Advertisement
ಈ ಇಲಾಖೆಯಡಿ ಕೆಲಸ ಮಾಡುವ ಸಿಬ್ಬಂದಿ, ಗ್ರಂಥಾಲಯ ನಿರ್ವಹಣೆ ಗಿಂತ ಬೇರೆ ಚಾಕರಿಯಲ್ಲೇ ಕಾಲ ಕಳೆಯುತ್ತಿದ್ದಾ ರೆಂಬ ಆರೋಪ ಕೇಳಿ ಬಂದಿದೆ. ನವನಗರದ ಜಿಲ್ಲಾ ಸಾಂಸ್ಕೃತಿಕ ಸಂಕೀರ್ಣ (ಕಲಾ ಭವನ)ದಲ್ಲಿ ಜಿಲ್ಲಾ ಗ್ರಂಥಾಲಯವಿದ್ದು, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಜಿಲ್ಲಾ ಕಚೇರಿಯೂ ಇಲ್ಲಿಯೇ ಇದೆ. ಜಿಲ್ಲಾ ಗ್ರಂಥಾಲಯದಲ್ಲಿ ಸ್ವತ್ಛತೆಗಾಗಿ ಆರು ಜನ ಸಿಬ್ಬಂದಿ ಇದ್ದಾರೆ. ಅವರೆಲ್ಲ ಗ್ರಂಥಾಲಯ ಸೇವೆಗಿಂತ, ಇಲ್ಲಿನ ಇತರೇ ಸಿಬ್ಬಂದಿಗಳ ಖಾಸಗಿ ಸೇವೆಯೇ ಹೆಚ್ಚು ಮಾಡುತ್ತಾರೆ ಎಂಬ ಆರೋಪವಿದೆ.
Related Articles
Advertisement
3.42ಲಕ್ಷ ನೀರಿಗೆ ಖರ್ಚು: ಜಿಲ್ಲೆಯಲ್ಲಿ 15 ನಗರ ಸ್ಥಳೀಯ ಸಂಸ್ಥೆಗಳಿವೆ (ನಗರಸಭೆ, ಪುರಸಭೆ, ಪಟ್ಟಣಪಂಚಾಯಿತಿ). ಅಲ್ಲದೇ 198 ಗ್ರಾಮ ಪಂಚಾಯಿತಿಗಳಿದ್ದು, ಹೊಸ ಗ್ರಾಪಂ ರಚನೆಗೂ ಮುನ್ನ 163 ಗ್ರಾಪಂಗಳಿದ್ದವು. ಹೊಸ ಗ್ರಾಪಂಗಳಲ್ಲಿ ಗ್ರಂಥಾಲಯಕ್ಕೆ ಅನುಮೋದನೆ ಸಿಕ್ಕಿಲ್ಲ. 163 ಪಂಚಾಯಿತಿ ಗ್ರಂಥಾಲಯಗಳು, 19 ಶಾಖಾ ಗ್ರಂಥಾಲಯಗಳು ಜಿಲ್ಲೆಯಲ್ಲಿವೆ. ಈ 19 ಗ್ರಂಥಾಲಯಗಳಲ್ಲಿ ಬರುವ ಓದುಗರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ತಿಂಗಳಿಗೆ ಬರೋಬ್ಬರಿ 3.42 ಲಕ್ಷ ಖರ್ಚು ಹಾಕಲಾಗುತ್ತಿದೆ. ಈ ಹಣದಲ್ಲಿ ಎಲ್ಲಾ ಗ್ರಂಥಾಲಯಗಳಿಗೂ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಬಹುದು ಎನ್ನುತ್ತಾರೆ ಓದುಗರು.
ಹಂಚಿಕೆಯಾಗದ ಗ್ರಂಥಗಳು : ಜಿಲ್ಲಾ ಕೇಂದ್ರ ಗ್ರಂಥಾಲಯ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಶಾಖಾ ಗ್ರಂಥಾಲಯ ಹಾಗೂ ಪಂಚಾಯಿತಿ ಗ್ರಂಥಾಲಯಗಳಿಗೆ ಹಂಚಿಕೆ ಮಾಡಲು ರ್ಯಾಕ್ (ಕಬ್ಬಿಣ ಕಂಬಿಯ ಚೌಕಟ್ಟು) ಬಂದಿವೆ. ಲಕ್ಷಾಂತರ ಮೊತ್ತದ ಪುಸ್ತಕಗಳು ಬಂದಿವೆ. ಅವುಗಳನ್ನು ಸರಿಯಾಗಿ ವಿತರಿಸಿಲ್ಲ. ರ್ಯಾಕ್‌ಗಳು ಒಂದೊಂದು ವರ್ಷಗಳಿಂದ ತುಕ್ಕು ಹಿಡಿದು ಬಿದ್ದಿವೆ. ಪುಸ್ತಕಗಳ ರಾಶಿ ಹಾಗೆಯೇ ಇವೆ. ಅವು ಓದುಗರ ಕೈ ಸೇರುತ್ತಿಲ್ಲ. ಸರ್ಕಾರದ ಉದ್ದೇಶ ಈಡೇರುತ್ತಿಲ್ಲ.
ಕಾಯಂ ಅಧಿಕಾರಿ ಇಲ್ಲ; ಪ್ರಭಾರ ಹುದ್ದೆ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಜಿಲ್ಲಾಮಟ್ಟದ ಕಾಯಂ ಅಧಿಕಾರಿ ಇಲ್ಲ. ಬೇರೆ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೇ ಇಲ್ಲಿ ಪ್ರಭಾರ ಹುದ್ದೆ ಕೊಡಲಾಗುತ್ತಿದೆ. ಇದು ಕಳೆದ ಹಲವು ವರ್ಷಗಳಿಂದ ಹೀಗೆಯೇ ಮುಂದುವರಿದಿದೆ. ಸದ್ಯ ಜಿಲ್ಲಾ ಗ್ರಂಥಾಲಯ ಅಧಿಕಾರಿಯಾಗಿ ಎರಡು ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡ ಮಲ್ಲನಗೌಡ ರೆಬಿನಾಳ ಎಂಬ ಅಧಿಕಾರಿಗೆ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಜವಾಬ್ದಾರಿಯೂ ಇದೆ. ಹೀಗಾಗಿ ವಾರದ ಆರು ದಿನಗಳಲ್ಲಿ ಒಂದೊಂದು ಜಿಲ್ಲೆಗೆ ಎರಡು ದಿನ ಕಾರ್ಯ ನಿರ್ವಹಿಸಲು ಓಡಾಡಿಕೊಂಡಿದ್ದಾರೆ. ಪೂರ್ಣ ಪ್ರಮಾಣದ ಅಧಿಕಾರಿ ಇಲ್ಲದ ಕಾರಣ, ಇಲ್ಲಿನ ಸಿಬ್ಬಂದಿ-ಅಧಿಕಾರಿಗಳ ಪ್ರಭಾವವೇ ಹೆಚ್ಚು.
ಗ್ರಂಥಾಲಯ-ಕಚೇರಿಯ ಸಮಯವೇನು? : ಕಲಾಭವನದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ಹಾಗೂ ಸಾರ್ವಜನಿಕ ಗ್ರಂಥಾಲಯ ಜಿಲ್ಲಾ ಕಚೇರಿ ಕೂಡ ಇದೆ. ಕಚೇರಿ ಬೆಳಗ್ಗೆ 10ರಿಂದ ಸಂಜೆ 5:30ರ ವರೆಗೆ ಕಾರ್ಯ ನಿರ್ವಹಿಸಲಿದೆ. ಗ್ರಂಥಾಲಯ ಬೆಳಗ್ಗೆ 8:30ರಿಂದ ರಾತ್ರಿ 8ರ ವರಗೆ ತೆರೆದಿರುತ್ತದೆ. ಪುಸ್ತಕ ವಿಭಾಗ ಬೆಳಗ್ಗೆ 8-30ರಿಂದ ರಾತ್ರಿ 7:30ರ ವರೆಗೆ ತೆರೆದಿರುತ್ತಿದ್ದು, ಪ್ರತಿ ಸೋಮವಾರ, 2ನೇ ಮಂಗಳವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಿಂದ ಗ್ರಂಥಾಲಯ ಕಾರ್ಯ ನಿರ್ವಹಿಸುವುದಿಲ್ಲ.
ಇಲಾಖೆಯಲ್ಲಿ ಸುಧಾರಣೆ ತರಬೇಕಾದ ಕೆಲಸ ಬಹಳಷ್ಟಿವೆ. ಎಲ್ಲವೂ ಬಹಿರಂಗವಾಗಿ ಹೇಳಲಾಗಲ್ಲ. ಎರಡು ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡಿದ್ದೇನೆ. ಜಿಲ್ಲಾ ಗ್ರಂಥಾಲಯದಲ್ಲಿ 6 ಜನ ಸ್ವತ್ಛತೆ ಸಿಬ್ಬಂದಿ ಇದ್ದಾರೆ. ಅವರನ್ನು ಕಡಿತಗೊಳಿಸಿ, ಬೇರೆ ಗ್ರಂಥಾಲಯಕ್ಕೆ ನಿಯೋಜಿಸಬೇಕಿದೆ. ಕುಡಿಯುವ ನೀರಿಗಾಗಿ ಹೆಚ್ಚು ಹಣ ಖರ್ಚಾಗುತ್ತಿದ್ದು, ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಚಿಂತನೆ ನಡೆದಿದೆ. ಯಾರು ಎಷ್ಟೇ ಪ್ರಭಾವ ಬೀರಿದರೂ ಜಿಲ್ಲಾ ಗ್ರಂಥಾಲಯ ಇಲಾಖೆ ಸುಧಾರಿಸುವ ನನ್ನ ಕೆಲಸದಿಂದ ವಿಮುಖನಾಗಲ್ಲ. –ಮಲ್ಲಿಕಾರ್ಜುನ ರೆಬಿನಾಳ, ಜಿಲ್ಲಾ ಗ್ರಂಥಾಲಯ ಅಧಿಕಾರಿ, ಬಾಗಲಕೋಟೆ
-ಶ್ರೀ ಶೈಲ ಕೆ. ಬಿರಾದಾರ