Advertisement

ಸಾರ್ವಜನಿಕ ನೀತಿ ಉನ್ನತ ಶಿಕ್ಷಣ ಅಗತ್ಯ: ಅಜೀಂ ಪ್ರೇಮ್‌ಜಿ ವಿವಿ

12:19 PM Dec 06, 2017 | udayavani editorial |

ಹೊಸದಿಲ್ಲಿ : ದೇಶದಲ್ಲಿ ಕ್ರಾಂತಿಕಾರಕ ಸಾಮಾಜಿಕ ಬದಲಾವಣೆಯನ್ನು ಸಾಧಿಸುವ ನಿಟ್ಟಿನಲ್ಲಿ  “ಸಾರ್ವಜನಿಕ ನೀತಿ” ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ಹಾಗೂ ಸಂಶೋಧನಾವಕಾಶವನ್ನು ಕಲ್ಪಿಸುವುದು ಇಂದಿನ ಅಗತ್ಯವಾಗಿದ್ದು ಈ ದಿಶೆಯಲ್ಲಿ ದೇಶದ ವಿಶ್ವವಿದ್ಯಾಲಯಗಳು ಸೂಕ್ತ ಚಿಂತನೆ ನಡೆಸಬೇಕು ಎಂಬ ಅಭಿಪ್ರಾಯವನ್ನು ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯ ವ್ಯಕ್ತಪಡಿಸಿದೆ. 

Advertisement

ಸಾಮಾಜಿಕ ಬದಲಾವಣೆ ಮತ್ತು ಜನಕಲ್ಯಾಣವನ್ನು ಸಾಧಿಸುವ ಗುರಿ ಹೊಂದಿರುವ ಸಾರ್ವಜನಿಕ ನೀತಿ ರೂಪಣೆಯು ಅತ್ಯಂತ ಸಂಕೀರ್ಣ ವಿಷಯವಾಗಿದೆ. ಸಂಕೀರ್ಣ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಸೂಕ್ತ ತಿಳಿವಳಿಕೆಯ ಮೂಲಕ ಅವುಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ಸೂಚಿಸುವುದು ಎಷ್ಟು ಕಠಿನವೋ, ಸಾರ್ವಜನಿಕ ನೀತಿ ರೂಪಣೆ ಕೂಡ ಅಷ್ಟೇ ಕಠಿನವಾದ ಅಧ್ಯಯನ ಯೋಗ್ಯ ವಿಷಯವಾಗಿದೆ. ಸಾರ್ವಜನಿಕ ಸಮಸ್ಯೆ ಎನ್ನುವುದು ತ್ಯಾಜ್ಯ, ರಸ್ತೆ ಹೊಂಡ ಮತ್ತು ಚುನಾವಣೆಗಳಲ್ಲಿ ಧನಶಕ್ತಿಯ ಪಾರಮ್ಯದ ಬಿಕ್ಕಟ್ಟಿನಷ್ಟು ಮೂಲಭೂತವಾಗಿದೆ; ಇವುಗಳಿಗೆ ಪರಿಹಾರ ಕಂಡುಕೊಳ್ಳುವುದು ಸರಳವೂ ಅಲ್ಲ ಸುಲಭವೂ ಅಲ್ಲ ಎಂಬುದನ್ನು ನಾವು ಬಹುಸ್ತರಗಳ ಆಡಳಿತೆಯಲ್ಲಿ ಕಂಡುಕೊಂಡಿದ್ದೇವೆ ಎಂದು ಪ್ರೇಮ್‌ಜೀ ವಿವಿ ಹೇಳಿದೆ.

ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತೆಯೇ ಮೊದಲಾದ ಮಾನವಿಕ ವಿಷಯಗಳು ಸಾರ್ವಜನಿಕ ವ್ಯವಹಾರಗಳನ್ನು ಸಮಗ್ರ ನೆಲೆಯಲ್ಲಿ ಅಧ್ಯಯನ ಮಾಡುತ್ತವೆ; ಆದರೆ ಅವುಗಳ ಮೂಲ ಉದ್ದೇಶ ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರೋಪಾಯವನ್ನು ಕಂಡುಕೊಳ್ಳುವುದಲ್ಲ. ಆದುದರಿಂದ ಈ ನೆಲೆಯಲ್ಲಿ  “ಸಾರ್ವಜನಿಕ ನೀತಿ”ಯು ಅಧ್ಯಯನಾತ್ಮಕ ವಿಷಯವಾಗಿದ್ದು ಸಾಮಾಜಿಕ ಬದಲಾವಣೆ ಸಾಧಿಸಲು ಪೂರಕವಾಗಿದೆ. 

ಸಾರ್ವಜನಿಕ ನೀತಿ ಕುರಿತ ಶಿಕ್ಷಣ ಭಾರತಕ್ಕೆ ತೀರ ಹೊಸದು; ಆದರೆ ಅದು ಅತ್ಯಂತ ಕ್ಷಿಪ್ರಗತಿಯಲ್ಲಿ ಜನಪ್ರಿಯವಾಗುತ್ತಿದೆ. ಈ ಮೊದಲೆಲ್ಲ ಮಧ್ಯಮ ಮಟ್ಟದ ಪೌರ ಸೇವಾ ಸಿಬಂದಿಗಳು ಸಾರ್ವಜನಿಕ ನೀತಿ ರೂಪಣೆಯ ಕೋರ್ಸುಗಳಿಗೆ ಸೇರುತ್ತಿದ್ದರು. ಆದರೆ ಈಗ ಹೊಸದಾಗಿ ಪದವಿ ಶಿಕ್ಷಣ ಪಡೆದಿರುವವರು, ವಿವಿಧ ಹಿನ್ನೆಲೆಯಿಂದ ಬಂದಿರುವ ವೃತ್ತಿಪರರು ಸಾರ್ವಜನಿಕ ನೀತಿ ಸ್ನಾತಕೋತ್ತರ ಶಿಕ್ಷಣಾಪೇಕ್ಷಿಗಳಾಗಿದ್ದಾರೆ. 

ಸಾರ್ವಜನಿಕ ನೀತಿ ರೂಪಣೆ ಮೂಲಕ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರಕಾರಗಳಿಂದ ಹಿಡಿದು ಪಂಚಾಯತ್‌ ಮತ್ತು ಮುನಿಸಿಪಾಲಿಟಿ ವರೆಗಿನ ಆಡಳಿತ ಯಂತ್ರಗಳು ಯತ್ನಿಸುತ್ತಲೇ ಇರುತ್ತವೆ. ಆದರೆ ಅವರ ಯತ್ನಗಳಲ್ಲಿ ವೃತ್ತಿಪರತೆ, ಅಧ್ಯಯನ ಶೀಲತೆ, ಸಂಶೋಧನ ದೃಷ್ಟಿಕೋನ ಇರುವುದಿಲ್ಲ; ಪರಿಣಾಮವಾಗಿ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಹಣದ ಹೊಳೆ ಹರಿಯುವುದಾದರೂ ಅವುಗಳಿಂದ ಅಪೇಕ್ಷಿತ ಫ‌ಲಿತಾಂಶಗಳು ಕಂಡು ಬರುವುದಿಲ್ಲ ಎಂದು ಅಜೀಮ್‌ ಪ್ರೇಮ್‌ಜೀ ವಿವಿ ಅಭಿಪ್ರಾಯಪಟ್ಟಿದೆ.

Advertisement

ಸಾರ್ವಜನಿಕ ಸಮಸ್ಯೆಗಳ ನಿವಾರಣೆಗಾಗಿ ಸಾರ್ವಜನಿಕ ನೀತಿ ರೂಪಿಸುವುದಕ್ಕೆ ಇಂದು ಎಲ್ಲ ಆಡಳಿತ ಸ್ತರಗಳಲ್ಲಿ ಪರಿಣತರ, ಸಲಹೆಗಾರರ, ಸಂಶೋಧನಶೀಲರ, ಉನ್ನತ ಶಿಕ್ಷಣ ಪಡೆದವರ ನೆರವನರು° ಸರಕಾರಗಳು ಯಾಚಿಸುತ್ತಿವೆ. ಅಂತೆಯೇ ದೇಶದ ವಿಶ್ವ ವಿದ್ಯಾಲಯಗಳಲ್ಲಿ ಸಾರ್ವಜನಿಕ ನೀತಿ ಕುರಿತ ಸ್ನಾತಕೋತ್ತರ ಶಿಕ್ಷಣಾವಕಾಶನ್ನು ಆರಂಭಿಸಿದಲ್ಲಿ, ದೇಶದಲ್ಲಿ ಸಾಮಾಜಿಕ ಬದಲಾವಣೆಯ ಕ್ರಾಂತಿಯನ್ನೇ ಸಾಧಿಸಬಹುದಾಗಿದೆ. 

ಸಾರ್ವಜನಿಕ ನೀತಿ ಕುರಿತ ಸ್ನಾತಕೋತ್ತರ ಕೋರ್ಸ್‌ ಉತ್ತಮ ಎನಿಸಬೇಕಾದರೆ ಅದು ಸಾರ್ವಜನಿಕ ನೀತಿಗಳನ್ನು ವೈಜ್ಞಾನಿಕವಾಗಿ ವಾಸ್ತವಿಕವಾಗಿ ವಿಶ್ಲೇಷಿಸುವ, ತುಲನೆ ಮಾಡುವ, ಸಂಶೋಧನೆಗೆ ಹೇತುವಾಗುವ ಕೌಶಲಗಳನ್ನು ನಿರ್ಮಿಸುವಂತಿರಬೇಕು; ಮಾತ್ರವಲ್ಲದೆ ರಾಜಕೀಯ, ರಾಜಕೀಯ ಆರ್ಥಿಕತೆ ಮತ್ತು ಸಾಂಸ್ಥಿಕ ವಿಶ್ಲೇಷಣೆ, ಸಾರ್ವಜನಿಕ ಆಡಳಿತೆ, ಮಾನವ ಶಾಸ್ತ್ರ ಮತ್ತು ನೈತಿಕತೆಯ ಒಳನೋಟಗಳನ್ನು ಹೊಂದಿರುವ ಇತರ ಕೋರ್ಸುಗಳಂತೆ ಸಮಗ್ರ ದೃಷ್ಟಿಕೋನವನ್ನು ಹೊಂದಿರಬೇಕಾಗುತ್ತದೆ. 

2015ರಲ್ಲಿ ಪ್ರಕಟಗೊಂಡ ಮಾಧ್ಯಮ ವರದಿಗಳ ಪ್ರಕಾರ ನೂರಕ್ಕೂ ಅಧಿಕ ಕಂಪೆನಿಗಳು ಭಾರತದಲ್ಲಿ ಲಾಭೋದ್ದೇಶದ ಸುಮಾರು 220 ಸಮಾಜ ಕಲ್ಯಾಣ ಸಾಹಸದ್ಯೋಮಗಳಲ್ಲಿ ಒಟ್ಟು 1.6 ಶತ ಕೋಟಿ ಡಾಲರ್‌ಗಳನ್ನು ಹೂಡಿವೆ. ಸಾರ್ವಜನಿಕ ನೀತಿ ಸ್ನಾತಕೋತ್ತರ ಪದವಿ ಶಿಕ್ಷಣವು ಸಮಾಜ ವಿಜ್ಞಾನ, ಮಾನವಿಕ, ಉದ್ಯಮ ವ್ಯವಸ್ಥಾಪನೆ, ಸಂಶೋಧನ ಕ್ರಮಗಳು ಮತ್ತು ಸಂಖ್ಯಾ ಕೌಶಲ ಮತ್ತು ಸಂಶೋಧನೆಯನ್ನು  ಒಳಗೊಂಡ ಸಮಗ್ರ ಪಠ್ಯ ಕ್ರಮವನ್ನು ಹೊಂದಿರಬೇಕಾಗುತ್ತದೆ.  

ಇಂದು ಸಾರ್ವಜನಿಕ ನೀತಿ ಸ್ನಾತಕೋತ್ತರ ಪದವಿ ಪಡೆದವರಿಗೆ ಸರಕಾರ, ಸರಕಾರೇತರ ಸಂಘಟನೆಗಳು, ಸಮಾಲೋಚಕ ಸಂಸ್ಥೆಗಳು, ಖಾಸಗಿ ಕಂಪೆನಿಗಳು, ಮಾಧ್ಯಮ, ಹಣಕಾಸು ಸಂಸ್ಥೆಗಳು ಮುಂತಾಡೆಗಳಲ್ಲಿ ವೈವಿಧಮಯ ಉದ್ಯೋಗಾವಕಾಶಗಳು ಪರ್ಯಾಪ್ತವಾಗಿ ಇವೆ ಎಂದು ಅಜೀಂ ಪ್ರೇಮ್‌ಜೀ ವಿವಿ ಪ್ರಕಟನೆ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next