ಚಿಕ್ಕಬಳ್ಳಾಪುರ: ಮುಂಗಾರು ಹಂಗಾಮು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಸಾಕಷ್ಟು ಕಡೆಗಳಲ್ಲಿ ಕಳಪೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟ ಮಾಡುವ ಸಾಧ್ಯತೆ ಇರುವುದರಿಂದ ಕೃಷಿ ಅಧಿಕಾರಿಗಳು ಈ ಬಗ್ಗೆ ಎಚ್ಚರಿಕೆ ವಹಿಸಿ ರೈತರಿಗೆ ಮೋಸ ಆಗದಂತೆ ಕ್ರಮ ವಹಿಸಬೇಕು. ಕಡ್ಡಾಯವಾಗಿ ಮಳಿಗೆಗಳಲ್ಲಿ ದರ ಪಟ್ಟಿ ಪ್ರಕಟಿಸಲು ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ತಾಪಂ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ಸೂಚಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿ ಅಧಿಕಾರಿಗಳು ರಸಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟ ಮಾಡುವ ಮಳಿಗೆಗಳ ಮೇಲೆ ದಿಢೀರ್ ದಾಳಿ ನಡೆಸಿ ಗುಣಮಟ್ಟ ಹಾಗೂ ದರ ನಿಗದಿ ಬಗ್ಗೆ ಖಚಿತಪಡಿಸಿಕೊಳ್ಳಬೇಕೆಂದರು.
ಸದ್ದು ಮಾಡಿದ ಲಾಕ್‌ಡೌನ್ ಪರಿಹಾರ: ಸರ್ಕಾರ ಹೂವು ಬೆಳೆಗಾರರಿಗೆ ನೀಡುತ್ತಿರುವ ಪರಿಹಾರ ಕುರಿತು ಸಾಮಾನ್ಯ ಸಭೆಯಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಯಿತು. ಪರಿಹಾರ ಕೋರಿ ನಿರೀಕ್ಷೆಗೂ ಮೀರಿ ಅರ್ಜಿಗಳು ಬರುತ್ತಿವೆ ಎಂದು ಅಧಿಕಾರಿಗಳು ತಿಳಿಸಿದಾಗ ಅರ್ಹರಿಗೆ ಪರಿಹಾರ ಕೈ ತಪ್ಪದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದರು.
ಇಲಾಖೆ ಮುಂದೆ ಧರಣಿ ನಡೆಸುವೆ: ತಾಪಂ ಸದಸ್ಯ ಸುಬ್ಬರಾಯಪ್ಪ ಮಾತನಾಡಿ, ಜನಪ್ರತಿನಿಗಳು ಮತ್ತು ರಾಜಕಾರಣಿಗಳು ಹೇಳುವ ಹೆಸರುಗಳನ್ನು ಮಾತ್ರ ಪಟ್ಟಿಗೆ ಸೇರಿಸಿ ಪರಿಹಾರ ವಿತರಿಸುವುದಾದರೇ ನೈಜ ರೈತರನ್ನು ಕರೆತಂದು ತೋಟಗಾರಿಕಾ ಇಲಾಖೆಗೆ ಮುತ್ತಿಗೆ ಹಾಕಿಸುವುದಾಗಿ ಸಭೆಯಲ್ಲಿ ತೋಟಗಾರಿಕೆಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ತಾಪಂ ಇಒ ಹರ್ಷವರ್ಧನ್, ಸ್ಥಾಯಿ ಸಮಿತಿ ಅಧ್ಯಕ್ಷ ತಿರಮುಳಪ್ಪ, ಉಪಾಧ್ಯಕ್ಷೆ ಇಂದ್ರಮ್ಮ, ಸದಸ್ಯರು ಇದ್ದರು.