ಬೆಂಗಳೂರು: ಖ್ಯಾತ ನಟರಾದ ದರ್ಶನ್, ಡಾಲಿ ಧನಂಜಯ, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ ಮತ್ತು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಬೆಂಗಳೂರಿನ ರಾಜಾಜಿ ನಗರದಲ್ಲಿರುವ ಜೆಟ್‌ಲಾಗ್ ಬಾರ್ ಮತ್ತು ಗ್ರಿಲ್ ಪಬ್‌ನಲ್ಲಿ ಜನವರಿ 3ರಂದು ತಡರಾತ್ರಿ ವರೆಗೆ ಪಾರ್ಟಿ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ಶುಕ್ರವಾರ ಹಾಜರಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಬಾರ್ ಮುಚ್ಚುವ ಸಮಯವನ್ನು ಮೀರಿ ಕಾರ್ಯನಿರ್ವಹಿಸಿದ್ದಕ್ಕಾಗಿ ಪಬ್ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು ನಟರು ಮತ್ತು ನಿರ್ಮಾಪಕರಿಗೆ ತನಿಖೆಗೆ ಹಾಜರಾಗುವಂತೆ ನೋಟಿಸ್ ಕಳುಹಿಸಿದ್ದರು. ದರ್ಶನ್ ಅಭಿನಯದ ಇತ್ತೀಚೆಗಷ್ಟೇ ಬಿಡುಗಡೆಯಾದ ‘ಕಾಟೇರ’ ಸಿನಿಮಾದ ಸಕ್ಸಸ್ ಮೀಟ್ ಗಾಗಿ ಎಲ್ಲರೂ ಜತೆ ಸೇರಿದ್ದರು.
ಠಾಣೆಗೆ ಹಾಜರಾದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿಕೆ ನೀಡಿದ ರಾಕ್‌ಲೈನ್ ವೆಂಕಟೇಶ್, ಕಾಟೇರ ಸಿನಿಮಾ ವೀಕ್ಷಿಸಿ ವಾಪಸ್ ಹೊರಟಾಗ ತಡವಾಗಿತ್ತು. ಊಟ ಮಾಡಿಕೊಂಡು ಹೋಗಿ ಎಂದು ಎಲ್ಲರಿಗೂ ನಾನೇ ಮನವಿ ಮಾಡಿಕೊಂಡಿದ್ದೆ.ದರ್ಶನ್ ಹೊರಟಿದ್ದರು. ಅಭಿಷೇಕ್, ಸತೀಶ್, ಧನಂಜಯ್ ಅವರೆಲ್ಲ ಇದ್ದಾಗ ಪಬ್ ಮಾಲೀಕರಿಗೆ ಊಟಕ್ಕೆ ವ್ಯವಸ್ಥೆ ಮಾಡಿಕೊಡಿ ಎಂದು ಕೇಳಿದ್ದೆ. ಪಾರ್ಟಿ ಮಾಡಬೇಕು ಎಂಬ ಉದ್ದೇಶ ನಮಗಿರಲಿಲ್ಲ. ದರ್ಶನ್ ಅವರಿಗೆ ಫೋನ್ ಮಾಡಿದ ಬಳಿಕ ಅವರು ಕೂಡ ಬಂದರು. ಆ ವೇಳೆ ಪಬ್ ಸಿಬಂದಿ ಹೊರಟಿದ್ದರು. ಅವರನ್ನೆಲ್ಲ ವಾಪಾಸ್ ಕರೆಸಿದ ಕಾರಣ ಅವರು ಊಟ, ತಿಂಡಿ ಕೊಡುವುದು ತಡವಾಯಿತು. ಯಾವುದೇ ಸಣ್ಣ ಗಲಾಟೆ ಕೂಡ ಆಗಲಿಲ್ಲ ಎಂದರು.
ಇಲಾಖೆಯ ನಿಯಮಗಳು ಉಲ್ಲಂಘನೆ ಆಗಿದ್ದರೆ ನಾವು ತಲೆ ಬಾಗಲೇಬೇಕು ಆ ವಿಚಾರದಲ್ಲಿ ಎರಡು ಮಾತಿಲ್ಲ. ನಾವು ಗ್ರಾಹಕರು, ಮೊದಲ ಸಲ ಗ್ರಾಹಕರಿಗೆ ನೋಟಿಸ್ ಕೊಟ್ಟು ಠಾಣೆಗೆ ಕರೆಸಿದ್ದಾರೆ. ಇದು ಎಷ್ಟು ಸರಿ ಎಂದು ನಮಗೆ ಗೊತ್ತಿಲ್ಲ’ ಎಂದು ಅಸಮಾಧಾನ ಹೊರ ಹಾಕಿದ್ದಾರೆ.