ಮೂಡುಬಿದಿರೆ: ಪಡುಮಾರ್ನಾಡು ಗ್ರಾ.ಪಂ. ವ್ಯಾಪ್ತಿಯ ಮೂಡುಮಾರ್ನಾಡು ಗ್ರಾಮದ ಮಡ್ಡೇಲು ಬಳಿ 1.2 ಎಕ್ರೆ ಸರಕಾರಿ ಜಾಗದಲ್ಲಿ ರೂ. 15ರಿಂದ 20 ಲಕ್ಷ ವೆಚ್ಚದಲ್ಲಿ ಮೈದಳೆಯಲಿರುವ ಸಾರ್ವಜನಿಕ ಹಿಂದೂ ರುದ್ರಭೂಮಿಯ ನಿರ್ಮಾಣಕ್ಕೆ ಶಾಸಕ ಉಮಾನಾಥ ಎ. ಕೋಟ್ಯಾನ್ ಶನಿವಾರ ಶಿಲಾನ್ಯಾಸ ನೆರವೇರಿಸಿದರು.
`ಪಡುಮಾರ್ನಾಡು ಗ್ರಾ.ಪಂ. ನಲ್ಲಿ ಶ್ಮಶಾನವಿಲ್ಲದ ಕೊರತೆ ಕಾಡುತ್ತಿತ್ತು. 1998-99ರಲ್ಲಿ ಶ್ಮಶಾನಕ್ಕಾಗಿ ಮೀಸಲಿರಿಸಿದ್ದ ಈ ಜಾಗದಲ್ಲಿ ಶ್ಮಶಾನ ನಿರ್ಮಾಣದ ಕನಸು 23 ವರ್ಷಗಳ ಬಳಿಕ ನನಸಾಗುವ ದಿನ ಸನ್ನಿಹಿತವಾಗಿದೆ. ತನ್ನ ಶಾಸಕರ ನಿಧಿಯಿಂದ ರೂ. 5 ಲಕ್ಷ , ಪಂಚಾಯತ್‌ನಿಂದ ರೂ. 6 ಲಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಮೂಲಕ ರೂ. 2 ಲಕ್ಷ ಒದಗಿಬರಲಿದ್ದು ಇತರ ಮೂಲಗಳಿಂದಲೂ ಅನುದಾನ ಹರಿದುಬಂದು ಈ ಕಾಮಗಾರಿ ಶೀಘ್ರವಾಗಿ ನಡೆಯಲಿದೆ’ ಎಂದು ಶಾಸಕರು ಹೇಳಿದರು.
ಪಂಚಾಯತ್ ಅಧ್ಯಕ್ಷೆ ಕಲ್ಯಾಣಿ, ಉಪಾಧ್ಯಕ್ಷ ಅಭಿನಂದನ್ ಬಳ್ಳಾಲ್, ಮಾಜಿ ಅಧ್ಯಕ್ಷ ಶ್ರೀನಾಥ್ ಸುವರ್ಣ ಸಹಿತ ಸದಸ್ಯರ ಪೈಕಿ ವಿಶ್ವನಾಥ, ಟೆಸ್ಲಿನಾ, ನಿತಿನ್, ಮಲ್ಲಿಕಾ ಶೆಟ್ಟಿ, ಸತೀಶ್ ಕರ್ಕೇರ, ಸಂಪ, ಊರ ಗಣ್ಯರು ಉಪಸ್ಥಿತರಿದ್ದರು. ಪಂ. ಅಭಿವೃದ್ದಿ ಅಧಿಕಾರಿ ಸಾಯೀಶ ಚೌಟ ನಿರೂಪಿಸಿದರು.
ದರೆಗುಡ್ಡೆ ಗ್ರಾ.ಪಂ. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ:
ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು ದರೆಗುಡ್ಡೆ ಗ್ರಾ.ಪಂ. ವ್ಯಾಪ್ತಿಯ ಕೆಲ್ಲಪುತ್ತಿಗೆ ಕೆಂಪುಗುಡ್ಡೆಯಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮತ್ತು ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ದರೆಗುಡ್ಡೆ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಎಂಆರ್‌ಪಿಎಲ್ ಪ್ರಾಯೋಜಿತ (ರೂ.13.75 ಲಕ್ಷ)ಅತ್ಯಾಧುನಿಕ ಶೌಚಾಲಯ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಪಣಪಿಲ ಸ.ಹಿ.ಪ್ರಾ.ಶಾಲೆಗೆ ಭೇಟಿ ನೀಡಿದರು.
ದರೆಗುಡ್ಡೆ ಗ್ರಾ.ಪಂ. ಅಧ್ಯಕ್ಷೆ ತುಳಸೀ ಮೂಲ್ಯ, ಉಪಾಧ್ಯಕ್ಷ, ಸರಕಾರಿ ಪ್ರೌಢಶಾಲಾ ಸಮಿತಿ ಕಾರ್ಯಾಧ್ಯಕ್ಷ ಅಶೋಕ ಶೆಟ್ಟಿ ಬೇಲೊಟ್ಟು, ಗ್ರಾ.ಪಂ. ಸದಸ್ಯರಾದ ಸಂತೋಷ್ ಪೂಜಾರಿ, ಪ್ರಸಾದ್ ಪೂಜಾರಿ, ನಳಿನಿ, ಗಂಗಾ, ಶಶಿಕಲಾ, ಊರ ಪ್ರಮುಖರ ಪೈಕಿ ಸದಾನಂದ ಶೆಟ್ಟಿ, ಜಗದೀಶ ಕೋಟ್ಯಾನ್, ಸಮಿತ್‌ರಾಜ್ ದರೆಗುಡ್ಡೆ, ಸನ್ಮತ್ ಜೈನ್, ಸಂದೀಪ್ ಸುವರ್ಣ ಮೊದಲಾದವರಿದ್ದರು.