ಚಂಡೀಗಢ: ಆ ಹದಿಹರೆಯದ ಯುವಕ ಅಪ್ಪನ ಮೊಬೈಲ್ ಬಳಸಿ ಖರ್ಚು ಮಾಡಿದ್ದು ಒಂದೆರಡು ಲಕ್ಷ ರೂ. ಅಲ್ಲ. ಬರೋಬ್ಬರಿ 16 ಲಕ್ಷ ರೂ. ಮೂಗಿನ ಮೇಲೆ ಬೆರಳು ಇಡುವಂಥ ಘಟನೆ ನಡೆದದ್ದು ಪಂಜಾಬ್‌ನ ಅಜಿತ್ ಸಿಂಗ್ ನಗರ್ ಜಿಲ್ಲೆಯ ಖರಾರ್ ಎಂಬಲ್ಲಿ ಇದರಿಂದ ಕ್ರುದ್ಧಗೊಂಡ ಆತನ ತಂದೆ ಗ್ಯಾರೇಜ್‌ನಲ್ಲಿ ಕೆಲಸ ಮಾಡುವಂತೆ ಆಜ್ಞಾಪಿಸಿದ್ದಾರೆ.
ಹಣ ಸಂಪಾದನೆ ಎಷ್ಟು ಕಷ್ಟವಿದೆ ಎಂಬುದನ್ನು ಪುತ್ರ ಅರಿತುಕೊಳ್ಳಲಿ ಎಂಬ ಕಾರಣಕ್ಕಾಗಿ ನಿರ್ಧಾರ ಕೈಗೊಂಡದ್ದಾಗಿ ಹೇಳಿಕೊಂಡಿದ್ದಾರೆ,
ಆನ್‌ಲೈನ್ ತರಗತಿ ಹಿನ್ನೆಲೆಯಲ್ಲಿ ಮಗನಿಗೆ ಮೊಬೈಲ್ ಕೊಡಿಸಿದ್ದರು. ಆದರೆ ಮಗರಾಯ ಮಾತ್ರ ಮಾಡಿದ್ದೇ ಬೇರೆ. ಪಬ್ಜಿ ಆ್ಯಪ್ ಮೂಲಕ ಹಲವು ರೀತಿಯ ವಸ್ತುಗಳನ್ನು ಖರೀದಿಸಿದ್ದಾನೆ. ತಂದೆಯ ವೈದ್ಯಕೀಯ ವೆಚ್ಚಕ್ಕಾಗಿ ಕೂಡಿಟ್ಟಿದ್ದ ಹಣ ಕೂಡ ಖಾಲಿ ಮಾಡಿದ್ದಾನೆ ಆತ.
ಖಾತೆಯಿಂದ ಹಣ ಕಡಿತವಾದ ಕೂಡಲೇ ಬಂದ ಮೆಸೇಜ್‌ಗಳನ್ನು ಮಗ ಡಿಲೀಟ್ ಮಾಡಿದ್ದ. ಆತ ಅದರಲ್ಲಿ ಎಷ್ಟು ಗೀಳು ಬೆಳೆಸಿಕೊಂಡಿದ್ದ ಎಂದರೆ, ತಾಯಿಯ ಭವಿಷ್ಯ ನಿಧಿ ಖಾತೆಗೆ ಲಗ್ಗೆ ಹಾಕಿ ಅಲ್ಲಿದ್ದ ಮೊತ್ತವನ್ನೂ ಬರಿದು ಮಾಡಿದ್ದಾನೆ. ಬ್ಯಾಂಕ್ ದಾಖಲೆಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಖಾತೆಗಳಿಂದ ಹಣ ಬರಿದಾಗಿರುವುದು ಗೊತ್ತಾಗಿದೆ.
ಮಗನ ಕೃತ್ಯದಿಂದ ಕಂಗಾಲಾಗಿರುವ ತಂದೆ ಖರಾರ್ ಪಟ್ಟಣದ ಗ್ಯಾರೇಜ್ ಒಂದರಲ್ಲಿ ಕೆಲಸಕ್ಕೆ ನಿಯೋಜಿಸಿದ್ದಾರೆ. “ಹಣ ಸಂಪಾದಿಸುವುದು ಎಷ್ಟು ಕಷ್ಟವೆಂದು ಆತನಿಗೆ ಗೊತ್ತಾಗಬೇಕು. ಅದಕ್ಕಾಗಿ ಹೀಗೆ ಮಾಡಿದ್ದೇನೆ. ಈಗ ಆತ ಆನ್‌ಲೈನ್ ಕ್ಲಾಸ್ ಇದೆ ಎಂದರೂ ಮೊಬೈಲ್ ಕೊಡದೇ ಇರುವಂಥ ಪರಿಸ್ಥಿತಿ ನಿರ್ಮಾಣ ಮಾಡಿದ್ದಾನೆ. ಅವನ ಭವಿಷ್ಯಕ್ಕಾಗಿಯೇ ಕೂಡಿಟ್ಟಿದ್ದ ಹಣವನ್ನು ಹಾಳು ಮಾಡಿದ್ದಾನೆ. ಇದರಿಂದ ನಾನು ಚಿಂತೆಗೊಳಗಾಗಿದ್ದೇನೆ’ ತಂದೆ ಅಳಲು ತೋಡಿಕೊಂಡಿದ್ದಾರೆ.