ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಪ್ರತಿವರ್ಷ ಸುಮಾರು ಏಳು ಸಾವಿರಕ್ಕೂ ಅಧಿಕ ವಿದ್ಯಾರ್ಥಿ ಪಾಸ್‌ಗಳನ್ನು ನೀಡಲಾಗುತ್ತಿದ್ದು, ಆದರೆ ಬಸ್‌ಗಳಿಲ್ಲ ಎಂಬ ಎಲ್ಲಾ ಆರೋಪ ಕಡೆಗಳಿಂದಲೂ ಕೇಳಿಬರುತ್ತಿದೆ. ಇಂತಹ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೆ.ಎಸ್.ಆರ್.ಟಿ.ಸಿ.ಯಿಂದ ವಿನೂತನ ಸ್ಕೂಲ್ ಬಸ್ ಕಲ್ಪನೆಯಲ್ಲಿ ತಾಲೂಕಿಗೆ 2 ಬಸ್ಸುಗಳನ್ನು ಹಾಕುವುದಂತೆ ಚಿಂತನೆ ನಡೆಸುವಂತೆ ಶಾಸಕ ಹರೀಶ್ ಪೂಂಜ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಸೋಮವಾರ ಇಲ್ಲಿನ ಸಂತೆಕಟ್ಟೆ ಬಳಿಯ ಎಸ್.ಡಿ.ಎಂ. ಕಲಾಭವನದಲ್ಲಿ ಕೆ.ಎಸ್.ಆರ್.ಟಿ.ಸಿ. ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರ ಬೇಡಿಕೆಗಳನ್ನು ಆಲಿಸಿ, ಅಧಿಕಾರಿಗಳಿಗೆ ಸೂಚನೆ ನೀಡಿದರು. ಜತೆಗೆ ಧರ್ಮಸ್ಥಳ-ಮಂಗಳೂರು ರಸ್ತೆಯಲ್ಲಿ ಬೆಳಗ್ಗೆ 8.30ರಿಂದ 9.30ರ ಸಮಯದಲ್ಲಿ ಹೆಚ್ಚಿನ ಬಸ್‌ಓಡಿಸುವಂತೆ ತಿಳಿಸಿದರು.
ಸ್ಟೇಜ್ ಪುನರ್ ವಿಗಂಡನೆ ಚಿಂತನೆ
ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೋಲ್ಪೆದಬೈಲು ಹಾಗೂ ಲಾೖಲ ಪ್ರಸನ್ನ ವಿದ್ಯಾಸಂಸ್ಥೆಯ ಬಳಿ ಎಲ್ಲಾ ನಿಯಮಿತ ನಿಲುಗಡೆಯ ಬಸ್ಸುಗಳಿಗೆ ನಿಲುಗಡೆ ನೀಡುವಂತೆ ಸೂಚನೆ ನೀಡಿದರು. ಜತೆಗೆ ಕೆಎಸ್‌ಆರ್‌ಟಿಸಿ ಓಡುವ ತಾಲೂಕಿನ ರಸ್ತೆಗಳಲ್ಲಿ ಬಸ್ಸಿನ ಸ್ಟೇಜ್ ಪುನರ್ ವಿಗಂಡನೆಯ ಕುರಿತು ಚಿಂತನೆ ನಡೆಸುವಂತೆ ತಿಳಿಸಿದರು.
ಪ್ರತ್ಯೇಕ ಆರ್.ಟಿ.ಓ. ಅಗತ್ಯ
ಪ್ರಸ್ತುತ ಬಂಟ್ವಾಳದಲ್ಲಿ ಆಗಿರುವ ಆರ್.ಟಿ.ಓ. ಕಚೇರಿ ಬೆಳ್ತಂಗಡಿಯಲ್ಲಿ ಆಗಬೇಕಿತ್ತು. ಮುಂದಿನ ದಿನಗಳಲ್ಲಿ ಬೆಳ್ತಂಗಡಿಯಲ್ಲಿ ಆರ್.ಟಿ.ಓ. ಕಚೇರಿ ತೆರೆಯುವುದಕ್ಕೆ ಪ್ರಯತ್ನ ನಡೆಸುತ್ತಿದ್ದೇನೆ. ಆದರೆ ಅಲ್ಲಿಯವರೆಗೆ ವಾರದಲ್ಲಿ ಒಂದು ದಿನದ ಬದಲು ಎರಡು ಅಥವಾ ಮೂರು ದಿನ ಅಧಿಕಾರಿಗಳು ಬೆಳ್ತಂಗಡಿಯಲ್ಲಿ ಲಭ್ಯರಿರುವಂತೆ ವ್ಯವಸ್ಥೆ ಮಾಡುವುದಕ್ಕೆ ಬಂಟ್ವಾಳ ಆರ್.ಟಿ.ಓ. ಜಿ.ಎಸ್.ಹೆಗಡೆ ಅವರಿಗೆ ಶಾಸಕರು ತಿಳಿಸಿದರು.
ಧರ್ಮಸ್ಥಳ- ಮಂಗಳೂರು ಮಧ್ಯೆ ಸಾಮಾನ್ಯ ಬಸ್ಸುಗಳ ಸಂಖ್ಯೆ ಹೆಚ್ಚಳ, ಬಜಾರು-ನೆಲ್ಲಿಪಲ್ಕೆಯ ಬಸ್ಸಿನ ಸಮಯ ಬದಲಾವಣೆ, ನಾರಾವಿ-ವೇಣೂರಿಗೆ ಬಸ್ಸಿನ ವ್ಯವಸ್ಥೆ, ಕುಪ್ಪೆಟ್ಟಿ-ಬಂದಾರು-ಉಜಿರೆ, ಕಕ್ಕೆಪದವು-ಬೆರ್ಕಳ-ಪುಂಜಾಲಕಟ್ಟೆ ಹೀಗೆ ಅನೇಕ ರೂಟ್‌ಗಳಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸುವಂತೆ ಬೇಡಿಕೆ ಕೇಳಿಬಂತು.
15 ವರ್ಷಗಳ ಹಳೆಯ ಖಾಸಗಿ ಬಸ್ಸುಗಳ ಕುರಿತು ಪರಿಶೀಲನೆ ನಡೆಸುವಂತೆ ಶಾಸಕರು ಆರ್.ಟಿ.ಓ.ಗೆ ತಿಳಿಸಿದರು. ಜತೆಗೆ ಬಂಟ್ವಾಳ ಆರ್.ಟಿ.ಓ.ನಲ್ಲಿ ನೀಡುವ ಡ್ರೈವಿಂಗ್ ಲೈಸನ್ಸ್‌ನಲ್ಲಿ ಭಾವಚಿತ್ರ ಸಮರ್ಪಕವಾಗಿರುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು. ಸಭೆಯಲ್ಲಿ ಪುತ್ತೂರು ಕೆ.ಎಸ್.ಆರ್.ಟಿ.ಸಿ. ಡಿಸಿ ನಾಗರಾಜ್ ಶಿರಾಲಿ, ಮಂಗಳೂರು ಡಿಸಿ ದೀಪಕ್ ಕುಮಾರ್, ತಾ.ಪಂ.ಸದಸ್ಯರು, ನ.ಪಂ.ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.