ 3-4 ಕಿ.ಮೀ. ದೂರದಲ್ಲಿ ಹಳ್ಳ ಹರಿಯುತ್ತಿದ್ದು, ಅಲ್ಲಿಗೆ ಸಂಪರ್ಕ ಕಲ್ಪಿಸಲಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, ಅದು ಎಷ್ಟರ ಮಟ್ಟಿಗೆ ಸಾಧ್ಯವಾಗಲಿದೆಯೋ ನೊಡಬೇಕಿದೆ.