Advertisement

ಕವಿತಾ ಶಂಕರ್ ಜಿಲ್ಲೆಗೆ ಪ್ರಥಮ, ವಾಣಿಜ್ಯದಲ್ಲಿ ಚಂದನಾ, ಕಲಾ ವಿಭಾಗದಲ್ಲಿ ಶಾಲಿನಿ ಪ್ರಥಮ

08:55 PM Jul 14, 2020 | sudhir |

ಚಾಮರಾಜನಗರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಜೆಎಸ್‌ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕವಿತಾ ಶಂಕರ್ ಶೇ. 97.66 ರಷ್ಟು ಅಂಕ ಪಡೆದು ವಿಜ್ಞಾನ ವಿಭಾಗದಲ್ಲಿ ಮಾತ್ರವಲ್ಲ ಮೂರೂ ವಿಭಾಗಗಳ ಪೈಕಿ ಟಾಪರ್ ಆಗಿದ್ದು 586 ಅಂಕಗಳನ್ನು ಗಳಿಸಿದ್ದಾಳೆ.

Advertisement

ವಾಣಿಜ್ಯ ವಿಭಾಗದಲ್ಲಿ ಗುಂಡ್ಲುಪೇಟೆಯ ಜೆಎಸ್‌ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆರ್. ಚಂದನಾ ಶೇ. 97.33ರಷ್ಟು ಅಂಕ ಪಡೆದು ಜಿಲ್ಲೆಯ ಟಾಪರ್ ಆಗಿದ್ದಾಳೆ. ಈಕೆ 584 ಅಂಕಗಳನ್ನು ಗಳಿಸಿದ್ದಾಳೆ.

ಕಲಾ ವಿಭಾಗದಲ್ಲಿ ಕೊಳ್ಳೇಗಾಲದ ಎಸ್‌ವಿಕೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಿ. ಶಾಲಿನಿ ಟಾಪರ್ ಆಗಿದ್ದಾಳೆ. ಈಕೆ 573 ಅಂಕಗಳನ್ನು ಪಡೆದು ಶೇ. 95.50ರಷ್ಟು ಫಲಿತಾಂಶ ಪಡೆದಿದ್ದಾಳೆ.

ಜಿಲ್ಲೆಯ ಮೂರೂ ವಿಭಾಗದ ಬಾಲಕಿಯರೇ ಮೇಲಗೈ ಸಾಧಿಸಿರುವುದು ವಿಶೇಷ. ಇಬ್ಬರು ಟಾಪರ್‌ಗಳು ಜೆಎಸ್‌ಎಸ್ ಕಾಲೇಜಿನವರಾಗಿದ್ದು, ಓರ್ವ ಟಾಪರ್ ಸರ್ಕಾರಿ ಕಾಲೇಜಿನವರಾಗಿರುವುದು ಸಹ ಗಮನಾರ್ಹ. ಇದರಲ್ಲಿ ಇಬ್ಬರು ವಿದ್ಯಾರ್ಥಿನಿಯರು ಹಳ್ಳಿಯವರು.

ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆಯ ಟಾಪರ್ ಆಗಿರುವ ಕವಿತಾ ಶಂಕರ್ ನಗರದ ನ್ಯಾಯಾಲಯ ರಸ್ತೆಯ ನಿವಾಸಿಗಳಾದ ಕುಮಾರ್ ರವಿಶಂಕರ್ ಹಾಗೂ ನಾಗರತ್ನಮ್ಮ ಅವರ ಪುತ್ರಿ.

Advertisement

ಫಲಿತಾಂಶದ ಕುರಿತು ಉದಯವಾಣಿ ಜೊತೆ ಸಂತಸ ಹಂಚಿಕೊಂಡ ಕವಿತಾ, ತುಂಬಾ ಸಂತಸವಾಗುತ್ತಿದೆ. ಹೆಚ್ಚು ಅಂಕ ಗಳಿಸುವ ನಿರೀಕ್ಷೆ ಹೊಂದಿದ್ದೆ. ಆದರೆ ಜಿಲ್ಲೆಗೇ ಟಾಪರ್ ಆಗಬಹುದು ಎಂದುಕೊಂಡಿರಲಿಲ್ಲ ಎಂದಳು. ಪ್ರತಿ ದಿನ 4 ರಿಂದ 5 ಗಂಟೆಗಳ ಕಾಲ ಓದುತ್ತಿದ್ದೆ. ಪರೀಕ್ಷೆ ಸಂದರ್ಭದಲ್ಲಿ 7 ರಿಂದ 8 ಗಂಟೆಗಳ ಕಾಲ ವ್ಯಾಸಂಗ ಮಾಡುತ್ತಿದ್ದೆ ಎಂದ ಕವಿತಾ, ವೈದ್ಯಕೀಯ ಅಥವಾ ಐಎಎಸ್ ಮಾಡುವ ಇಂಗಿತ ವ್ಯಕ್ತಪಡಿಸಿದಳು.

ವಾಣಿಜ್ಯ ವಿಭಾಗದಲ್ಲಿ ಟಾಪರ್ ಆಗಿರುವ ಚಂದನಾ ಗುಂಡ್ಲುಪೇಟೆ ತಾಲೂಕಿನ ಮಲ್ಲಯ್ಯನಪುರದ ರೈತ ರಾಜು ಮತ್ತು ಸುಧಾರಾಣಿ ಅವರ ಪುತ್ರಿ. ಕಲಾ ವಿಭಾಗದ ಟಾಪರ್ ಶಾಲಿನಿ ಕೊಳ್ಳೇಗಾಲ ತಾಲೂಕಿನ ಹೊಂಡರಬಾಳು ಗ್ರಾಮದ ರೈತ ವೀರಭದ್ರಸ್ವಾಮಿ ಹಾಗೂ ಜ್ಯೋತಿ ಅವರ ಪುತ್ರಿ.

Advertisement

Udayavani is now on Telegram. Click here to join our channel and stay updated with the latest news.

Next