Advertisement

ನಂದಳಿಕೆ: ಹೊಗೆ ಉಗುಳುವ ಕಾರ್ಖಾನೆಯ ವಿರುದ್ಧ ಅಸಮಾಧಾನದ ಹೊಗೆ

07:27 PM Nov 05, 2020 | mahesh |

ಬೆಳ್ಮಣ್‌: ಕಾರ್ಕಳ ತಾಲೂಕಿನ ನಂದಳಿಕೆಯಲ್ಲಿ ಕಾರ್ಯಾಚರಿಸುತ್ತಿರುವ ಮ್ಯಾಕ್‌ಸನ್ಸ್‌ ಇಂಡಸ್ಟ್ರೀಸ್‌ ಎಂಬ ತ್ಯಾಜ್ಯ ಸಂಸ್ಕ‌ರಣ ಘಟಕದಲ್ಲಿ ಪ್ಲಾಸ್ಟಿಕ್‌ ಸುಟ್ಟ ವಾಸನೆ, ಪ್ಲಾಸ್ಟಿಕ್‌ ಪುಡಿಗುಟ್ಟುವ ಶಬ್ದ ಹಾಗೂ ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ನೀರು ನಿಂತು ಸೊಳ್ಳೆಗಳ ಕಾಟದಿಂದಾಗಿ ಬೇಸತ್ತ ಗ್ರಾಮಸ್ಥರು ಸ್ಥಳೀಯ ಪಂಚಾಯತ್‌ಗೆ ದೂರು ನೀಡಿದ್ದಾರೆ.

Advertisement

ಜಿಲ್ಲೆಯ ವಿವಿಧ ಪಂಚಾಯತ್‌ಗಳ ಎಸ್‌ಎಲ್‌ಆರ್‌ಎಂ ಘಟಕಗಳಿಂದ ಸಂಗ್ರಹಿಸಿದ ತ್ಯಾಜ್ಯಗಳನ್ನು ಸಂಗ್ರಹಿಸಿ ಬಾಟಲಿ, ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಬೇರ್ಪಡಿಸುವ ಈ ಘಟಕದಲ್ಲಿ ಲಾಕ್‌ಡೌನ್‌ ಸಂದರ್ಭ ರಾಶಿ ರಾಶಿ ಬಿದ್ದಿದ್ದ ತ್ಯಾಜ್ಯಗಳನ್ನು ಸುಟ್ಟು ಹಾಕಲಾಗಿದ್ದು ಇಡೀ ಪರಿಸರ ಪ್ಲಾಸ್ಟಿಕ್‌ ಸುಟ್ಟ ವಾಸನೆಯಿಂದ ಜನ ಆಕ್ರೋಶ ವ್ಯಕ್ತಪಡಿಸಿ ಕಾರ್ಖಾನೆಯ ವಿರುದ್ಧ ಪಂಚಾಯತ್‌ಗೆ ದೂರು ನೀಡಿದ್ದರು.

ಪಂಚಾಯತ್‌ನಿಂದ ಎಚ್ಚರಿಕೆ
ಜನವಸತಿ ಪ್ರದೇಶದಲ್ಲಿ ಕೈಗಾರಿಕಾ ವಲಯದ ಹೆಸರಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರ ವಾನಿಗೆ ಪಡೆದು ಕಾರ್ಯಾಚರಿಸುತ್ತಿದ್ದ ಈ ಘಟಕ ಸಂಜೆ 5ರಿಂದ ರಾತ್ರಿ 12ರ ವರೆಗೆ ಪ್ಲಾಸ್ಟಿಕ್‌ ಬಾಟಲಿ ಹುಡಿ ಮಾಡುವ ಕೆಲಸ ಮಾಡುತ್ತಿತ್ತು. ಇತ್ತೀಚೆಗೆ ಕ್ರೋಡೀಕರಣ ಗೊಂಡ ತ್ಯಾಜ್ಯಗಳನ್ನು ಸುಟ್ಟು ಹಾಕಲಾಗಿ ವಾಸನೆಯಿಂದ ತತ್ತರಿಸಿಹೋಗಿದ್ದ ಜನ ಪಂ.ಗೆ ದೂರು ನೀಡಿದ್ದರು.

ಮಂಗಳವಾರ ನಂದಳಿಕೆ ಗ್ರಾ.ಪಂ. ಕಾರ್ಯದರ್ಶಿ ಸಂಜೀವ, ಪಂಚಾಯತ್‌ನ ಮಾಜಿ ಸದಸ್ಯ ಗಿರೀಶ್‌ ಶೆಟ್ಟಿ ಮತ್ತಿತರರು ಭೇಟಿ ನೀಡಿ ಕಾರ್ಖಾನೆಯ ಮಾಲಕರಿಗೆ ಎಚ್ಚರಿಕೆ ನೀಡಿದರಲ್ಲದೆ 10 ದಿನಗಳೊಳಗೆ ಶೇಖರಣೆಗೊಂಡಿರುವ ತ್ಯಾಜ್ಯಗಳನ್ನು ವಿಲೇವಾರಿ ಮಾಡುವಂತೆ ತಿಳಿಸಿದರು.

ವಿವಿಧ ಪಂಚಾಯತ್‌ಗಳ ತ್ಯಾಜ್ಯ ನಂದಳಿಕೆಯಲ್ಲಿ ವಿಲೇವಾರಿ
ಮ್ಯಾಕ್‌ಸನ್ಸ್‌ ಇಂಡಸ್ಟ್ರೀಸ್‌ ಎಂಬ ತ್ಯಾಜ್ಯ ಸಂಸ್ಕ‌ರಣ ಘಟಕದ ಮಾಲಕ ವಿವಿಧ ಗ್ರಾ.ಪಂ.ಗಳಿಂದ ತ್ಯಾಜ್ಯ ಸಂಗ್ರಹಿಸಿ ಬೇರ್ಪಡಿಸಿ ಪ್ಲಾಸ್ಟಿಕ್‌ ಬಾಟಲಿಗಳನ್ನು ನಂದಳಿಕೆಯ ಘಟಕದಲ್ಲಿ ಪುಡಿಮಾಡಿ ಸಾಗಿಸುತ್ತಿದ್ದರು. ಸ್ಥಳೀಯ ಪಂ. ಆಡಳಿತ ಈ ಕಾರ್ಖಾನೆಗೆ ನಿರಾಕ್ಷೇಪಣಾ ಪತ್ರ ನೀಡಿದ ಬಗ್ಗೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ್ದ ಪಂಚಾಯತ್‌ನ ಆಡಳಿತ ವರ್ಗ ಸ್ಥಳೀಯರಿಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.

Advertisement

ಸ್ವಚ್ಛತೆಗೆ ಆದೇಶ
ಈ ಕಾರ್ಖಾನೆಯ ಮಾಲಕರಿಗೆ ತ್ಯಾಜ್ಯಗಳನ್ನು ವಿಲೇವಾರಿ ಮಾಡಿ ಸ್ವಚ್ಛತೆ ಕಾಪಾಡುವಂತೆ ಆದೇಶ ನೀಡಲಾಗಿದೆ. ಮುಂದೆ ದೂರು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
– ಸಂಜೀವ, ನಂದಳಿಕೆ ಗ್ರಾ.ಪಂ. ಕಾರ್ಯದರ್ಶಿ

ಕ್ರಮ ಕೈಗೊಳ್ಳಿ
ಜನವಸತಿ ಪ್ರದೇಶದಲ್ಲಿ ಇಂತಹ ಪರಿಸರ ಮಾರಕ ಕಾರ್ಖಾನೆಯಿಂದ ತೊಂದರೆಯಾಗಿದೆ. ಅಶಕ್ತ, ಅಸೌಖ್ಯದ ಮಂದಿ ಇರುವ ಈ ಪ್ರದೇಶದಲ್ಲಿ ಇಂತಹ ಪ್ಲಾಸ್ಟಿಕ್‌ ತ್ಯಾಜ್ಯ ಸಂಸ್ಕರಣ ಘಟಕ ಕಾರ್ಯಾಚರಿಸುತ್ತಿರುವ ಬಗ್ಗೆ ಜನರಲ್ಲಿ ಆತಂಕ ಎದುರಾಗಿದೆ. ಕಾರ್ಖಾನೆಯವರಿಗೂ ತೊಂದರೆಯಾಗದ ರೀತಿಯಲ್ಲಿ ಪಂಚಾಯತ್‌ ಸ್ಪಂದಿಸಿ ಕ್ರಮ ಕೈಗೊಳ್ಳಬೇಕಾಗಿದೆ.
– ಪವನ್‌ರಾಜ್‌, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next