Advertisement

ಕೆರೆ ಪುನಶ್ಚೇತನಕ್ಕೆ ಸಾರ್ವಜನಿಕರ ಒತ್ತಡ

03:50 PM Apr 09, 2019 | Team Udayavani |
ಕುಷ್ಟಗಿ: ತಾಲೂಕಿನಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ನಿಡಶೇಸಿ ಕೆರೆ, ತಾವರಗೇರಾದ ರಾಯನ ಕೆರೆ ಅಭಿವೃದ್ಧಿ ಕಾರ್ಯದ ಬೆನ್ನಲ್ಲೆ ತಾಲೂಕಿನ ಉಳಿದ ಕೆರೆಗಳ ಪುನಶ್ಚೇತನಕ್ಕಾಗಿ ಸಾರ್ವಜನಿಕರಿಂದ ಒತ್ತಡ, ಬೇಡಿಕೆ ವ್ಯಕ್ತವಾಗಿದೆ.
ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿ 21 ನೀರಾವರಿ ಕೆರೆಗಳು, 20 ಜೀನುಗು ಕೆರೆಗಳಿದ್ದು ತಾಲೂಕಿನಲ್ಲಿ 7 ಜಿಪಂ ಕೆರೆಗಳಿದ್ದು ಒಟ್ಟಾರೆಯಾಗಿ 48 ಕೆರೆಗಳಿವೆ. ಈ ಬೇಸಿಗೆಯ ಹೊತ್ತಿಗೆ ಪುರ, ನಾರಿನಾಳ, ಹುಲಿಯಾಪುರ ಹಾಗೂ ಜುಮ್ಲಾಪುರ ಕೆರೆಗಳಲ್ಲಿ ಮಾತ್ರ ನೀರಿದೆ. ಉಳಿದೆಲ್ಲವೂ ಕೆರೆ ಬತ್ತಿದ್ದು, ಕೆರೆ ಅಂಗಳದಲ್ಲಿ ಹನಿ ನೀರಿಲ್ಲ. ಈ ಪರಿಸ್ಥಿತಿಯಲ್ಲಿ ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಕ್ಷೀಣಿಸಿದ್ದು, ತಾಲೂಕಿನಾದ್ಯಂತ ಜಲ ಸಮಸ್ಯೆ ಶುರುವಾಗಿದೆ. ಸರ್ಕಾರ ನೀರಿನ ಸಮಸ್ಯೆಗೆ ಕೊಳವೆಬಾವಿ ಕೊರೆಸುವುದು, ಖಾಸಗಿ ಕೊಳವೆ ಮೂಲಕ ನೀರು ಪೂರೈಕೆ, ಟ್ಯಾಂಕರ್‌ ಮೂಲಕ ನೀರು ಪೂರೈಸುವ ಮೂಲಕ ಬಿಡುಗಡೆಯಾಗಿರುವ ಅನುದಾನ ಖರ್ಚು ಮಾಡುತ್ತಿದ್ದು, ಆದರೆ ತಾಲೂಕಿನ ಕೆರೆಗಳ ಪುನಶ್ಚೇತನಕ್ಕೆ ಆದ್ಯತೆ ನೀಡಬೇಕೆಂದು ಒಕ್ಕೊರಲಿನ ಕೂಗು ಕೇಳಿ ಬರುತ್ತಿದೆ.
50 ಲಕ್ಷ ರೂ.: ತಾಲೂಕಿನ ತಳವಗೇರಾ ಹೊರವಲಯದಲ್ಲಿರುವ ಜಿನಗು ಕೆರೆ, ಹಳ್ಳದ ಪ್ರವಾಹಕ್ಕೆ ಕಳಪೆ ವೇಸ್ಟ್‌ವೇರ್‌ ಕೊಚ್ಚಿ ಹೋಗಿದ್ದು, ಸದ್ಯ ಮಳೆಯಾದರೂ ಹನಿ ನೀರು ನಿಲ್ಲದ ಪರಿಸ್ಥಿತಿ ಸದರಿ ಜಿನಗು ಕೆರೆಗೆ ಆಗಿದೆ. ಕೆರೆಯ ಸುತ್ತಮುತ್ತಲು, ಅಚ್ಚುಕಟ್ಟು ಪ್ರದೇಶದಲ್ಲಿ ಮುಳ್ಳು ಬೆಳೆದಿದ್ದು, ನೀರಾವರಿ ಇಲಾಖೆ ನಿರ್ಲಕ್ಷಿಸಿರುವುದು ಕೆರೆಯ ವಾಸ್ತವ ಸ್ಥಿತಿಯನ್ನು ಸಾಕ್ಷೀಕರಿಸುತ್ತಿದೆ. ಕೆರೆಯ ದುಸ್ಥಿತಿ ಕುರಿತು ಮಾಹಿತಿ ಪಡೆದಿದ್ದ ಶಾಸಕ ಅಮರೇಗೌಡ ಪಾಟೀಲ ಬಯ್ನಾಪುರ ಅವರು, ಕೆರೆ ಪುನಶ್ಚೇತನಕ್ಕೆ ಕ್ರಮ ಕೈಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ಕೆರೆಯ ಪುನಶ್ಚೇತನ ಅಂದಾಜು ವೆಚ್ಚ 50 ಲಕ್ಷ ರೂ. ಅಂದಾಜು ವೆಚ್ಚದ ಕ್ರಿಯಾಯೋಜನೆ ಸರ್ಕಾರಕ್ಕೆ
ಸಲ್ಲಿಸಲಾಗಿದೆ. ತಾಲೂಕಿನ ವಣಗೇರಾದಲ್ಲಿ ಸಣ್ಣ ನೀರಾವರಿ ಇಲಾಖೆಯ ಜಿನಗು ಕೆರೆ ಸಹ ಕಳಪೆಯಾಗಿದ್ದರಿಂದ ಹಳ್ಳದ ರಭಸಕ್ಕೆ ಕೊಚ್ಚಿ ಹೋಗಿದ್ದು, ಕೆರೆ ಅಸ್ತಿತ್ವ ಇಲ್ಲದಂತಾಗಿದೆ.
ಕೆರೆ ಮುಚ್ಚುವಷ್ಟು ಮುಳ್ಳು ಕಂಟಿ ಬೆಳೆದಿದ್ದು ಈ ಕೆರೆಗೂ ಪುನಶ್ಚೇತನಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರಿಂದ ಆಗ್ರಹ ವ್ಯಕ್ತವಾಗಿದೆ. ತಾಲೂಕಿನ ನಿಡಶೇಸಿ ಕೆರೆ, ತಾವರಗೇರಾದ ರಾಯನಕೆರೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕಾರ್ಯ ನಡೆದಿದೆ.
ಕೆರೆ ಹೂಳೆತ್ತುವ ಕಾರ್ಯದಿಂದ ಮಳೆಗಾಲದಲ್ಲಿ ನೀರು ನಿಂತು ಅಂತರ್ಜಲ ವೃದ್ಧಿಸುವ ವಿಶ್ವಾಸ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಪುರ ಕೆರೆ ಪುನಶ್ಚೇತನಕ್ಕೆ ಎಲ್‌ಟಿ ಕಂಪನಿ ಮುಂದೆ ಬಂದಿದೆ. ಈ ಬೆಳವಣಿಗೆಯ ಮಧ್ಯೆ ತಾಲೂಕಿನ ಉಳಿದ ಕೆರೆಗಳು ಪುನಶ್ಚೇತನ ಭಾಗ್ಯ ಕಾಣಲಿ ಎನ್ನುವ ಆಶಯ ವ್ಯಕ್ತವಾಗಿದೆ.
ತಳವಗೇರಾ ಜಿನಗು ಕೆರೆ ಕೆರೆ ವಿಸ್ತೀರ್ಣ 16.11 ಎಕರೆ ಮುಳಗುಡೆ ಪ್ರದೇಶವಿದ್ದು, 2.3 ಎಂಸಿಎಫ್‌ಟಿ ನೀರು ನಿಲ್ಲುವ ಸಾಂದ್ರತೆ ಪ್ರದೇಶವಿದೆ. 58 ಮೀಟರ್‌ ವೇಸ್ಟ್‌ವೇರ್‌ ಹಾಗೂ 405 ಮೀಟರ್‌ ಉದ್ದ, 4.9 ಮೀಟರ್‌ ಎತ್ತರ ಹಾಗೂ 2.50 ಮೀಟರ್‌ ಅಗಲದ ಏರಿ ಪುನರ್‌ ನಿರ್ಮಾಣಕ್ಕೆ ಅಂದಾಜು ವೆಚ್ಚದ ಕ್ರಿಯಾ ಯೋಜನೆ ಸರ್ಕಾರಕ್ಕೆ ಪ್ರಸ್ತಾವನೆಯ ವರದಿ ಸಲ್ಲಿಸಲಾಗಿದೆ. ತಾಲೂಕಿನ ವಣಗೇರಾ, ಕಲಕೇರಿ, ಎಸ್‌. ಗಂಗನಾಳ ಜಿನಗು ಕೆರೆ ಪುನಶ್ಚೇತನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ
ಸಲ್ಲಿಸಲಾಗುವುದು.
ರಾಜಶೇಖರ ಕಟ್ಟಿಮನಿ, ಜೆಇ ಸಣ್ಣ ನೀರಾವರಿ ಇಲಾಖೆ
ಮಂಜುನಾಥ ಮಹಾಲಿಂಗಪುರ
Advertisement

Udayavani is now on Telegram. Click here to join our channel and stay updated with the latest news.

Next