ಪಂಜಾಬ್ : ಭಾರತದಲ್ಲಿ ಹೆಚ್ಚಿನ ಹದಿಹರೆಯದವರನ್ನು ತನ್ನ ತೆಕ್ಕೆಯಲ್ಲಿ ಸೆಳೆದಿಟ್ಟಿರುವ ಪಬ್ಜಿ ಮೊಬೈಲ್ ಗೇಮ್ ನಿಂದ ಪೋಷಕರು ಹೈರಾಣಾಗಿದ್ದಾರೆ. ಪಬ್ಜಿ ಗೇಮ್ ಆಡುವ ಭರದಲ್ಲಿ 15 ವರ್ಷದ ಹುಡುಗನೊಬ್ಬ ತನ್ನ ಅಜ್ಜನ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 2 ಲಕ್ಷ ರೂಪಾಯಿಯನ್ನು ವ್ಯಯಿಸಿರುವ ಘಟನೆ ಪಂಜಾಬ್ ನ ಮೊಹಾಲಿಯಲ್ಲಿ ನಡೆದಿದೆ.
ಸ್ಥಳೀಯ ಪತ್ರಿಕೆಯೊಂದರಲ್ಲಿ ವರದಿಯಾಗಿರುವ ಪ್ರಕಾರ ಕಳೆದ ಜನವರಿಯಿಂದ ಪಬ್ಜಿ ಗೇಮ್ ಆಡಲು ಶುರು ಮಾಡಿದ್ದ ಹುಡುಗ ಹೆಚ್ಚಿನ ಸಮಯವನ್ನು ಗೇಮ್ ಆಡುವುದರಲ್ಲೇ ಕಳೆಯುತ್ತಿದ್ದ. ಆತ ತನ್ನ ಶಾಲೆಯ ಹಿರಿಯ ಹುಡುನೊಬ್ಬನಿಂದ ಪಬ್ಜಿ ಆಡುವ ಪರಿಣತಿ ಹಾಗೂ ಹೇಗೆ ಗೇಮ್ ನಲ್ಲಿ ಹೆಚ್ಚಿನ ಸೌಲಭ್ಯವನ್ನು ಪಡೆಯಲು ಹಣವನ್ನು ಬಳಸಬೇಕು ಎನ್ನುವುದನ್ನು ಹೇಳಿಕೊಟ್ಟಿದ್ದಾನೆ ಎಂದು ಹುಡುಗನ ಅಂಕಲ್ ಹೇಳಿದ್ದಾರೆ.
ಪಬ್ಜಿ ಆಟದಲ್ಲಿ ಅನೌನ್ ಕ್ಯಾಶ್ ಎನ್ನುವ ಆಯ್ಕೆಯೊಂದು ಇದೆ ಅದನ್ನು ಆಯ್ದುಕೊಂಡು ಆಟದಲ್ಲಿ ಬೇಕಿರುವ ಕೆಲ ವಸ್ತಗಳನ್ನು ಹಣಕೊಟ್ಟು ಆ್ಯಪ್ ಗಳ ಮೂಲಕ ಪಡೆಯಬೇಕಾಗಿರುತ್ತದೆ. ಅವುಗಳನ್ನು ಪಡೆಯಲು ಆಟ ಆಡುತ್ತಿದ್ದ ಹುಡುಗ ಕಳೆದ ಎರಡು ತಿಂಗಳಿನಲ್ಲಿ 30 ಬಾರಿ ಬ್ಯಾಂಕ್ ವಹಿವಾಟು ನಡೆಸಿ 55,000 ಸಾವಿರ ರೂಪಾಯಿಯನ್ನು ವ್ಯಯಿಸಿದ್ದಾನೆ. ಯುಸಿ ಕ್ರೆಡಿಟ್ ಪಡೆಯಲು ಹುಡುಗ ಅಜ್ಜನ ಹೆಸರಿನಲ್ಲಿ ಪೇಟಿಯಮ್ ಖಾತೆಯನ್ನು ತೆರೆದು ಅಜ್ಜನ ದಾಖಲೆಯನ್ನು ಕೊಟ್ಟು ಖಾತೆಯನ್ನು ಪರಿಶೀಲಿಸಿ ಖಾತೆ ಪ್ರಕ್ರಿಯೆಯನ್ನು ಪೂರ್ತಿ ಮಾಡಿದ್ದಾನೆ. ಅಜ್ಜನ ಖಾತೆಯಲ್ಲಿ ಪಿಂಚಣಿ ಹಣ ಜಮಾವಣೆಯಾಗಿತ್ತು ಎಂದು ವರದಿ ತಿಳಿಸಿದೆ.
ಹುಡುಗನ ಪೋಷಕರು ಬ್ಯಾಂಕ್ ಖಾತೆಯ ವಿವರವನ್ನು ಪರಿಶೀಲಿಸಿದಾಗ ಖಾತೆಯಲ್ಲಿದ್ದ ಹಣವನ್ನು ತೆಗೆದಿರುವುದು ತಿಳಿಯುತ್ತದೆ. ವಿಷಯ ಅರಿತ ಪೋಷಕರು ಹುಡುಗನ ಬಳಿ ವಿಚಾರಿಸಿದಾಗ ಆತ ಪಬ್ಜಿ ಆಟಕ್ಕಾಗಿ 2 ಲಕ್ಷ ರೂಪಾಯಿ ಅಜ್ಜನ ಖಾತೆಯಿಂದ ವ್ಯಯಿಸಿದ್ದಾನೆ ಎಂದು ಸತ್ಯವನ್ನು ಹೇಳುತ್ತಾನೆ. ಘಟನೆಯ ಕುರಿತು ಹುಡುಗನ ಪೋಷಕರು ಮೊಹಾಲಿಯ ಪೊಲೀಸ್ ಅಧಿಕಾರಿ ಕುಲದೀಪ್ ಸಿಂಗ್ ಚಹಲ್ ರಿಗೆ ಇಮೈಲ್ ಮಾಡಿ ವಿವರಣೆಯನ್ನು ನೀಡಿದ್ದಾರೆ. ಪಬ್ಜಿ ಬಗ್ಗೆ ಆಸಕ್ತಿ ಹುಟ್ಟಿಸಿದ ಶಾಲೆಯ ಹಿರಿಯ ಹುಡುಗನ ವಿರುದ್ದ ಆರೋಪ ಮಾಡಿದ್ದಾರೆ. ಆತ ಕೂಡ ಖಾತೆಯ ಹಣದಿಂದ ಯುಸಿಯನ್ನು ಪಡೆದಿದ್ದ ಎನ್ನಲಾಗಿದೆ. ಹುಡುಗನ ಪಬ್ಜಿ ಚಟ ಎಷ್ಟಿತ್ತು ಅಂದರೆ ಆತ ಅದಕ್ಕಾಗಿ ಹೊಸ ಸೀಮ್ ಕಾರ್ಡ್ ತೆಗೆದುಕೊಂಡಿದ್ದ ಎಂದು ವರದಿಯಾಗಿದೆ.
ಕೆಲ ದಿನಗಳ ಹಿಂದೆ ಪಂಜಾಬ್ ನಲ್ಲಿ 17 ವರ್ಷದ ಹುಡುಗನೊಬ್ಬ ಇದೇ ಪಬ್ಜಿ ಗೀಳಿನಿಂದ ಪೋಷಕರ ಖಾತೆಯಿಂದ ಬರೋಬ್ಬರಿ 16 ಲಕ್ಷ ರೂಪಾಯಿಯನ್ನು ವ್ಯಯಿಸಿದ್ದರ ಕುರಿತು ವರದಿಯಾಗಿತ್ತು.