ಸಂಡೂರು: ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯದಲ್ಲಿಯ ಗಂಡು ಕಲೆ ಬಯಲಾಟವಾಗಿದೆ. ಅದು ಯಕ್ಷಗಾನಕ್ಕಿಂತಲೂ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಅದರೆ ಅದರ ಪ್ರಚಾರದ ಕೊರತೆಯಿಂದ ಸೊರಗುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಿಷ್ಠಿರುದ್ರಪ್ಪ ತಿಳಿಸಿದರು.
ಅವರು ಪಟ್ಟಣದ ವಿರಕ್ತಮಠದಲ್ಲಿ ಶ್ರೀ ಹಂಪಿ ವಿರುಪಾಕ್ಷ ಬಯಲಾಟ ನಾಟಕ ಪ್ರೋತ್ಸಾಹ ಟ್ರಸ್ಟ್ ವಿಠuಲಾಪುರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ದಿವಂಗತ ಜಿ.ಕೆ. ಗುರುಬಸಪ್ಪನವರ 21ನೇ ವರ್ಷದ ಹಾಗೂ ಸಾರಥಿ ಪಂಪಾಪತಿ ರಾಜ್ಯಪ್ರಶಸ್ತಿ ಪುರಸ್ಕೃತರ ಪುಣ್ಯಸ್ಮರಣೆ ಅಂಗವಾಗಿ ರಾಜ್ಯಮಟ್ಟದ ಜಾನಪದ ಸಂಗೀತ ಬಯಲಾಟ (ದೊಡ್ಡಾಟ)ದ ಪರಿಷ್ಕರಣದ ಗೋಷ್ಠಿ ಮತ್ತು ಪ್ರಾತ್ಯಕ್ಷಿಕತೆ ಕಾರ್ಯಕ್ರಮವನ್ನು ಉದ್ಘಾಟಿಸಿ
ಮಾತನಾಡಿ, ಇಂದು ಯಕ್ಷಗಾನ ಭಾರತೀಯ ನಾಟಕ ಶಾಲೆಯಲ್ಲಿ ಪ್ರದರ್ಶನಗೊಳಿಸಲು ಶಿವರಾಂ ಕಾರಂತರು ಬಹುದೊಡ್ಡ ಕಾರ್ಯ ಮಾಡಿದರು. ಆದ್ದರಿಂದ ಅದು ತನ್ನ ಮೂಲ ತನವನ್ನು ಉಳಿಸಿಕೊಂಡು ಅಧುನಿಕತೆಯ ಸ್ಪರ್ಶದೊಂದಿಗೆ ಕಲೆಯನ್ನು ಉಳಿಸಿಕೊಂಡಿದೆ.
ಅದೇ ರೀತಿ ಬಯಲಾಟ ಬಳ್ಳಾರಿ ಜಿಲ್ಲೆ ಮತ್ತು ಕೊಪ್ಪಳ, ಆಂಧ್ರಪ್ರದೇಶದಲ್ಲಿಯೂ ಸಹ ಬಹು ಪ್ರಸಿದ್ಧಿಯಾಗಿದೆ. ಆದರೆ ಇಂದಿನ ದಿನಮಾನಗಳಲ್ಲಿ ಅಧುನಿಕ ಸಿನಿಮಾ ಚಿತ್ರಗೀತೆಗಳನ್ನು ಬಳಸಿಕೊಳ್ಳುವ ಮೂಲಕ ತನ್ನತನವನ್ನು ಕಳೆದುಕೊಳ್ಳುತ್ತಿದೆ. ಆದ್ದರಿಂದ ಮೂಲಕ ಬಯಲಾಟ ಕಲೆಯನ್ನು ಉಳಿಸುವುದು ಅತಿ ಅಗತ್ಯವಾಗಿದೆ. ಅದಕ್ಕೆ ನಿರಂತರ ಪ್ರೋತ್ಸಾಹವೂ ಸಹ ಬಹುಮುಖ್ಯವಾಗಿದೆ. ಇಂದು ಮನುಷ್ಯ ಅನುಕರಣೆಯ ಮೂಲಕ ಕಲೆ ಸಾಹಿತ್ಯ, ಸಂಗೀತವನ್ನು ಪ್ರಕೃತಿಯಿಂದ ಕಲಿತನು, ಅದು ಜಾನಪದ ಕಲೆಯಾಗಿ ಬೆಳೆದಿದೆ ಅದನ್ನು ರಕ್ಷಿಸಬೇಕು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ವಿಜೇತರಾದ ಬಿ. ಮೌನಾಚಾರಿ ಮಾತನಾಡಿ, ಇಂದು ಬಯಲಾಟ ಕಲೆ ತನ್ನ ತನವನ್ನು ಕಳೆದುಕೊಳ್ಳುತ್ತಿದೆ. ಕಾರಣ ದಕ್ಷಿಣಾದಿ ಗಾಯನವನ್ನು ಹಾಡುತ್ತಿಲ್ಲ. ಅತಿ ಹೆಚ್ಚು ಸಿನಿಮಾ ಹಾಡುಗಳನ್ನು ಹಾಕಿಕೊಂಡು ಕುಣಿಯುವ ಪ್ರವೃತ್ತಿ ಪ್ರಾರಂಭವಾಗಿದೆ. ಆದ್ದರಿಂದ ದಕ್ಷಿಣಾದಿ ಗಾಯನ ಬಯಲಾಟದ ಮೂಲವಾಗಿದೆ ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಬೇಕು. ಆಧುನಿಕತೆ ಪ್ರಭಾವದಿಂದ ಹಾರ್ಮೋನಿಯಂ ಕಲಾವಿದರ, ತಬಲಾ ಕಲಾವಿದರು ಕೆಲಸ ಕಳೆದುಕೊಳ್ಳುವ ಭೀತಿ ಇದೆ. ಆದ್ದರಿಂದ ನಮ್ಮ ಪುರಾತನ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದರು. ತಾಳೂರಿನ ಹಿರಿಯ ಕಲಾವಿದೆ ಬಂಡ್ರಿ ಲಿಂಗಪ್ಪ ಸಾನ್ನಿಧ್ಯ ವಹಿಸಿದ್ದ ಸಂಡೂರು ವಿರಕ್ತಮಠದ ಪ್ರಭುಮಹಾಸ್ವಾಮೀಜಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ತಿಪ್ಪೇಸ್ವಾಮಿ ಕಿನ್ನೂರೇಶ್ವರ, ತಾಲೂಕಿನ ವಿವಿಧ ಕಲಾವಿದರು, ಹಿರಿ ನಟಿ ಕೋಟೆ ಅಂಜಿನಮ್ಮ, ಕಾಳಾಚಾರಿ, ಮೆಟ್ರಿ, ಎಂ. ಉಮಾಪತಿ, ಎಂ.ಪ್ರಕಾಶ್, ಉಂತಗಲ್ ಕೊಟ್ರಾಬಸಪ್ಪ ಮಾಸ್ತರ್ ಇದ್ದರು.