ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ 3ನೇ ದಿನವಾದ ಶನಿವಾರ ವಿದ್ಯಾರ್ಥಿಯೊಬ್ಬ ಡಿಬಾರ್ ಆಗಿದ್ದು, ಹೊರತುಪಡಿಸಿದರೆ ಯಾವುದೇ ಅಡೆತಡೆ ಇಲ್ಲದೆ ಪರೀಕ್ಷೆ ಸುಸೂತ್ರವಾಗಿ ನಡೆಯಿತು.
ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡುತ್ತಿದ್ದ ದಾವಣಗೆರೆಯ ಹರಪ್ಪನಹಳ್ಳಿಯ ಎಸ್‌ಯುಜೆಎಂಪಿ ಪಿಯು ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಡಿಬಾರ್ ಮಾಡಲಾಗಿದೆ. ವಿದ್ಯಾರ್ಥಿ ಶನಿವಾರ ನಡೆದ “ಶಿಕ್ಷಣ’ ವಿಷಯದ ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನುಳಿದಂತೆ ತರ್ಕಶಾಸ್ತ್ರ ಮತ್ತು ಸಾಮಾನ್ಯ ಗಣಿತ ವಿಷಯಗಳ ಪರೀಕ್ಷೆ ನಡೆದಿದ್ದು, ಯಾವುದೇ ಅಕ್ರಮ ಪ್ರಕರಣಗಳು ನಡೆದಿಲ್ಲ. ಎಂದಿನಂತೆ ಪರೀಕ್ಷಾ ಕೇಂದ್ರದ ಸುತ್ತಲು ಭದ್ರತೆ ಕೈಗೊಳ್ಳಲಾಗಿತ್ತು. ನಿಗದಿತ ಸಮಯದೊಳಗೆ ಪ್ರಶ್ನೆ ಪತ್ರಿಕೆಗಳು ಪರೀಕ್ಷಾ ಕೇಂದ್ರ ತಲುಪಿವೆ. ಪರೀಕ್ಷೆಗಳು ಸುಸೂತ್ರವಾಗಿ ನಡೆದಿವೆ ಎಂದು ಪಿಯು ಇಲಾಖೆ ಮಾಹಿತಿ ನೀಡಿದೆ.
ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಲ್ಲಿ ಅನೇಕರು ಪ್ರಶ್ನೆ ಪತ್ರಿಕೆ ಸರಳವಾಗಿದ್ದು, ಅತಿಹೆಚ್ಚು ಅಂಕಗಳಿಸಲು ಅನುಕೂಲವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಠ್ಯಪುಸ್ತಕ ಮತ್ತು ಕಾಲೇಜಿನ ಪಠ್ಯ ಕ್ರಮದ ಆಧಾರದಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೆನು. ಇದು ಶೀಘ್ರವಾಗಿ ಅವಧಿಗೂ ಮುನ್ನವೇ ಪರೀಕ್ಷೆ ಬರೆದು ಮುಗಿಸಲು ಸಾಧ್ಯವಾಯಿತು ಎಂದು ಮಲ್ಲೇಶ್ವರದ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜು ವಿದ್ಯಾರ್ಥಿ ಮಂಜುನಾಥ್ ಸಂತಸ ವ್ಯಕ್ತಪಡಿಸಿದರು.
ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದೆ. ಜತೆಗೆ ಪಠ್ಯಕ್ರಮದ ಆಧಾರದಲ್ಲಿ ಪರೀಕ್ಷೆಗೆ ಸಿದ್ಧವಾಗಿದ್ದು, ಪರೀಕ್ಷೆ ಎದುರಿಸಲು ಅನುಕೂಲವಾಯಿತು ಎಂದು ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿನಿ ಪ್ರೇರಣಾ ಹೇಳಿದರು.
ವಿದ್ಯಾರ್ಥಿ ಸ್ನೇಹಿ ಪ್ರಶ್ನೆ ಪತ್ರಿಕೆ ಸಿದ್ದಪಡಿಸಲಾಗಿತ್ತು. ಮಾದರಿ ಪ್ರಶ್ನೆ ಪತ್ರಿಕೆಗಳ ಆಧಾರದಲ್ಲಿ ಪಶ್ನೆ ಪತ್ರಿಕೆಯನ್ನು ತಯಾರಿಸಲಾಗಿದ್ದು, ಗಮನವಿಟ್ಟು ಓದಿದವರು ಶೇ.100ರಷ್ಟು ಅಂಕಗಳಿಸಬಹುದು. ಶೇ.60 ವಾಣಿಜ್ಯ ಆಧಾರಿತ ಮತ್ತು ಶೇ.40 ವಿಜ್ಞಾನ ಆಧಾರಿತ ಪಠ್ಯ ಕ್ರಮದಲ್ಲಿ ಪ್ರಶ್ನೆ ಪತ್ರಿಕೆ ಮಾಡಲಾಗಿದೆ.
– ಸಿ.ಗೋವಿಂದರಾಜು, ಅಧ್ಯಕ್ಷ, ಬೇಸಿಕ್ ಮ್ಯಾಥ್ಸ್ ನೂಟನ್ ಪಠ್ಯ ಪುಸ್ತಕ ಸಮಿತಿ