ಮಂಗಳೂರು: ಎಡಗೈ ಸ್ವಾಧೀನ ಕಳೆದುಕೊಂಡಿದೆ, ಮಾತು, ಕೆಲಸ ಎಲ್ಲವೂ ನಿಧಾನ… 7 ವರ್ಷಗಳ ಹಿಂದೆ ತಲೆಗೆ ಆದ ಪೆಟ್ಟು ಇನ್ನೂ ಮಾಸಿಲ್ಲ… ಆದರೆ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 500 ಅಂಕ ಗಳಿಸಿ ದೈಹಿಕ ನೋವುಗಳು ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಮಂಗಳೂರಿನ ವಿಘ್ನೇಶ್ ಟಿ. ರಾವ್.
ನಗರದಲ್ಲಿ ಅಟೋ ಚಾಲಕರಾಗಿರುವ ಅಶೋಕ ನಗರದ ಟಿ. ಸುಬ್ರಹ್ಮಣ್ಯ ರಾವ್ ಮತ್ತು ಗೃಹಿಣಿ ನಳಿನಿ ಎಸ್. ರಾವ್ ಅವರ ಏಕೈಕ ಪುತ್ರ ವಿಘ್ನೇಶ್. ಸಂತ ಅಲೋಶಿಯಸ್ ಸಂಧ್ಯಾ ಕಾಲೇಜಿನ ವಿದ್ಯಾರ್ಥಿ. 2013ರಲ್ಲಿ ಆತ 5ನೇ ತರಗತಿಯಲ್ಲಿದ್ದಾಗ ಅದೊಂದು ದಿನ ಮನೆಯ ಮೊದಲ ಮಹಡಿಯಿಂದ ಗೇಟಿನ ಮೇಲೆ ಬಿದ್ದು ತಲೆಗೆ ತೀವ್ರ ಗಾಯವಾಗಿತ್ತು. ಗೇಟಿನ ಮೇಲ್ಭಾಗದಲ್ಲಿರುವ ಚೂಪಾದ ಭಾಗ ತಲೆಯ ಒಳಹೊಕ್ಕು ವಿಘ್ನೇಶ್ ಕುಟುಂಬಕ್ಕೆ ಆಘಾತವೇ ಎದುರಾಗಿತ್ತು.
ಎಡಗೈ ಸ್ವಾಧೀನ ಕಳೆದುಕೊಂಡದ್ದಲ್ಲದೆ, ಬಳಿಕದ ದಿನಗಳಲ್ಲಿ ಮಾತು, ಕೆಲಸ ಎಲ್ಲವೂ ನಿಧಾನವಾಯಿತು. ವಿಘ್ನೇಶ್ ತುಸು ಚೇತರಿಸಿಕೊಂಡ ಬಳಿಕ ಶಾಲೆಗೆ ಹೋಗಲಾರಂಭಿಸಿದ್ದ. ಆದರೆ ದೈಹಿಕ ನ್ಯೂನತೆಗಳನ್ನು ಲೆಕ್ಕಿಸದೆ ಛಲದಿಂದ ವಿದ್ಯಾಭ್ಯಾಸ ಮುಂದುವರಿಸಿದ್ದ ವಿಘ್ನೇಶ್ ಪ್ರಸ್ತುತ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 600ರಲ್ಲಿ 500 ಅಂಕ ಪಡೆದು ಕೊಂಡು ಸಾಧಕನೆನಿಸಿಕೊಂಡಿದ್ದಾರೆ.
ಎಸೆಸೆಲ್ಸಿಯಲ್ಲೂ ಸಾಧನೆ ವಿಘ್ನೇಶ್ ಎಸೆಸೆಲ್ಸಿಯಲ್ಲಿಯೂ ಶೇ. 72 ಅಂಕ ಗಳಿಸಿದ್ದರು. ಮನೆಯಲ್ಲಿ ಹೆತ್ತವರು ಓದಿ ಹೇಳಿದ್ದನ್ನೇ ಬಾಯಿ ಪಾಠ ಮಾಡಿ ನೆನಪಿಟ್ಟುಕೊಂಡು ಪರೀಕ್ಷೆಗೆ ತಯಾರಾಗುವ ವಿಘ್ನೇಶ್‌ಗೆ ಉತ್ತಮ ನೆನಪಿನ ಶಕ್ತಿ ಇರುವುದೇ ಅವರ ಅಂಕ ಗಳಿಕೆಯ ಹಿಂದಿನ ಸ್ಫೂರ್ತಿ. ಅಂಗವಿಕಲ ಪ್ರಮಾಣಪತ್ರದೊಂದಿಗೆ ಪರೀಕ್ಷೆ ಬರೆದಿದ್ದರು. ಸಂತ ಅಲೋಶಿಯಸ್ ಕಾಲೇಜಿನ ಪ್ರಥಮ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿ ಪ್ರೀತಂ ಕೃಷ್ಣ ಅವರು ವಿಘ್ನೇಶ್ ಹೇಳಿದಂತೆ ಬರೆದು ಸಹಕರಿಸಿದರು.
ದೈಹಿಕ ನ್ಯೂನತೆಗಳನ್ನು ಮೆಟ್ಟಿ ನಿಂತು ನನ್ನ ಮಗ ಪಡೆದ ಅಂಕಗಳ ಬಗ್ಗೆ ಹೆಮ್ಮೆ ಇದೆ. ಮುಂದೆ ಆತ ವಾಣಿಜ್ಯ ಪದವಿ ಓದಲಿದ್ದಾನೆ. ಆತನ ಎಲ್ಲ ಸಾಧನೆಗಳಿಗೆ ಬೆಂಬಲವಾಗಿ ನಾವಿದ್ದೇವೆ.
ಟಿ. ಸುಬ್ರಹ್ಮಣ್ಯ ರಾವ್, ತಂದೆ