ಚಿಕ್ಕಮಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ಚಾರಣಕ್ಕೆಂದು ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಕೇವಲ ಚಾರಣ ಮಾಡದೆ, ನೈಸರ್ಗಿಕ ಶ್ರೀಮಂತಿಕೆಯ ಜಾಗಗಳಲ್ಲಿ ಮೋಜು ಮಸ್ತಿ ಮಾಡಿ ಪರಿಸರ ಹಾಳು ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ.
ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ವಾರಾಂತ್ಯದಲ್ಲಿ ಜನಜಾತ್ರೆ ಉಂಟಾಗಿದೆ. ಪ್ರವಾಸಿಗರು ಸಾಲುಕಟ್ಟಿ ಇಲ್ಲಿಗೆ ಬರುತ್ತಿದೆ, ಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದೆ.
ಪ್ರವಾಸಿ ಸ್ಥಳಗಳಿಗೆ ಸರ್ಕಾರದ ಆದೇಶ ಹೊರಬೀಳುತ್ತಿದ್ದಂತೆ ಖಾಕಿ ಹೈ ಅಲರ್ಟ್ ಘೋಷಿಸಿದೆ. ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ತೆರಳುವ ಪ್ರವಾಸಿಗರಿಗೆ ಖಡಕ್ ಸೂಚನೆ ನೀಡಲಾಗಿದೆ. ಓರ್ವ ಡಿವೈಎಸ್ಪಿ, ಓರ್ವ ಸಿಪಿಐ, ಆರು ಪಿಎಎಸೈ ಸೇರಿ 60 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಪ್ರವಾಸಿಗರ ಮೋಜು-ಮಸ್ತಿಗೆ ಬ್ರೇಕ್ ಹಾಕಲು ಮುಂದಾದ ಪೊಲೀಸ್ ಇಲಾಖೆ ಪ್ಲಾಸ್ಟಿಕ್, ಮದ್ಯ ಕೊಂಡೊಯ್ಯುದನ್ನು ಬ್ಯಾನ್ ಮಾಡಿದೆ. ಪ್ರವಾಸೋದ್ಯಮ ಸಿಬ್ಬಂದಿ ಪ್ರತಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ.
ಶೋಲಾರಣ್ಯ ಉಳಿಸಿ ಎಂಬ ಪರಿಸರಾಸಕ್ತರ ಆಗ್ರಹಕ್ಕೆ ಜಿಲ್ಲಾಡಳಿತ ಸ್ಪಂದಿಸಿದೆ.