Advertisement

ಮೋಮೊ ವ್ಯಾಮೋಹ ಎಚ್ಚರ!

06:00 AM Nov 12, 2018 | Team Udayavani |

ಬೆಂಗಳೂರು: ಬ್ಲೂವೇಲ್‌ ನಂತರ ಶಾಲಾ ಮಕ್ಕಳನ್ನು ಸೆಳೆಯುತ್ತಿರುವ ಇಂಟರ್‌ನೆಟ್‌ ಗೇಮ್‌ ಮೋಮೊ ಬಗ್ಗೆ ಪೋಷಕರಲ್ಲಿ ಆತಂಕ ಸೃಷ್ಟಿಯಾಗಿದೆ. ಹೀಗಾಗಿ, ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮೋಮೊ ಆಟದ ವ್ಯಾಮೋಹಕ್ಕೆ ಒಳಗಾಗದಂತೆ  ಶಾಲೆಯ ಮುಖ್ಯಸ್ಥರು, ಪಾಲಕರು, ಪೋಷಕರು ಎಚ್ಚರ ವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

Advertisement

ಈ ಸಂಬಂಧ ಯಾವುದೇ ಪ್ರಕರಣ ಅಥವಾ ಪಾಲಕ, ಪೋಷಕರಿಂದ ದೂರು ಬಂದರೆ ಗಂಭೀರವಾಗಿ ಪರಿಗಣಿಸಬೇಕು. ಶಾಲೆಗಳಲ್ಲಿ ಮಕ್ಕಳ ವರ್ತನೆಯ ಬಗ್ಗೆಯೂ ವಿಶೇಷ ನಿಗಾ ವಹಿಸಬೇಕು ಎಂದು ನಿರ್ದೇಶಿಸಲಾಗಿದೆ. ಅಲ್ಲದೆ, ಮಕ್ಕಳಲ್ಲಿ ಅರಿವು ಮೂಡಿಸಲು ಶಾಲಾ ಶಿಕ್ಷಕರಿಗೆ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಶಾಲೆಗಳಲ್ಲಿ ನಿತ್ಯ ಅರಿವು:
ಮೋಮೊ ಸಹಿತವಾಗಿ ಅಂತರ್ಜಾಲದ ಅಪಾಯಕಾರಿ ಆಟ ಮತ್ತು ವೆಬ್‌ಸೈಟ್‌ ಬಳಕೆ ಕುರಿತು ಶಾಲೆಗಳಲ್ಲಿ ಪ್ರತಿದಿನ ಮಕ್ಕಳಿಗೆ ತರಗತಿ ಆರಂಭಕ್ಕೂ ಮೊದಲ ಹತ್ತದಿಂದ ಹದಿನೈದು ನಿಮಿಷ ಮುಖ್ಯ ಶಿಕ್ಷಕರು ಸಹಿತವಾಗಿ ಸಹ ಶಿಕ್ಷಕರು ಅರಿವು ಮೂಡಿಸಬೇಕು. ಇಂಟರ್‌ನೆಟ್‌ ಬ್ರೌಸಿಂಗ್‌ ಕೇಂದ್ರಗಳಲ್ಲಿ ಮೋಮೊ ಗೇಮ್‌ ಆಡಲು ಮಕ್ಕಳಿಗೆ ಅವಕಾಶ ನೀಡಬಾರದು.

ಮಕ್ಕಳಿಗೆ ಈ ಸೈಟ್‌ ಉಪಯೋಗಿಸಲು ಅವಕಾಶ ನೀಡ ಕೂಡದು ಎಂದು ಸಂಬಂಧಪಟ್ಟ ಪೊಲೀಸ್‌ ಠಾಣೆಯ ಮೂಲಕ ಇಂಟರ್‌ನೆಟ್‌ ಬ್ರೌಸಿಂಗ್‌ ಕೇಂದ್ರಕ್ಕೆ ಆದೇಶ ನೀಡುವ ಜವಾಬ್ದಾರಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಹಿಸಲಾಗಿದೆ.
ಮೋಮೊ ಗೇಮ್‌ ಮಕ್ಕಳಿಗೆ ಸಿಗದಂತೆ ಮಾಡಲು ಜಿಲ್ಲಾಡಳಿತದ ಸಹಕಾರ ಪಡೆದು ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯೋಪಾಧ್ಯಾಯರು, ಶಿಕ್ಷಕರು ತುರ್ತು ಅಗತ್ಯ ಕ್ರಮ ವಹಿಸಬೇಕು. ಮಕ್ಕಳು ಮೋಮೊ ಗೇಮ್‌ಗೆ ಅಂಟಿಕೊಳ್ಳದಂತೆ ಅಗತ್ಯ ಮುಂಜಾಗೃತ ಕ್ರಮ ತೆಗೆದುಕೊಳ್ಳಲು ಇಲಾಖೆ ನಿರ್ದೇಶಿಸಿದೆ.

ಏನಿದು ಮೋಮೊ?
ಮೋಮೊ ಆಟದಲ್ಲಿ ಮಕ್ಕಳು ಅಪರಿಚಿತರ ಮೊಬೈಲ್‌ ಸಂಖ್ಯೆಯ ಜತೆ ಸಂವಹನ ನಡೆಸುತ್ತಾರೆ. ಜತೆಗೆ ನಿರಂತರ ಪ್ರಚೋದನಾ ಸಂದೇಶ ಪಡೆಯುತ್ತಾ ಹೋಗುತ್ತಾರೆ. ಇದರಿಂದ ಮಕ್ಕಳ ಪ್ರಾಣಕ್ಕೆ ಕುತ್ತು ಬರುವ ಸವಾಲು ಎದುರಿಸುತ್ತಾರೆ. ಮಕ್ಕಳ ಮುಗ್ಧ ಮನಸ್ಸು ಮೊಬೈಲ್‌ ಸಂದೇಶದ ಟಾಸ್ಕ್ ಜತೆ ಬೆರೆತರೆ ಶೈಕ್ಷಣಿಕವಾಗಿಯೂ ಹಿನ್ನೆಯಾಗುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next