ಬೆಂಗಳೂರು: ಉದ್ಯಾನ ನಗರಿಯಲ್ಲಿನ ಸಾರ್ವ ಜನಿಕ, ಇ-ಶೌಚಾಲಯಗಳಲ್ಲಿ ತಿಂಗಳಿನಿಂದ ನೀರಿನ ಅಭಾವ ಸೃಷ್ಟಿಯಾಗಿದ್ದು, ವೃದ್ಧರು, ಮಹಿಳೆಯರು
ಹೌದು! ನಗರದಲ್ಲಿ ದಿನದಿಂದ ದಿನಕ್ಕೆ ಜಲಕ್ಷಾಮ ಹೆಚ್ಚಾಗುತ್ತಿದ್ದು, ಐಷಾರಾಮಿ ಹೋಟೆಲ್, ಬೃಹತ್ ಅಪಾರ್ಟ್‌ಮೆಂಟ್‌ಗಳಲ್ಲಿ ಅನಗತ್ಯ ನೀರು ಪೋಲಾಗದಂತೆ ಕ್ರಮವಹಿಸಲು ಜಲಮಂಡಳಿಯು ಆದೇಶ ನೀಡಿದ್ದು, ನೀರನ್ನು ಸಂರಕ್ಷಿಸಲು ನಾನಾ ಪ್ರಯತ್ನಗಳನ್ನು ಮಾಡುತ್ತಿದೆ. ಜತೆಗೆ ಸಾರ್ವಜನಿಕರಲ್ಲೂ ನೀರನ್ನು ಸಾಧ್ಯವಾದಷ್ಟು ಕಡಿಮೆ ಬಳಸಿ ಎಂದು ಮನವಿ ಕೂಡ ಮಾಡಿಕೊಂಡಿದೆ. ಆದರೂ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಇದೀಗ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೂ ನೀರು ಸಿಗದಂತಹ ದುಸ್ಥಿತಿ ಎದುರಾಗಿದೆ.
ರಾಜ್ಯ ರಾಜಧಾನಿಯ 243 ವಾರ್ಡ್ ವ್ಯಾಪ್ತಿಯಲ್ಲಿ ಒಟ್ಟು 803 ಶೌಚಾಲಯಗಳಿದ್ದು, ಅದರಲ್ಲಿ 360 ಸಾರ್ವಜನಿಕ, ಆರು ಸಮುದಾಯ, 229 ಇ- ಶೌಚಾಲಯ, 17 ಮಾಡ್ಯುಲರ್, 10 ಬಯಲು ಮಲ ವಿಸರ್ಜನೆ ಮುಕ್ತ ಮತ್ತು 181 ಪೌರಕಾರ್ಮಿಕರ ಶೌಚಾಲಯಗಳಿವೆ ಎನ್ನುತ್ತವೆ ಬಿಬಿಎಂಪಿ ಮೂಲಗಳು. ಇದರಲ್ಲಿ ಬಹುತೇಕ ಶೌಚಾಲಯಗಳು ಒಂದಲ್ಲ ಒಂದು ಕಾರಣದಿಂದಾಗಿ ಈಗಾಗಲೇ ಮೂಲೆ ಸೇರಿವೆ. ಇದೀಗ, ಉಳಿದ ಕೆಲ ಶೌಚಾಲಯಗಳ ನಿರ್ವಹಣೆಗೂ ನೀರಿನ ಬರ ಬಂದಿದೆ. “ಕೊನೆಗೂ ನಿಮ್ಮ ನಿರೀಕ್ಷೆಗೂ ಮೀರಿ ಶುಚಿಯಾಗಿರುವ ಶೌಚಾಲಯವನ್ನು ಇಲ್ಲಿ ಕಾಣಿರಿ’ ಎಂಬ ಟ್ಯಾಗ್ ಲೈನ್ ಹೊಂದಿರುವ ಆಧುನಿಕ ಇ ಟ್ಲಾಯೆಟ್‌ಗಳನ್ನೇ ಸ್ವತ್ಛಗೊಳಿಸಲು ನೀರಿಲ್ಲದ ಕಾರಣ, ಕೆಲವು ಇ-ಟಾಯ್ಲೆಟ್‌ಗಳ ಮುಂದೆ “ನೋ ವಾಟರ್ ಫಾರ್ ಇ ಟಾಯ್ಲೆಟ್’ ಎಂಬ ಬೋರ್ಡ್‌ಗಳು ಕಂಡುಬಂದರೆ, ಇನ್ನೂ ಕೆಲ ಪ್ರದೇಶಗಳಲ್ಲಿನ ಸಾರ್ವಜನಿಕ ಶೌಚಾಲಯಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೆಲವೆಡೆ ವಾಟರ್ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
ನಗರದಲ್ಲಿ 200ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಇ-ಶೌಚಾಲಯಗಳಲ್ಲಿ ಕೇವಲ 160 ಇ-ಶೌಚಾಲ ಯಗಳಿಗೆ ಟೆಂಡರ್ ಕರೆದಿದ್ದು, ಅವುಗಳಲ್ಲಿಯೂ ನಾನಾ ಸಮಸ್ಯೆಗಳನ್ನು ಕಾಣಬಹುದಾಗಿದೆ. ಟೆಂಡರ್ ತೆಗೆದುಕೊಂಡಿರುವ ಗುತ್ತಿಗೆದಾರರು ಇ-ಟಾಯ್ಲೆಟ್‌ಗಳ ನಿರ್ವಹಣೆಗೆ ಮುಂದಾಗಿದ್ದು, ಈಗಾಗಲೇ ತಾಂತ್ರಿಕ ದೋಷ ಸೇರಿದಂತೆ ನಾನಾ ಸಮಸ್ಯೆಗಳನ್ನು ಸರಿಪಡಿಸಲಾಗುತ್ತಿದ್ದು, ಮುಂದಿನ ಒಂದು ತಿಂಗಳೊಳಗಾಗಿ ಎಲ್ಲಾ ಇ-ಟಾಯ್ಲೆಟ್‌ಗಳು ಸಂಪೂರ್ಣವಾಗಿ ಕಾರ್ಯಾಚರಣೆ ಮಾಡಲಿವೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸುತ್ತಾರೆ.
ಕೆಲ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಯಥೇತ್ಛವಾಗಿ ಕಂಡುಬಂದಿದೆ. ಅಂತಹ ಪ್ರದೇಶಗಳಲ್ಲಿನ ಇ-ಶೌಚಾಲ ಯಗಳ ನಿರ್ವಹಣೆಗೆ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ.
-ಪ್ರವೀಣ್ ಲಿಂಗಯ್ಯ, ಬಿಬಿಎಂಪಿ ಮುಖ್ಯ ಇಂಜಿನಿಯರ್
– ಭಾರತಿ ಸಜ್ಜನ್