Advertisement

ಮುಕ್ತ ಪದವಿಗೆ ಪಿಯುಸಿ ಅಂಕಪಟ್ಟಿ ಕಡ್ಡಾಯ

06:00 AM Sep 21, 2018 | Team Udayavani |

ಬೆಂಗಳೂರು : ವಿಶ್ವವಿದ್ಯಾಲಯದ ಅನುದಾನ ಆಯೋಗ (ಯುಜಿಸಿ) ನೀಡಿರುವ ಅನುಮತಿ ಆಧರಿಸಿ ಹೊಸ ಬದಲಾವಣೆಯೊಂದಿಗೆ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕೆಎಸ್‌ಒಯು) ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪುನಾರಂಭವಾಗಿದ್ದು, ಎಸ್ಸೆಸ್ಸೆಲ್ಸಿ ನಂತರ ನೇರವಾಗಿ ಅಥವಾ ವಯಸ್ಸಿನ ಆಧಾರದಲ್ಲಿ ಸ್ನಾತಕೋತ್ತರ ಪದವಿ ಪ್ರವೇಶ ಇನ್ನು ಮುಂದೆ ಅಸಾಧ್ಯ.

Advertisement

ಮೈಸೂರಿನಲ್ಲಿರುವ ರಾಜ್ಯ ಮುಕ್ತ ವಿಶ್ವವಿದ್ಯಾಲಯ ನೀಡುವ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‌ಗಳು ರಾಜ್ಯದ ವಿಶ್ವವಿದ್ಯಾಲಯಗಳ ಪದವಿ ಕೋರ್ಸ್‌ಗಳಿಗೆ ಸಮನಾಗಿವೆ. ಮುಕ್ತ ವಿವಿ ಪದವಿ, ಸ್ನಾತಕೋತ್ತರ ಪದವಿ ಆಧಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹುದ್ದೆಗಳಿಗೂ ಅರ್ಜಿ ಸಲ್ಲಿಸಬಹುದು. ಈ ಹಿನ್ನೆಲೆಯಲ್ಲಿ ಯುಜಿಸಿ 2017ರ ಜೂನ್‌ 23ರಂದು ಮುಕ್ತ ಮತ್ತು ದೂರ ಶಿಕ್ಷಣ ಕಲಿಕೆಗೆ ಸಂಬಂಧ ಕೆಲವೊಂದು ಬದಲಾವಣೆ ಮಾಡಿದೆ.

ಬೆಂಗಳೂರು, ಮಂಗಳೂರು ಹಾಗೂ ಮೈಸೂರು ಮೊದಲಾದ ವಿಶ್ವವಿದ್ಯಾಲಯಗಳು ಪದವಿ ಕೋರ್ಸ್‌ಗೆ ಪಿಯುಸಿ ಅಥವಾ ತತ್ಸಮಾನ ಕೋರ್ಸ್‌ ಪೂರೈಸಿದವರನ್ನು ಮಾತ್ರ ಪರಿಗಣಿಸುವಂತೆಯೇ ಮುಕ್ತ ವಿವಿಯ ಪದವಿ ಕೋರ್ಸ್‌ಗೂ ಇನ್ಮುಂದೆ ಪಿಯುಸಿ ಹಾಗೂ ತತ್ಸಮಾನ ಕೋರ್ಸ್‌ ಪಾಸಾಗಿರುವುದು ಕಡ್ಡಾಯ. ಅಷ್ಟು ಮಾತ್ರವಲ್ಲ, ಸ್ನಾತಕೋತ್ತರ ಕೋರ್ಸ್‌ಗೆ ಪದವಿ ಪೂರೈಸಿರುವ ಅಂಕಪಟ್ಟಿ ಒದಗಿಸಲೇ ಬೇಕು.

ಹೀಗಾಗಿ ರಾಜ್ಯದ ಮುಕ್ತ ವಿವಿಯಲ್ಲಿ ಎಸ್ಸೆಸ್ಸೆಲ್ಸಿ ಪೂರೈಸಿ ಅಥವಾ ವಯಸ್ಸಿನ ಆಧಾರದಲ್ಲಿ ನೇರವಾಗಿ ಪದವಿ, ಸ್ನಾತಕೋತ್ತರ ಪದವಿ ಪಡೆಯಲು ಸಾಧ್ಯವಿಲ್ಲ. ವಿವಿಯ ಆಡಳಿತ ಮಂಡಳಿ ಕೂಡ ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಿದೆ. ಜತೆಗೆ ಕೌಶಲ ಶಿಕ್ಷಣ ನೀಡಲು ನಿರ್ಧರಿಸಿದೆ.

2013-14 ಹಾಗೂ 2014-15ನೇ ಸಾಲಿನಲ್ಲಿ ರಾಜ್ಯ ಮುಕ್ತ ವಿವಿಯ ವಿವಿಧ ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗೆ ಪ್ರವೇಶ ಪಡೆದಿದ್ದ 95 ಸಾವಿರ ವಿದ್ಯಾರ್ಥಿಗಳ ಭವಿಷ್ಯ ಇನ್ನೂ ಡೋಲಾಯಮಾನವಾಗಿದೆ. ಈ ಎರಡೂ ಸಾಲಿನಲ್ಲಿ ವಿವಿ ನೀಡಿರುವ ಪದವಿ ಅಸಿಂಧು ಎಂದು ಈಗಾಗಲೇ ಯುಜಿಸಿ ಹೇಳಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ವಿವಿಯ ಆಡಳಿತ ಮಂಡಳಿಯ ಅಧಿಕಾರಿಗಳು, ಯುಜಿಸಿ ಅಧಿಕಾರಿಗಳೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದ್ದರಾದರೂ, ಪದವಿ ಊರ್ಜಿತಗೊಳಿಸುವ ಬಗ್ಗೆ ಯಾವುದೇ ನಿರ್ಧಾರ ಯುಜಿಸಿ ತೆಗೆದುಕೊಂಡಿಲ್ಲ.

Advertisement

ಆದರೆ, ರಾಜ್ಯ ಮುಕ್ತ ವಿವಿಯನ್ನು ಪ್ರಸಕ್ತ ಸಾಲಿನಿಂದ ಪುನರ್‌ ಆರಂಭಿಸಲು ಯುಜಿಸಿ ಮಾನ್ಯತೆ ನೀಡಿದೆ. 32 ಕೋರ್ಸ್‌ಗಳ ಪೈಕಿ 17 ಕೋರ್ಸ್‌ಗಳಿಗೆ ಅವಕಾಶ ಮಾಡಿಕೊಟ್ಟಿದೆ. ಉಳಿದ 15 ಕೋರ್ಸ್‌ಗಳನ್ನು ಈ ವರ್ಷದಿಂದಲೇ ಆರಂಭಿಸಲು ವಿವಿಯ ಅಧಿಕಾರಿಗಳು  ಪ್ರಯತ್ನ ನಡೆಸಿದ್ದಾರೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆಗಸ್ಟ್‌ 27ರಿಂದಲೇ ಆರಂಭವಾಗಿತ್ತು. ದಂಡ ಶುಲ್ಕವಿಲ್ಲದೆ ಅರ್ಜಿ ಸಲ್ಲಿಸಲು ಸೆ.20 ಕೊನೆಯ ದಿನವಾಗಿದೆ. ದಂಡ ಶುಲ್ಕ 200 ರೂ. ಪಾವತಿಸಿ ಅ.1ವರೆಗೂ ಅರ್ಜಿ ಸಲ್ಲಿಸಬಹುದು. ಆದರೆ, ಈವರೆಗೆ ಬಂದಿರುವ ಅರ್ಜಿ ಮಾತ್ರ ಬಳಹ ಕಡಿಮೆ. ವಿವಿಯ ಮೂಲಗಳು ಹೇಳುವ ಪ್ರಕಾರ,  ಒಟ್ಟಾರೆಯಾಗಿ 2500ರಿಂದ 3000 ಅರ್ಜಿಗಳು ಈವರೆಗೆ ಬಂದಿರಬಹುದು.

ಪದವಿ ಕೋರ್ಸ್‌ಗಳಾದ ಬಿ.ಎ, ಬಿ.ಕಾಂ., ಬಿ.ಲಿಬ್‌.ಐ.ಎಸ್ಸಿ (ಗ್ರಂಥಾಲಯ ವಿಭಾಗ), ಸ್ನಾತಕೋತ್ತರ ಪದವಿ ಕೋರ್ಸ್‌ಗಳಾದ ಕನ್ನಡ, ಇಂಗ್ಲಿಷ್‌, ಹಿಂದಿ, ಉರ್ದು, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಸಾರ್ವಜನಿಕ ಆಡಳಿತ, ರಾಜ್ಯಶಾಸ್ತ್ರ, ಪತ್ರಿಕೋದ್ಯಮ, ಪ್ರಾಚೀನ ಇತಿಹಾಸ ಮತ್ತು ಪರಾತತ್ವ, ಎಂ.ಕಾಂ, ಎಂಎಸ್ಸಿ ಪರಿಸರ ವಿಜ್ಞಾನ ಹಾಗೂ ಎಂ.ಲಿಬ್‌.ಐ.ಎಸ್ಸಿ(ಗ್ರಂಥಾಲಯ ವಿಭಾಗ) ವಿಭಾಗದ ಕೋರ್ಸ್‌ಗೆ ಯುಜಿಸಿ ಅನುಮೋದನೆ ನೀಡಿದೆ.

ಆತಂಕ ಕಡಿಮೆಯಾಗಿಲ್ಲ
ರಾಜ್ಯ ಮುಕ್ತ ವಿಶ್ವವಿದ್ಯಾಲಯದ 17 ಪ್ರಾದೇಶಿಕ ಕೇಂದ್ರ ಹಾಗೂ 150ಕ್ಕೂ ಅಧಿಕ ಅಧ್ಯಯನ ಕೇಂದ್ರದಲ್ಲಿ ಪ್ರಸಕ್ತ ಸಾಲಿನಿಂದ ವಿವಿಧ ಕೋರ್ಸ್‌ಗಳು ಪುನರಾರಂಭ ಆಗಿರುವ ಬಗ್ಗೆ ವ್ಯಾಪಕ ರೀತಿಯಲ್ಲಿ ಪ್ರಚಾರ ಮಾಡಿದ್ದರೂ, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಸಂಖ್ಯೆ ಅತಿ ಕಡಿಮೆ. 2013-14ನೇ ಸಾಲಿಗೂ ಮೊದಲ ಪ್ರತಿ ವರ್ಷ 35ರಿಂದ 40 ಸಾವಿರ ಅಭ್ಯರ್ಥಿಗಳು ವಿವಿಧ ಕೋರ್ಸ್‌ಗೆ ಅರ್ಜಿ ಸಲ್ಲಿಸುತ್ತಿದ್ದರು. 2015ರಲ್ಲಿ ಮಾನ್ಯತೆ ರದ್ದಾದ ನಂತರ ರಾಜ್ಯದ ಎಲ್ಲ ಭಾಗದ ಅಭ್ಯರ್ಥಿಗಳಲ್ಲೂ ಮುಕ್ತ ವಿವಿ ಕೋರ್ಸ್‌ ಪಡೆಯಲು ಆತಂಕ ಹೆಚ್ಚಾಗಿದೆ. ಪದವಿ ಮಾನ್ಯತೆ ಸಿಗುತ್ತದೋ,ಇಲ್ಲವೋ ಎನ್ನುವ ಸಂಶಯವೂ ಇನ್ನು ದೂರಾಗಿಲ್ಲ. ಹೀಗಾಗಿ ಪುನರ್‌ ಆರಂಭವಾದ ವರ್ಷ ವಿವಿ ನಿರೀಕ್ಷಿಸಿದಷ್ಟು ಅರ್ಜಿಗಳು ಬಂದಿಲ್ಲ.

ಅರ್ಜಿ ಸ್ವೀಕಾರ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಯುಜಿಸಿ 2017ರಲ್ಲಿ ಹೊರಡಿಸಿದ ನಿಯಮದಂತೆ ಕೋರ್ಸ್‌ಗಳು ನಡೆಯಲಿದೆ. ಹೀಗಾಗಿ ಪದವಿಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಕೋರ್ಸ್‌ ಮತ್ತು ಸ್ನಾತಕೋತ್ತರ ಪದವಿಗೆ ಪದವಿ ಅಂಕಪಟ್ಟಿ ಕಡ್ಡಾಯ. ಈ ವರ್ಷ ಅರ್ಜಿಗಳು ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ.
– ಪ್ರೊ.ಡಿ.ಶಿವಲಿಂಗಯ್ಯ, ಕುಲಪತಿ, ರಾಜ್ಯ ಮುಕ್ತ ವಿವಿ

– ರಾಜು ಖಾರ್ವಿ ಕೊಡೇರಿ
 

Advertisement

Udayavani is now on Telegram. Click here to join our channel and stay updated with the latest news.

Next