Advertisement
ಕ್ಲಿನಿಕಲ್ ಸೈಕಾಲಜಿಸ್ಟ್ ಗುರಿ: ಇಲ್‌ಹಾಮ್ 597/600ಸಂತ ಅಲೋಶಿಯಸ್ ಕಾಲೇಜು, ಮಂಗಳೂರು
ಮಂಗಳೂರು: ನಾನು ವರ್ಷವಿಡೀ ಅಧ್ಯಯನಕ್ಕೆ ಆದ್ಯತೆ ನೀಡಿದ್ದೆ. ಯಾವತ್ತೂ ತರಗತಿಗೆ ಗೈರು ಹಾಜರಾಗುತ್ತಿರಲಿಲ್ಲ. ಕ್ಲಾಸಲ್ಲಿ ಟೀಚರ್ ಹೇಳಿದ್ದನ್ನು ಸರಿಯಾಗಿ ಕೇಳಿಸಿಕೊಳ್ಳುತ್ತಿದ್ದೆ. ಅವರ ಬೋಧನೆಯನ್ನು ಸರಿಯಾಗಿ ಕೇಳಿಸಿಕೊಂಡು ಮನೆಯಲ್ಲಿ ಬಂದು ಅದನ್ನೆಲ್ಲ ಒಮ್ಮೆ ಅಭ್ಯಾಸ ಮಾಡಿಕೊಳ್ಳುತ್ತಿದ್ದೆ. ಯಾವುದೇ ಕ್ಲಾಸ್ ಪರೀಕ್ಷೆಯಾಗಲಿ, ಅದಕ್ಕೆ ಮಹತ್ವ ಕೊಡುತ್ತಿದ್ದೆ ಎಂದು ಹೇಳಿದ್ದಾರೆ ಪಿಯುಸಿಯಲ್ಲಿ ರಾಜ್ಯದ ಟಾಪರ್ ಆಗಿರುವ ಇಲ್‌ಹಾಮ್. ಸೂಪರ್ ಸ್ಟೋರ್ ನಲ್ಲಿ ಐಟಿ ಉದ್ಯೋಗಿಯಾಗಿರುವ ಮೊಹಮ್ಮದ್ ರಫೀಕ್ ಹಾಗೂ ಗೃಹಿಣಿ ಮೊಯಿಝತುಲ್ ಕುಬ್ರಾ ಅವರ ಪುತ್ರಿಯಾಗಿರುವ ಇಲ್‌ಹಾಮ್ ತಮ್ಮ ಪ್ರಯತ್ನಕ್ಕೆ ಯಾವಾಗಲೂ ಸಾಥ್ ನೀಡಿದ್ದು ಹೆತ್ತವರು ಎನ್ನುತ್ತಾರೆ. ಮುಂದೆ ಬಿಎಸ್ಸಿ ಕ್ಲಿನಿಕಲ್ ಸೈಕಾಲಜಿ ಪದವಿ ಪಡೆಯುವ ಗುರಿ ಇದೆ. ಅದಕ್ಕಾಗಿಯೇ ವಿಜ್ಞಾನವನ್ನು ಆಯ್ದುಕೊಂಡಿದ್ದೆ ಎಂದಿದ್ದಾರೆ. ನಾನು ಯಾವುದೇ ರೀತಿಯ ಕೋಚಿಂಗ್‌ಗೆ ಹೋಗಿರಲಿಲ್ಲ. ಎಂಜಿನಿಯರಿಂಗ್ ನೀಟ್‌ನಂತಹ ಗುರಿ ಇರದ ಕಾರಣ ಬೇರೆ ಪರೀಕ್ಷೆಗಳ ಬಗ್ಗೆಯೂ ನಾನು ಯೋಚಿಸದೆ ಈ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದು ಮಾತ್ರ ನನ್ನ ಗುರಿಯಾಗಿತ್ತು ಎಂದು ಇಲ್‌ಹಾಂ ಹೇಳಿದ್ದಾರೆ.
ಪೂರ್ಣಪ್ರಜ್ಞ ಪಿಯು ಕಾಲೇಜು, ಉಡುಪಿ
ಉಡುಪಿ: ಇಂಗ್ಲಿಷ್ ಹೊರತುಪಡಿಸಿ ಬೇರೆಲ್ಲ ವಿಷಯದಲ್ಲೂ ಒಳ್ಳೆಯ ಅಂಕ ಬರುವ ನಿರೀಕ್ಷೆ ಇತ್ತು. ಇಂಗ್ಲಿಷ್‌ನಲ್ಲೂ ಚೆನ್ನಾಗಿ ಅಂಕ ಬಂದಿದೆ. ಎಸೆಸೆಲ್ಸಿಯಲ್ಲೂ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್ ಬಂದಿತ್ತು. ಪಿಯುಸಿಯೂಲ್ಲೂ ರ್‍ಯಾಂಕ್ ಬರಬೇಕು ಎಂಬ ಛಲ ಆಗಿಂದಲೇ ಇತ್ತು. ಅದರಂತೆ ಅಭ್ಯಾಸ ಮಾಡುತ್ತಿದ್ದೆ. ಸಿಇಟಿ ತಯಾರಿಗೆ ಕೋಚಿಂಗ್ ಪಡೆಯುತ್ತಿದ್ದೆ. ಅದು ಕೂಡ ಪಿಯುಸಿಯಲ್ಲಿ ಉತ್ತಮ ಅಂಕ ಪಡೆಯಲು ಸಹಕಾರಿಯಾಗಿದೆ ಎಂದು ಪಿಯುಸಿ ಟಾಪರ್ ಉಡುಪಿಯ ಪೂರ್ಣಪ್ರಜ್ಞ ಪಿಯು ಕಾಲೇಜಿನ ಭವ್ಯಾ ನಾಯಕ್ ಹೇಳಿದ್ದಾರೆ.
ಕಾಲೇಜಿನಲ್ಲಿ ಉಪನ್ಯಾಸಕರು ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಲು ಸಿದ್ಧತೆ ನಡೆಸುತ್ತಿದ್ದೇನೆ. ಸಿಇಟಿ ಬರೆದಿದ್ದು, ಉತ್ತಮ ರ್‍ಯಾಂಕ್ ಬರುವ ನಿರೀಕ್ಷೆ ಇದೆ. ತಂದೆ ನಾರಾಯಣ ನಾಯಕ್, ತಾಯಿ ಉಮಾ ನಾಯಕ್ ಮನೆಯಲ್ಲಿ ಹಪ್ಪಳ ಮಾಡಿ, ಅಂಗಡಿಗಳಿಗೆ ಮಾರಾಟ ಮಾಡುತ್ತಾರೆ. ರಜಾ ದಿನಗಳಲ್ಲಿ ನಾನೂ ಕೂಡ ಅವರೊಂದಿಗೆ ಸೇರಿ ಕೊಳ್ಳುತ್ತಿದ್ದೆ. ಸಮಯ ಸಿಕ್ಕಾಗಲೆಲ್ಲ ಅಧ್ಯಯನ ಮಾಡುತ್ತಿದೆ ಎನ್ನುತ್ತಾರೆ ಭವ್ಯಾ. ಶ್ರೀಕೃಷ್ಣನಿಗೆ ವೈದ್ಯನಾಗುವ ಬಯಕೆ
ಆಳ್ವಾಸ್ ಕಾಲೇಜು, ಮೂಡುಬಿದಿರೆ 597/600
ಮೂಡುಬಿದಿರೆ: ಶೈಕ್ಷಣಿಕ ಆಧಾರದಲ್ಲಿ ದತ್ತು ವಿದ್ಯಾರ್ಥಿಯಾಗಿ ಆಳ್ವಾಸ್‌ನಲ್ಲಿ ಉಚಿತ ಶಿಕ್ಷಣ ಪಡೆಯುತ್ತಿರುವೆ. ನಿಗದಿಯಾದ ವೇಳಾಪಟ್ಟಿಯಂತೆ ದಿನಕ್ಕೆ 5 ಗಂಟೆ ಅಧ್ಯಯನ ಮಾಡಿದ್ದೇನೆ. ಆಳ್ವಾಸ್‌ನಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವಿದೆ ಎಂದು ಸೈನ್ಸ್‌ನಲ್ಲಿ 597 ಅಂಕ ಪಡೆದ ಆಳ್ವಾಸ್‌ನ ಶ್ರೀಕೃಷ್ಣ ಪೆಜತ್ತಾಯ ಹೇಳಿದರು.
ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರಿಂದ ತೊಡಗಿ ಬೋಧಕರು, ಪ್ರಾಚಾರ್ಯರ ಮಾರ್ಗದರ್ಶನ ಲಭಿಸಿದೆ. ಮುಂದೆ ವೈದ್ಯನಾಗುವ ಹಂಬಲವಿದೆ ಎಂದರು. ಸುರತ್ಕಲ್ ಮೂಲದವರಾಗಿದ್ದು ಬೆಂಗಳೂರಿನಲ್ಲಿ ಕ್ಯಾಟರಿಂಗ್ ವ್ಯವಹಾರ ನಡೆಸುತ್ತಿರುವ ಸತೀಶ್ ಕುಮಾರ್ ಪಿ.ಆರ್. ಮತ್ತು ಶ್ರೀವಿದ್ಯಾ ದಂಪತಿಯ ಪುತ್ರ ಶ್ರೀಕೃಷ್ಣ ಪೆಜತ್ತಾಯ ಇಂಗ್ಲಿಷ್‌ನಲ್ಲಿ 2, ಕನ್ನಡದಲ್ಲಿ 1 ಅಂಕ ಕಳೆದುಕೊಂಡದ್ದು ಬಿಟ್ಟರೆ ಉಳಿದೆಲ್ಲ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ.
Related Articles
Advertisement
ಓಂಕಾರ್‌ಗೆ ಕಂ. ಎಂಜಿನಿಯರ್ ಆಗುವಾಸೆವಿದ್ಯೋದಯ ಕಾಲೇಜು, ಉಡುಪಿ 596/600
ಉಡುಪಿ: ನಮ್ಮ ಕಾಲೇಜಿನಲ್ಲಿ ವಾರ್ಷಿಕ ಪರೀಕ್ಷೆಯ ಸಿದ್ಧತೆಗಾಗಿ ಕಲಿಕಾ ಮೆಟೀರಿಯಲ್ ಒದಗಿಸಿದ್ದರು. ಅದು ಉತ್ತಮ ಅಂಕ ಪಡೆಯಲು ಸಹಕಾರಿಯಾಗಿತ್ತು. ಕಾಲೇಜಿನಲ್ಲಿ ಉಪನ್ಯಾಸಕರು ಅಷ್ಟೇ ಪರಿಣಾಮಕಾರಿಯಾಗಿ ಬೋಧನೆ ಮಾಡುತ್ತಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಲು ಸಿದ್ಧತೆ ನಡೆಸುತ್ತಿದ್ದೇನೆ. ನಿತ್ಯವೂ 3ರಿಂದ 4 ಗಂಟೆ ಓದಿಗಾಗಿಯೇ ಮೀಸಲಿಡುತ್ತಿದ್ದೆ ಎಂದು ವಿಜ್ಞಾನ ವಿಭಾಗದಲ್ಲಿ 596 ಅಂಕ ಪಡೆದ ಉಡುಪಿ ವಿದ್ಯೋದಯ ಪಿಯು ಕಾಲೇಜಿನ ಓಂಕಾರ್ ಪ್ರಭು ಹೇಳಿದ್ದಾರೆ. ವಿಷಯಕ್ಕೆ ಸಂಬಂಧಿಸಿದಂತೆ ಏನೇ ಸಂಶಯಗಳು ಬಂದರೂ ತತ್‌ಕ್ಷಣವೇ ಸಂಬಂಧಪಟ್ಟ ಉಪನ್ಯಾಸಕರನ್ನು ಸಂಪರ್ಕಿಸಿ ಅನುಮಾನಗಳನ್ನು ಪರಿಹರಿಸಿಕೊಳ್ಳುತ್ತಿದ್ದೆ. ತಂದೆ ರಾಮದಾಸ ಪ್ರಭು ವಿದೇಶದಲ್ಲಿದ್ದಾರೆ. ತಾಯಿ ಸಂಧ್ಯಾ ಪಾಟೀಲ್ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಮಾರ್ಗದರ್ಶನವೂ ಅಧ್ಯಯನದ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಈಗಾಗಲೇ ಸಿಇಟಿಯನ್ನು ಬರೆದಿದ್ದೇನೆ. ಯಾವುದೇ ಕೋಚಿಂಗ್‌ಗೆ ಹೋಗಿಲ್ಲ ಎಂದು ಓಂಕಾರ್ ತಿಳಿಸಿದ್ದಾರೆ. ಸಮರ್ಥನಿಗೆ ಸಿಎ ಆಗುವ ಅಭಿಲಾಷೆ
ಆಳ್ವಾಸ್ ಕಾಲೇಜು, ಮೂಡುಬಿದಿರೆ 595/600
ಮೂಡುಬಿದಿರೆ: ಶಿರಸಿಯ ಕೃಷಿಕ ವಿಶ್ವನಾಥ ಕೃಷ್ಣ ಜೋಶಿ-ಜಯಾ ದಂಪತಿ ಪುತ್ರ ಸಮರ್ಥ ವಿಶ್ವನಾಥ ಜೋಶಿ ಅವರು ವಾಣಿಜ್ಯ ವಿಭಾಗದಲ್ಲಿ 595 ಅಂಕ ಗಳಿಸಿದ್ದಾರೆ. ಮುಂದಕ್ಕೆ ಚಾರ್ಟರ್ಡ್ ಅಕೌಂಟೆಂಟ್ ಆಗುವ ಬಯಕೆ ಇದೆ ಎಂದು ಅವರು ಹೇಳಿದ್ದಾರೆ. ಆಳ್ವಾಸ್‌ನಲ್ಲಿ ಉತ್ತಮ ಬೋಧನೆ, ಕಲಿಕಾ ವಾತಾವರಣ, ಅಧ್ಯಾಪಕರು, ಹಾಸ್ಟೆಲ್ ವಾರ್ಡನ್‌ನಿಂದ ತೊಡಗಿ ಅಧ್ಯಕ್ಷ ಡಾ| ಮೋಹನ ಆಳ್ವ ಅವರವರೆಗೆ ಎಲ್ಲರೂ ಮುಕ್ತ ಪ್ರೋತ್ಸಾಹ ನೀಡಿದ್ದಾರೆ ಎಂದರು. ಶೈಕ್ಷಣಿಕ ಪ್ರತಿಭೆ ಆಧಾರದಲ್ಲಿ ಆಳ್ವಾಸ್‌ನಲ್ಲಿ ದತ್ತು ಸ್ವೀಕಾರದ ಯೋಜನೆಯಡಿ 8ನೇ ತರಗತಿಯಿಂದ ಉಚಿತ ಶಿಕ್ಷಣ ಪಡೆಯುತ್ತಿರುವ ಸಮರ್ಥ ಪಿಯುಸಿಗೆ ಬಂದಾಗ ಸಮಸ್ಯೆ ಎದುರಾದರೂ ಅದನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಸಾಧನೆ ಮಾಡಿದ್ದಾರೆ. ಚೆಸ್, ಯೋಗ ಇವರ ಇತರ ಹವ್ಯಾಸಗಳು. ಎರಡು ವರ್ಷಗಳಿಂದ ಸಿಎ ಸಂಬಂಧಿತ ಪೂರ್ವ ತರಬೇತಿ ಪಡೆಯುತ್ತಿರುವ ಕಾರಣ ಸಮರ್ಥ ಆಳ್ವಾಸ್‌ನಲ್ಲಿಯೇ ಇದ್ದು, ಹೆತ್ತವರೊಂದಿಗೆ ದೂರವಾಣಿ ಮೂಲಕ ಸಂಭ್ರಮ ಹಂಚಿಕೊಂಡಿದ್ದಾರೆ. ರೈತನ ಮಗನ ಅದ್ವೈತ ಸಾಧನೆ
ಭುವನೇಂದ್ರ ಕಾಲೇಜು, ಕಾರ್ಕಳ596/600
ಕಾರ್ಕಳ: ಫಲಿತಾಂಶ ಖುಷಿ ತಂದಿದೆ. ನಿತ್ಯ ದಿನಪತ್ರಿಕೆ ಓದಿ ಪಠ್ಯ ವಿಷಯಗಳ ಅಧ್ಯಯನ ನಡೆಸುತ್ತಿದ್ದೆ. ದಿನಕ್ಕೆ 5ರಿಂದ 6 ತಾಸು ಅಭ್ಯಾಸ ನಡೆಸುತ್ತಿದ್ದೆ. ಪರಿಶ್ರಮಕ್ಕೆ ಫಲ ದೊರಕಿದೆ. ಕಂಪ್ಯೂಟರ್ ಸೈನ್ಸ್ , ಫಿಸಿಕ್ಸ್ ವಿಷಯ ಆಸಕ್ತಿಯ ವಿಷಯ. ಜೆಇಇ ಪರೀಕ್ಷೆ ಬರೆಯುವೆ. ಫಲಿತಾಂಶ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುವೆ ಎಂದು ಪಿಯುಸಿ ಪರೀಕ್ಷೆಯಲ್ಲಿ 596 ಅಂಕ ಗಳಿಸಿದ ಕಾರ್ಕಳ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿ ಅದ್ವೈತ ಶರ್ಮ ಫಲಿತಾಂಶದ ಬಗ್ಗೆ ಖುಷಿ ಹಾಗೂ ಮುಂದಿನ ಕನಸುಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಅವರು ಎಸೆಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 620 ಅಂಕ ಪಡೆದಿದ್ದರು. ದುರ್ಗ ಗ್ರಾಮದ ತೆಳ್ಳಾರು ಬಲಾಜೆಯ ಶ್ರೀನಿವಾಸ ಭಟ್ ಹಾಗೂ ಶಾಲಿನಿ ದಂಪತಿಯ ಪುತ್ರ. ಅವರ ಮನೆಯಲ್ಲಿ ಕೂಡು ಕುಟುಂಬದಲ್ಲಿ 15 ಮಂದಿ ಇದ್ದಾರೆ. ತಂದೆ ಕೃಷಿಕರಾಗಿದ್ದು, 10 ಎಕರೆ ಜಾಗದಲ್ಲಿ ಅಡಿಕೆ ಕೃಷಿ ಬೆಳೆಯುತ್ತಾರೆ. ಅವರು ಮೂಲತಃ ಕುಂಬಳೆ ಸಮೀಪದ ಬದಿಯಡ್ಕದ ಸರ್ಪನಡ್ಕದವರಾಗಿದ್ದಾರೆ. ಹೆತ್ತವರು ಹಾಗೂ ಉಪನ್ಯಾಸಕರ ಪ್ರೇರಣೆಯಿಂದ ಈ ಯಶಸ್ಸು ಸಾಧ್ಯವಾಗಿದೆ ಎಂದಿದ್ದಾರೆ ಅದ್ವೈತ. ಬಿಕಾಂ ಬಳಿಕ ಮುಂದಿನ ನಿರ್ಧಾರ: ಅನಿಶಾ
ಸಂತ ಅಲೋಶಿಯಸ್ ಕಾಲೇಜು, ಮಂಗಳೂರು 595/600
ಮಂಗಳೂರು: ಉತ್ತಮ ಅಂಕ ಗಳಿಸುವ ನಿಟ್ಟಿನಲ್ಲಿ ನನ್ನೆಲ್ಲ ಶ್ರಮ ಪಟ್ಟಿದ್ದೇನೆ. ಹಾಗೆಂದು ದೊಡ್ಡ ನಿರೀಕ್ಷೆ ಇರಲಿಲ್ಲ. ಪ್ರಯತ್ನಕ್ಕೆ ಒತ್ತು ಕೊಡಬೇಕು, ಫಲಿತಾಂಶಕ್ಕೆ ಅಲ್ಲ ಎನ್ನುವುದು ನನ್ನ ನಂಬಿಕೆ. ಆದರೆ ಇದೀಗ ನಿರೀಕ್ಷೆಗೂ ಮೀರಿ ಅಂಕ ದೊರಕಿದೆ ಎಂದು ದ್ವಿತೀಯ ಪಿಯುಸಿಯ ವಾಣಿಜ್ಯ ವಿಭಾಗದಲ್ಲಿ 595 ಅಂಕ ಗಳಿಸಿರುವ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ಅನಿಶಾ ಮಲ್ಯ ಹೇಳಿದ್ದಾರೆ. ನಾನಿನ್ನೂ ನನ್ನ ಮುಂದಿನ ಗುರಿಯ ಬಗ್ಗೆ ನಿರ್ಧರಿಸಿಲ್ಲ. ಸಿಎ ಮಾಡುವುದಾಗಲಿ ಅಥವಾ ಇತರ ವಿಷಯದಲ್ಲಿ ಮುಂದುವರಿಯುವ ಬಗ್ಗೆಯೂ ಆಲೋಚಿಸಿಲ್ಲ. ಬಿಕಾಂ ಪದವಿಯನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮಾಡಬೇಕೆಂದಿದ್ದೇನೆ. ಹಂತ ಹಂತವಾಗಿ ಹೆಜ್ಜೆ ಇರಿಸುತ್ತಾ ಸಾಗಬೇಕೆಂದಿರುವೆ ಎನ್ನುತ್ತಾರೆ. ಸಂತ ಅಲೋಶಿಯಸ್ ಕಾಲೇಜು ಉತ್ತಮ ವಾತಾವರಣದೊಂದಿಗೆ ಉತ್ತಮ ಉಪನ್ಯಾಸಕ ಬಳಗವನ್ನು ಹೊಂದಿದೆ. ನನ್ನ ಮಗಳು ಉತ್ತಮ ನಾಗರಿಕಳಾಗಿ ಬದುಕಬೇಕೆಂಬುದು ನಮ್ಮ ಆಶಯ ಎಂದು ಅನಿಶಾ ಮಲ್ಯ ತಂದೆ ಪಾಂಡುರಂಗ ಮಲ್ಯ ಮತ್ತು ತಾಯಿ ಶಾಂತಲಾ ಮಲ್ಯ ಅಭಿಪ್ರಾಯಿಸಿದ್ದಾರೆ. ಅಚಲ್‌ಗೆ ಕಂಪೆನಿ ಸೆಕ್ರೆಟರಿಯಾಗುವ ಗುರಿ
ಕೆನರಾ ಪ.ಪೂ. ಕಾಲೇಜು, ಮಂಗಳೂರು 595/600
ಮಂಗಳೂರು: ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿ 2ನೇ ಸ್ಥಾನವನ್ನು ಹಂಚಿಕೊಂಡಿರುವ ಮಂಗಳೂರು ಕೆನರಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅಚಲ್ ಪ್ರವೀಣ್ ಉಳ್ಳಾಲ್ ಅವರಿಗೆ ಕಂಪೆನಿ ಸೆಕ್ರೆಟರಿ ಹುದ್ದೆ ಪಡೆಯುವ ಗುರಿ. ಕೆನರಾ ಕಾಲೇಜಿನಲ್ಲೇ ಬಿಕಾಂ ಪದವಿ ಮುಗಿಸಲು ಅವರು ಉದ್ದೇಶಿಸಿದ್ದಾರೆ. ಕಾಲೇಜು ತರಗತಿ ಮತ್ತು ಮನೆಯಲ್ಲಿ ನಿಯಮಿತವಾದ ಅಭ್ಯಾಸ ಹೊರತುಪಡಿಸಿ ಯಾವುದೇ ಹೆಚ್ಚುವರಿ ಟೂಷನ್ ಪಡೆಯದೆ ರ್‍ಯಾಂಕ್ ಪಡೆದಿರುವುದು ಅವರ ವಿಶೇಷತೆ. ಜತೆಗೆ ಕಾದಂಬರಿಗಳನ್ನು ಒದುವ, ಸಂಗೀತವನ್ನು ಆಲಿಸುವ ಹವ್ಯಾಸವನ್ನು ಅವರು ಹೊಂದಿದ್ದಾರೆ. ಪರೀಕ್ಷೆಯನ್ನು ನಾನು ಆರಾಮವಾಗಿ ನಿಭಾಯಿಸಿದ್ದೇನೆ. 2 ವಿಷಯಗಳಲ್ಲಿ ಪೂರ್ಣ ಅಂಕ ಬರಬಹುದು ಎಂದು ನಿರೀಕ್ಷೆ ಮಾಡಿದ್ದೆ. ಆದರೆ 4 ವಿಷಯಗಳಲ್ಲಿ ಪೂರ್ಣ ಅಂಕ ಬಂದಿದೆ. ಕಾಲೇಜಿನಲ್ಲಿ ನಡೆಯುವ ಮಾದರಿ ಪರೀಕ್ಷೆಗಳು, ಉಪನ್ಯಾಸಕರ ಉತ್ತೇಜನ ಸಹಾಯವಾಯಿತು. ಸುರತ್ಕಲ್ ನಿವಾಸಿಯಾಗಿರುವ ಅಚಲ್ ಅವರ ತಂದೆ ಪ್ರವೀಣ್ ಮಾರುಕಟ್ಟೆ ವಿಭಾಗದಲ್ಲಿ ದುಡಿಯುತ್ತಿದ್ದಾರೆ. ತಾಯಿ ಅರ್ಚನಾ, ಮೂಲ್ಕಿ ನಾರಾಯಣಗುರು ಕಾಲೇಜಿನಲ್ಲಿ ಉಪನ್ಯಾಸಕಿ.