Advertisement

ಪಬ್ಲಿಕ್‌ ಫ್ರಿಡ್ಜ್: ಹಸಿದವರಿಗೆ, ದುರ್ಬಲರಿಗೆ ಇದುವೇ ಬ್ರಿಡ್ಜ್

04:27 PM Jul 21, 2018 | |

ಊಟವಾದ ನಂತರ ಉಳಿಯುವ ಆಹಾರವನ್ನು ಏನು ಮಾಡುತ್ತೇವೆ? ಒಂದೋ ಕಸದಬುಟ್ಟಿಗೆ ಎಸೆಯುತ್ತೇವೆ, ಇಲ್ಲವಾದರೆ ಫ್ರಿಡ್ಜ್ನಲ್ಲಿ ಎತ್ತಿಡುತ್ತೇವೆ. ಇವತ್ತು ಫ್ರಿಡ್ಜ್ ಸೇರಿದ ಆಹಾರ, ಸ್ವಲ್ಪ ತಡವಾಗಿಯಾದರೂ ಮತ್ತೆ ಸೇರುವುದು ಕಸದಬುಟ್ಟಿಗೇ. ಹೀಗೆ ಬೆಂಗಳೂರಿನ ಮನೆ ಮನೆಯ ಫ್ರಿಡ್ಜ್ನಿಂದ ಪ್ರತಿನಿತ್ಯ ಕಸದಬುಟ್ಟಿ ಸೇರುವ ಆಹಾರದ ಪ್ರಮಾಣವನ್ನು ಕಲ್ಪಿಸಿಕೊಳ್ಳಲೂ ಆಗದು. ಆದರೆ, ಇಲ್ಲೊಂದು ಫ್ರಿಡ್ಜ್ ಇದೆ. ಅದರಲ್ಲಿಟ್ಟ ಆಹಾರ ವ್ಯರ್ಥವಾಗುವುದೇ ಇಲ್ಲ. ಯಾಕಂದ್ರೆ, ಇದು ಹಸಿದವರ ಹೊಟ್ಟೆಯನ್ನು ತಣ್ಣಗಿಡಲೆಂದೇ ಇರುವ ಫ್ರಿಡ್ಜ್. ಮನೆಯಲ್ಲಿ ಉಳಿದ ಆಹಾರವನ್ನು ಇದರಲ್ಲಿಟ್ಟು, ಬೆಚ್ಚಗಿನ ಹೃದಯದಿಂದ ನೀವು ಮನೆ ಸೇರುವಷ್ಟರಲ್ಲಿ, ಆ ಆಹಾರ ಸೇರಬೇಕಾದಲ್ಲಿ ಸೇರುತ್ತದೆ. ಫ್ರಿಡ್ಜ್ನಿಂದ ಆಹಾರ ತೆಗೆದುಕೊಂಡ ಹಸಿದ ಜೀವವೊಂದು ನಿಮ್ಮನ್ನು ಹರಸುತ್ತದೆ.

Advertisement

ಎಲ್ಲಿದೆ ಈ ಫ್ರಿಡ್ಜ್?
ಈ ಪಬ್ಲಿಕ್‌ ಫ್ರಿಡ್ಜ್ ಇರುವುದು ಬಿಟಿಎಂ ಎರಡನೇ ಹಂತದಲ್ಲಿ. ಫ್ರಿಡ್ಜ್ ಅನ್ನು ಇಲ್ಲಿ ಇಟ್ಟಿರುವವರು ಚೆನ್ನೈನ ವೈದ್ಯೆ ಡಾ. ಐಸಾ ಫಾತಿಮಾ ಜಾಸ್ಮಿನ್‌. ಮೊದಲಿನಿಂದಲೂ ಐಸಾರಿಗೆ, ಆಹಾರ ಪೋಲು ಮಾಡುವುದೆಂದರೆ ಆಗದು. ಮನೆಯಲ್ಲಿ ಆಹಾರ ಮಿಕ್ಕಿದರೆ, ಅದನ್ನು ರಸ್ತೆಯಲ್ಲಿ ಯಾರಿಗಾದರೂ ಕೊಡಬಹುದಾ ಎಂದು ಹುಡುಕಿಕೊಂಡು ಹೋಗುತ್ತಿದ್ದವರು ಅವರು. ಆದರೆ, ಹೆಚ್ಚಿನವರು ಇವರು ಕೊಟ್ಟ ಆಹಾರ ಸ್ವೀಕರಿಸಲು ಹಿಂಜರಿಯುತ್ತಿದ್ದರು, ಊಟ ಹಳಸಿರಬಹುದೆಂದು ಸಂಶಯಿಸುತ್ತಿದ್ದರು. ಆಗ ಅವರಿಗೊಂದು ಯೋಚನೆ ಬಂತು. ಅದುವೇ ವಿದೇಶಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಕಮ್ಯುನಿಟಿ ಫ್ರಿಡ್ಜ್; ಅಂದರೆ, ಸಾರ್ವಜನಿಕ ಸ್ಥಳದಲ್ಲಿ ಫ್ರಿಡ್ಜ್ ಇಟ್ಟು, ಆಹಾರ ಸಂಗ್ರಹಿಸುವುದು. ಹಾಗೆ ಮಾಡುವುದರಿಂದ, ಕೊಡುವವರಿಗೆ ಮತ್ತು ತೆಗೆದುಕೊಳ್ಳುವವರಿಗೆ ಇಬ್ಬರಿಗೂ ಅನುಕೂಲವಾಗುತ್ತದೆ ಎಂದು ಯೋಚಿಸಿದರು.  

ಪಬ್ಲಿಕ್‌ ಫೌಂಡೇಶನ್‌
ನಂತರ ಪಬ್ಲಿಕ್‌ ಫೌಂಡೇಶನ್‌ ಎಂಬ ಸಂಸ್ಥೆಯೊಂದನ್ನು ಚೆನ್ನೈನಲ್ಲಿ ಸ್ಥಾಪಿಸಿದ ಐಸಾ, ಅಯ್ಯಮಿಟ್ಟು ಉನ್‌ (ನೀವು ಊಟ ಮಾಡುವ ಮುನ್ನ, ಹಸಿದವರ ಹೊಟ್ಟೆ ತುಂಬಿಸಿ) ಎಂಬ ಪ್ರಾಜೆಕ್ಟ್ ಶುರುಮಾಡಿದರು. ಅದರ ಅಂಗವಾಗಿ, ಚೆನ್ನೈನಲ್ಲಿ ನಾಲ್ಕು ಫ್ರಿಡ್ಜ್ಗಳನ್ನು ಇಟ್ಟರು. ಅದಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿತು. ಪ್ರತಿದಿನವೂ 8-10 ಸಾವಿರ ಮೌಲ್ಯದ ಆಹಾರ ಪದಾರ್ಥಗಳು ಸಂಗ್ರಹವಾಗಿ, ಕನಿಷ್ಠ 100-150 ಜನರ ಹಸಿವು ನೀಗಿಸುವಲ್ಲಿ ಪ್ರಾಜೆಕ್ಟ್ ಯಶಸ್ವಿಯಾಯಿತು. ಆ ಪ್ರಾಜೆಕ್ಟ್‌ನ ಮುಂದಿನ ಹಂತವಾಗಿ, ಕಳೆದ ನವೆಂಬರ್‌ನಲ್ಲಿ ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಫ್ರಿಡ್ಜ್ ಇಡಲಾಗಿದೆ. ಇಲ್ಲಿ ಪ್ರತಿದಿನ 20-25 ಮಂದಿ ದುರ್ಬಲರು ತಮ್ಮ ಹಸಿವು ನೀಗಿಸಿಕೊಳ್ಳುತ್ತಾರೆ. 

ಆಹಾರ ಹೇಗಿರಬೇಕು?
ನಿಮ್ಮ ಮನೆಗಳಲ್ಲಿ ವ್ಯರ್ಥವಾಗುವ ಆಹಾರವನ್ನು, ಸರಿಯಾದ ರೀತಿಯಲ್ಲಿ ಪ್ಯಾಕ್‌ ಮಾಡಿ ತಂದು ಇದರಲ್ಲಿಡಬೇಕು. ಪೊಟ್ಟಣದ ಮೇಲೆ, ಆಹಾರವನ್ನು ತಯಾರಿಸಿದ ದಿನಾಂಕ ಮತ್ತು ಸಮಯ, ಎಕ್ಸ್‌ಪೈರಿ ದಿನಾಂಕ ಮತ್ತು ಆಹಾರದ ಹೆಸರು ನಮೂದಿಸಬೇಕು. ದಾನಿಗಳು ಇಡುವ ಆಹಾರದ ವಿವರಗಳನ್ನು ಒಂದು ರೆಕಾರ್ಡ್‌ ಬುಕ್‌ನಲ್ಲಿ ದಾಖಲಿಸಲಾಗುತ್ತದೆ. ಯಾರು ಎಷ್ಟು ಆಹಾರ ನೀಡಿದ್ದಾರೆ ಮತ್ತು ಆ ಆಹಾರವನ್ನು ಯಾರು ತೆಗೆದುಕೊಳ್ಳುತ್ತಾರೆ ಎಂಬುದನ್ನು ಗಮನಿಸಲು ಸಿಬ್ಬಂದಿಯಿದ್ದಾರೆ. 

ವಸ್ತುಗಳನ್ನೂ ಇಡಬಹುದು
ಫ್ರಿಡ್ಜ್ನ ಪಕ್ಕದಲ್ಲಿ ಒಂದು ಶೆಲ್ಫ್ ಕೂಡ ಇದ್ದು, ಅಲ್ಲಿ ನಿಮಗೆ ಬೇಡ ಅನ್ನಿಸಿದ ಹಳೆಯ ಬಟ್ಟೆ, ಪುಸ್ತಕ, ಆಟಿಕೆ ಮುಂತಾದವುಗಳನ್ನು ಇಡಬಹುದು. ಆದರೆ, ಎಲ್ಲ ವಸ್ತುಗಳೂ ಉಪಯೋಗಿಸಲು ಯೋಗ್ಯವಾಗಿರಬೇಕು. ಯಾರು ಬೇಕಾದರೂ ಇಲ್ಲಿಂದ ಆಹಾರ ಮತ್ತು ವಸ್ತುಗಳನ್ನು ಬಳಸಬಹುದು. ಹಳೆಯ ಬಟ್ಟೆ, ಆಟಿಕೆಯಂಥ ವಸ್ತುಗಳನ್ನು ಬಡ ಮಕ್ಕಳು ತೆಗೆದುಕೊಂಡು ಹೋಗುತ್ತಾರೆ. ಪ್ರತಿದಿನ ಬೆಳಗ್ಗೆ 8ರಿಂದ ರಾತ್ರಿ 8 ರವರೆಗೆ ಫ್ರಿಡ್ಜ್ ತೆರೆದಿರುತ್ತದೆ. 

Advertisement

ಏನೇನು ಇಡಬಹುದು?
– ಸೀಲ್‌ ಆಗಿರುವ ನೀರಿನ ಬಾಟಲಿ, ಜ್ಯೂಸ್‌
– ಬಿಸ್ಕೆಟ್ಸ್‌
– ಡ್ರೈ ಸ್ನ್ಯಾಕ್ಸ್‌
– ಟಿನ್‌ನಲ್ಲಿಟ್ಟ ಆಹಾರ
– ತಾಜಾ ಹಣ್ಣು-ತರಕಾರಿ
– ಮನೆಯಲ್ಲಿ ಬೇಯಿಸಿದ ಆಹಾರ (ಸರಿಯಾದ ರೀತಿಯಲ್ಲಿ ಪ್ಯಾಕ್‌ ಮಾಡಿರಬೇಕು. ಆಹಾರ ಎರಡು ದಿನಕ್ಕಿಂತ ಜಾಸ್ತಿ ಹಳೆಯದಾಗಿರಬಾರದು)
– ಎಕ್ಸ್‌ಪೈರಿ ದಿನಾಂಕ ಇರುವ ಆಹಾರದ ಪ್ಯಾಕ್‌

ಯಾವುದನ್ನು ಇಡಬಾರದು?
– ಹಸಿ ಮೊಟ್ಟೆ, ಹಸಿಮೀನು, ಹಸಿಮಾಂಸ
– ಅರ್ಧ ತಿಂದು ಉಳಿದ ಆಹಾರ
– ಅರ್ಧ ತೆರೆದ ಹಾಲಿನ ಪ್ಯಾಕ್‌
– ಈ ಮೊದಲೇ ಫ್ರಿಡ್ಜ್ನಲ್ಲಿಡಲ್ಪಟ್ಟ ಆಹಾರ
– ಅನ್‌ರಿಜಿಸ್ಟರ್‌x ಮಳಿಗೆಯ ಆಹಾರಗಳು
– ಮದ್ಯ
– ಕೊಳೆತ ಹಣ್ಣು, ತರಕಾರಿ
– ಎಕ್ಸ್‌ಪೈರಿ ದಿನಾಂಕ ಮೀರಿದ ಆಹಾರ

ಅನಗತ್ಯ ಎನಿಸಿದರೆ, ಇಲ್ಲಿ ಇಡಿ…
ಬಟ್ಟೆ, ಪುಸ್ತಕಗಳು, ಶೂ, ಪಾತ್ರೆ, ದಿನೋಪಯೋಗಿ ವಸ್ತುಗಳು

ಅದೆಷ್ಟೋ ಬಡಮಕ್ಕಳು ಹಾಗೂ ದುರ್ಬಲರಿಗೆ ಈ ಫ್ರಿಡ್ಜ್ ಆಧಾರವಾಗಿದೆ. ಸುತ್ತಮುತ್ತ ಇರುವ ಕಟ್ಟಡ ನಿರ್ಮಾಣ ಕಾರ್ಮಿಕರು, ಇದರ ಪ್ರಯೋಜನ ಪಡೆದುಕೊಳ್ಳುತ್ತಾರೆ. ಜ್ಯೂಸು, ಹಣ್ಣು, ತರಕಾರಿಗಳಂಥ ವಸ್ತುಗಳು ಫ್ರಿಡ್ಜ್ನಲ್ಲಿ ಸಿಕ್ಕಾಗ ಅವರ ಕಣ್ಣಲ್ಲೊಂದು ಮಿಂಚು ಮೂಡುತ್ತದೆ. ನಿರ್ಗತಿಕ ಮುದುಕರು, ಭಿಕ್ಷುಕರು ಹಾಗೂ ಬಡಮಕ್ಕಳಿಗೆ ಈ ಫ್ರಿಡ್ಜ್ ನಿಜಕ್ಕೂ ಕಲ್ಪವೃಕ್ಷವೇ ಅನ್ನುತ್ತಾರೆ, ಇಲ್ಲಿನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಹರೀಶ್‌ ಕುಮಾರ್‌. 

ಮನೆಯಲ್ಲಿ ಹತ್ತಾರು ಜನಕ್ಕೆ ಅಡುಗೆ ಮಾಡಿರುತ್ತಾರೆ. ಯಾವುದೋ ಕಾರಣದಿಂದ ಒಂದಿಬ್ಬರಿಗಾಗುವಷ್ಟು ಊಟ ಉಳಿದುಬಿಡುತ್ತದೆ.  ಜಾಸ್ತಿ ಉಳಿದಿದ್ದರೆ ಯಾರಿಗಾದರೂ ಕೊಡಬಹುದಿತ್ತು. ಇಷ್ಟೇ ಅಲ್ಲವಾ ಉಳಿದಿರೋದು, ಎಸೆದುಬಿಡೋಣ ಅಂತ ಜನ ಯೋಚಿಸುತ್ತಾರೆ. ಹೀಗೆ, ಪ್ರತಿನಿತ್ಯ ತಿನ್ನಲು ಯೋಗ್ಯವಾದ ಟನ್‌ಗಟ್ಟಲೆ ಆಹಾರ ಕಸದಬುಟ್ಟಿ ಸೇರುತ್ತದೆ. ನೀವೇ ಯೋಚಿಸಿ, ಇಲ್ಲಿ ಊಟವೂ ಇದೆ, ಹಸಿದವರೂ ಇದ್ದಾರೆ. ಆದರೆ, ಊಟ ಹಸಿದವರ ಹೊಟ್ಟೆ ಸೇರುತ್ತಿಲ್ಲ. ದೊಡ್ಡ ಪ್ರಮಾಣದಲ್ಲಿ ವ್ಯರ್ಥವಾಗುತ್ತಿರುವ ಆಹಾರವನ್ನು, ಗೌರವಯುತ ರೀತಿಯಲ್ಲಿ ಹಸಿದವರಿಗೆ ತಲುಪಿಸುವುದು ಪಬ್ಲಿಕ್‌ ಫ್ರಿಡ್ಜ್ನ ಉದ್ದೇಶ. ಇಂಥ ಫ್ರಿಡ್ಜ್ಗಳನ್ನು ಎಲ್ಲ ಕಡೆ ಇಟ್ಟರೆ, ಆಹಾರ ಪೋಲಾಗುವುದನ್ನು ಕೊಂಚ ಮಟ್ಟಿಗೆ ತಡೆಯಬಹದಲ್ಲವೆ?
– ಡಾ. ಐಸಾ ಫಾತಿಮಾ ಜಾಸ್ಮಿನ್‌, ಪಬ್ಲಿಕ್‌ ಫೌಂಡೇಶನ್‌ ಸ್ಥಾಪಕಿ (ಚೆನ್ನೈ)

ಎಲ್ಲಿದೆ ಈ ಫ್ರಿಡ್ಜ್?
40, 3ನೇ ಮುಖ್ಯರಸ್ತೆ, 5ನೇ ಪೇಸ್‌, ಡಾಲರ್‌ ಲೇಔಟ್‌, ಬಿಟಿಎಂ 2ನೇ ಹಂತ 

ಪ್ರಿಯಾಂಕಾ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next