Advertisement
ಒಂದು ಬಸ್‌ನಲ್ಲಿ ಎಷ್ಟು ಸೀಟುಗಳಿವೆ, ಎಷ್ಟು ಜನರಿಗೆ ಆ ಬಸ್‌ನಲ್ಲಿ ಪ್ರಯಾಣಿಸಲು ಅವಕಾಶವಿದೆ ಮತ್ತು ಬಸ್‌ನ ವೇಗದ ಮಿತಿ ಹೇಗಿರಬೇಕು ಎಂಬುದನ್ನು ಸರಕಾರವು ಮೊದಲು ನಿಗದಿಪಡಿಸಬೇಕಾಗಿದೆ. ಈ ಬಗ್ಗೆ ನಿರ್ದಿಷ್ಟ ಮಾರ್ಗಸೂಚಿಯನ್ನು ರೂಪಿಸಿ ಅದರ ಅನುಷ್ಠಾನಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅತ್ಯವಶ್ಯವಾಗಿದೆ.
Related Articles
Advertisement
ಮೊಬೈಲ್ ಬಳಕೆಗೆ ಕಡಿವಾಣ :
ಇನ್ನು ಗ್ರಾಮೀಣ ಪ್ರದೇಶಗಳ ರಸ್ತೆಗಳಂತೂ ಭಾರೀ ತಿರುವುಗಳಿಂದ ಕೂಡಿರುತ್ತವೆ. ಈ ಬಗ್ಗೆ ಚಾಲಕನಿಗೆ ಅರಿವಿದ್ದರೂ ಕೂಡ ಬಸ್‌ನ ವೇಗವನ್ನು ಕಿಂಚಿತ್ತೂ ಕಡಿಮೆಗೊಳಿಸದೆ ಬಸ್ ಚಲಾಯಿಸುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಚಾಲಕರು ಬಸ್ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡುತ್ತಿರುವುದು ಅತಿಯಾಗಿದೆ. ಅಷ್ಟೇ ಅಲ್ಲದೆ ಚಾಲನೆ ಸಂದರ್ಭದಲ್ಲಿ ಬಸ್‌ನಲ್ಲಿರುವ ಪರಿಚಿತ ಪ್ರಯಾಣಿಕರೊಂದಿಗೆ ಮಾತನಾಡುತ್ತಾ ಚಲಾಯಿಸುವ ಚಾಲಕರಿಗೇನೂ ಕಡಿಮೆ ಇಲ್ಲ. ಬಸ್ ಚಾಲಕನ ಈ ಎಲ್ಲ ಅಜಾಗರೂಕತೆ, ನಿರ್ಲಕ್ಷ್ಯದ ಕಾರಣಗಳಿಂದಾಗಿ ಅದೆಷ್ಟೋ ಅಪಘಾತಗಳು ಸಂಭವಿಸಿ ಹಲವರು ತಮ್ಮ ಪ್ರಾಣ ತೆತ್ತಿದ್ದರೆ ಮತ್ತದೆಷ್ಟೋ ಮಂದಿ ಗಾಯಾಳುಗಳಾಗಿ ನೋವುಂಡಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ನೆರೆಯ ಕಾಸರಗೋಡು ಜಿಲ್ಲೆಯ ಪಾಣತ್ತೂರು ಎಂಬಲ್ಲಿ ಮದುವೆ ದಿಬ್ಬಣದ ಬಸ್ ಮನೆ ಮೇಲೆ ಉರುಳಿ ಏಳು ಮಂದಿ ಸಾವನ್ನಪ್ಪಿದರೆ 31ಮಂದಿ ಗಾಯಗೊಂಡರು. ಕರಾವಳಿ ಜಿಲ್ಲೆಗಳಲ್ಲಿ ಇಂಥ ಅಪಘಾತಗಳು ದಿನನಿತ್ಯ ಎಂಬಂತೆ ಸಂಭವಿಸುತ್ತಿರುತ್ತವೆ. ಹಾಗೆಂದು ಎಲ್ಲ ಅಪಘಾತಗಳಿಗೂ ಚಾಲಕರನ್ನು ದೂರಲಾಗದು. ಕೆಲವೊಮ್ಮೆ ತಾಂತ್ರಿಕ ಸಮಸ್ಯೆ, ಆಕಸ್ಮಿಕ ಸನ್ನಿವೇಶಗಳೂ ಅಪಘಾತಗಳಿಗೆ ಕಾರಣವಾಗುತ್ತವೆ.
ಗಾಯಾಳುಗಳಿಗೆ ತುರ್ತು ಚಿಕಿತ್ಸೆ :
ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಬಡವರು, ಮಧ್ಯಮವರ್ಗದವರು ಎಂಬ ಕೀಳರಿಮೆ ಇಲ್ಲದೆ ಎಲ್ಲ ವರ್ಗದ ಜನರೂ ಪ್ರಯಾಣಿಸುತ್ತಾರೆ. ಆಕಸ್ಮಿಕವಾಗಿ ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುತ್ತದೆ. ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಆಧುನಿಕ ಚಿಕಿತ್ಸಾ ಸೌಲಭ್ಯಗಳು ಲಭ್ಯವಿರುವುದಿಲ್ಲ. ಅಪಘಾತಗಳಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ದೂರದ ಜಿಲ್ಲಾಸ್ಪತ್ರೆಗಳಿಗೆ ಕರೆದೊಯ್ಯುವಾಗ ವೃಥಾ ಕಾಲಹರಣವಾಗಿ ಅವರು ಸಾವನ್ನಪ್ಪುವ ಸಾಧ್ಯತೆಗಳಿರುತ್ತವೆ. ಇಂಥ ಘಟನೆಗಳು ಸಂಭವಿಸುವುದನ್ನು ತಪ್ಪಿಸಲು ಸರಕಾರ ಪ್ರತ್ಯೇಕವಾದ ಯೋಜನೆಯೊಂದನ್ನು ರೂಪಿಸಿ ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಲಭ್ಯವಾಗುವುದನ್ನು ಖಾತರಿಪಡಿಸಬೇಕು.
ಯಂ.ಯಂ.ಕುಂಞಿ ಮೊಂಟೆಪದವು