Advertisement

ಪಿಯುಗೆ ಬೇಕಿದೆ ಅಕಾಡೆಮಿಕ್‌ ಕೌನ್ಸಿಲ್‌

03:04 PM Dec 07, 2018 | Team Udayavani |

ದಾವಣಗೆರೆ: ಪಿಯು ಹಂತದಲ್ಲಿ ವಿಶ್ವವಿದ್ಯಾಲಯ ಮಾದರಿಯ ಅಕಾಡೆಮಿಕ್‌ ಕೌನ್ಸಿಲ್‌ ಪ್ರಾರಂಭಿಸಬೇಕು ಎಂದು ಶಿಕ್ಷಣ ತಜ್ಞ ಡಾ| ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟಿದ್ದಾರೆ. ಗುರುವಾರ, ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಮತ್ತು ಪ್ರಾಚಾರ್ಯರ ಸಂಘ ಸಹಯೋಗದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಶೈಕ್ಷಣಿಕ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ಪಿಯು ಹಂತದಲ್ಲಿ ಪಠ್ಯಪುಸ್ತಕ ರಚನೆ, ಕಾಲಾನುಕ್ರಮಕ್ಕೆ ತಕ್ಕಂತೆ ಬದಲಾವಣೆ ಇತರೆ ಪಠ್ಯ ಚಟುವಟಿಕೆಗೆ ಪೂರಕವಾಗಿ ವಿಶ್ವವಿದ್ಯಾಲಯ ಮಾದರಿಯಲ್ಲೇ ಅಕಾಡೆಮಿಕ್‌ ಕೌನ್ಸಿಲ್‌ ಪ್ರಾರಂಭಿಸುವುದು ಸೂಕ್ತ ಎಂದರು.
 
ಅಕಾಡೆಮಿಕ್‌ ಕೌನ್ಸಿಲ್‌ ಇಲ್ಲದೇ ಇರುವ ಕಾರಣಕ್ಕೆ ಕೊನೆಯ ಹಂತದಲ್ಲಿ ಪಠ್ಯಪುಸ್ತಕ ರಚನೆ ಇಲ್ಲವೇ ಬದಲಾವಣೆ ಮಾಡುವ ಒತ್ತಡ ಬರುತ್ತದೆ. ಸಮಯಾವಕಾಶ ಇಲ್ಲದೆ ಯಾವುದೋ ಒಂದು ಪಠ್ಯಪುಸ್ತಕ ಸಿದ್ಧಪಡಿಸಲಾಗುತ್ತದೆ. ಅದು ಅತೀ ಮುಖ್ಯ ಘಟ್ಟವಾದ ಪಿಯು ಹಂತದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಅಂತಹ ಎಲ್ಲ ಅಪಾಯ ತಪ್ಪಿಸುವ ನಿಟ್ಟಿನಲ್ಲಿ ಅಕಾಡೆಮಿಕ್‌ ಕೌನ್ಸಿಲ್‌ ಪ್ರಾರಂಭಿಸುವುದು ಒಳ್ಳೆಯದು. ತಮ್ಮ ಅನುಭವದಂತೆ 1971ರಿಂದಲೂ ಪಿಯು ಉಪನ್ಯಾಸಕರ ಅನೇಕ ಬೇಡಿಕೆ, ಸಮಸ್ಯೆ ಈ ಕ್ಷಣಕ್ಕೂ ಜೀವಂತವಾಗಿವೆ ಎಂದರು.

Advertisement

ಶಿಕ್ಷಣ ಪ್ರಸಾರ ಮತ್ತು ಜ್ಞಾನದ ಸೃಷ್ಟಿ ಶಿಕ್ಷಣ ಸಂಸ್ಥೆಗಳ ಪ್ರಮುಖ ಕಾರ್ಯ. ಶಿಕ್ಷಣ ಪ್ರಸಾರ ನಡೆಯುತ್ತಿದೆ. ಆದರೆ, ಜ್ಞಾನ ಸೃಷ್ಟಿಯನ್ನೇ ಮರೆತು ಹೋಗಿದ್ದೇವೆ. ಪಿಯು ಹಂತದಲ್ಲಿ ಸಿಬಿಎಸ್‌ಇ ಪದ್ಧತಿಯನ್ನೇನೋ ಅಳವಡಿಸಲಾಗಿದೆ. ಆದರೆ, ಅದು ಪಠ್ಯಪುಸ್ತಕದ ಮುಖಪುಟ ಬದಲಾವಣೆಯಂತೆ ಆಗಿದೆ. ಬದಲಾವಣೆಯಾದ ಪಠ್ಯಪುಸ್ತಕದ ಬೋಧನೆಗೆ ಅಗತ್ಯವಾಗಿ ತಾಲೂಕು ಹಂತದಲ್ಲಿ ಉಪನ್ಯಾಸಕರಿಗೆ ವಿಷಯವಾರು ತರಬೇತಿ ನೀಡಬೇಕು. ಹಿರಿಯ ಉಪನ್ಯಾಸಕರಿಗೆ ಸಹ ಹೊಸ ಬದಲಾವಣೆಗೆ ಅನುಗುಣವಾದ ಅಗತ್ಯ ತರಬೇತಿ ನೀಡಬೇಕು ಎಂದು ಹೇಳಿದರು.

ಡಿ.ವಿ. ಗುಂಡಪ್ಪನವರು ಹೇಳುವಂತೆ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಾಣುವಂತಹ ಧೈರ್ಯ ಶಿಕ್ಷಕರಿಗೆ ಇರಬೇಕು. ಜಗತ್ತಿನ ಅತೀ ಪರಮ ಪವಿತ್ರ ಹುದ್ದೆ ಯಾವುದಾದರೂ ವೃತ್ತಿ ಇದ್ದರೆ ಅದು ಶಿಕ್ಷಕ ವೃತ್ತಿ. ಸಾಧಾರಣ ವ್ಯಕ್ತಿಯಿಂದ ಹಿಡಿದು ರಾಷ್ಟ್ರಪತಿಗಳನ್ನು ನಿರ್ಮಾಣ ಮಾಡುವಂತಹ ಶಿಕ್ಷಕರು, ಉಪನ್ಯಾಸಕರು ಪ್ರತಿ ವಿದ್ಯಾರ್ಥಿಯ ಭವಿಷ್ಯ, ಜೀವನ ಪರಿವರ್ತನೆ ಮಾಡುವಂತ ಗುರುಗಳಾಗಬೇಕಿದೆ ಎಂದು ತಿಳಿಸಿದರು.

ಶಿಕ್ಷಕರು, ಉಪನ್ಯಾಸಕರು ಸಮಯಕ್ಕೆ ಸರಿಯಾಗಿ ತರಗತಿಗೆ ಹೋಗುವುದು, ಬೋಧನಾ ಸಿದ್ಧತೆ, ಪರಿಕರ ಕೊಂಡೊಯ್ಯುವುದು, ವಿದ್ಯಾರ್ಥಿಗಳಲ್ಲಿ ಆಸಕ್ತಿ ಬರುವಂತೆ ಪರಿಣಾಮಕಾರಿಯಾಗಿ ಬೋಧನೆ, ತರಗತಿ ಹೊರಗಡೆಯೂ ಒಳ್ಳೆಯ ನಡತೆ ಜತೆ ಅತ್ಯಂತ ಜವಾಬ್ದಾರಿಯಿಂದ ಮಾತನಾಡುವ ಮೂಲಕ ಶಿಕ್ಷಕರು, ಉಪನ್ಯಾಸಕರು ನಿಜ ಅರ್ಥದ ಗುರುಗಳಾಗಿ ಹೊರ ಹೊಮ್ಮಬೇಕು ಎಂದು ಆಶಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ್‌ ಮಾತನಾಡಿ, ಸಮಾಜದಲ್ಲಿ ಶಿಕ್ಷಕರ ವೃತ್ತಿಗೆ ಬಹಳ ಗೌರವ ಇದೆ. ಅತೀ ಮಹತ್ವದ ಶಿಕ್ಷಕ ವೃತ್ತಿಗೆ ಬೆಲೆ ಕಟ್ಟಲಿಕ್ಕೆ ಆಗುವುದೇ ಇಲ್ಲ. ದೊಡ್ಡ ಹುದ್ದೆಯಲ್ಲೇ ಇರಲಿ, ರಾಜಕಾರಣಿಗಳೇ ಆಗಿರಲಿ ಅವರೆಲ್ಲರೂ ಗುರುವಿನ ಬಳಿ ವಿದ್ಯೆ ಕಲಿತವರು. ಪ್ರತಿಯೊಬ್ಬ ಶಿಕ್ಷಕರು ಎಲ್ಲರನ್ನೂ ಸನ್ಮಾರ್ಗಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡಬೇಕು ಎಂದರು.

Advertisement

ಪ್ರಾಸ್ತಾವಿಕ ನುಡಿಗಳಾಡಿದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ರಾಜ್ಯ ಅಧ್ಯಕ್ಷ ತಿಮ್ಮಯ್ಯ ಪುರ್ಲೆ, ಪಿಯು ಉಪನ್ಯಾಸಕರ ವೇತನ ತಾರತಮ್ಯ ಇನ್ನೂ ಬಗೆಹರಿದಿಲ್ಲ. ಅರ್ಧ ಗೆದ್ದಿದ್ದೇವೆ. ಪಿಯು ಶಿಕ್ಷಣ ಇಲಾಖೆ ನಿರ್ದೇಶಕರಾಗಿ ಬರುವಂತಹ ಐಎಎಸ್‌ ಅಧಿಕಾರಿಗಳು
ತಮ್ಮದೇ ಛಾಪು ಮೂಡಿಸುವ ಪ್ರಯೋಗ ನಡೆಸುವ ಮೂಲಕ ಇಲಾಖೆಯನ್ನ ಅಧೋಗತಿಗೆ ತಂದಿದ್ದಾರೆ. ಕಾಲ್ಪನಿಕ ವೇತನ ಒಳಗೊಂಡಂತೆ ಇನ್ನೂ ಅನೇಕ ಬೇಡಿಕೆ ಈಡೇರಿಬೇಕಿದೆ ಎಂದು ತಿಳಿಸಿದರು.

ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷ ಪ್ರೊ| ಪಾಲಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಮಾಡಾಳ್‌ ಕೆ. ವಿರುಪಾಕ್ಷಪ್ಪ, ಇಂದಿರಾ ರಾಮಚಂದ್ರಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎಸ್‌. ಹಾಲೇಶಪ್ಪ, ಡಾ| ದಾದಾಪೀರ್‌
ನವಿಲೇಹಾಳ್‌, ಎ.ಎಚ್‌. ನಿಂಗೇಗೌಡ, ಎಸ್‌.ಆರ್‌. ವೆಂಕಟೇಶ್‌, ಎಂ. ಜಯ್ಯಣ್ಣ, ಲಕ್ಷ್ಮಣ್‌ ಇತರರು ಇದ್ದರು. ಪಿ. ನಾಗಪ್ಪ ಸ್ವಾಗತಿಸಿದರು. ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಗುಣಮಟ್ಟ ಶಿಕ್ಷಣದ ಕೊರತೆ ಭಾರತದಲ್ಲಿ 400ಕ್ಕೂ ಹೆಚ್ಚು ವಿಶ್ವವಿದ್ಯಾಲಯ, 270 ವೈಜ್ಞಾನಿಕ ಸಂಶೋಧನಾ ಕೇಂದ್ರ, 1,200ರಷ್ಟು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಿವೆ. ಆದರೂ, ಶಿಕ್ಷಣ ಕ್ಷೇತ್ರದಲ್ಲಿ ಹಿಂದೆ ಉಳಿದಿದ್ದೇವೆ. ಈಗಲೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿಲ್ಲ. ಭಾರತಕ್ಕಿಂತಲೂ ಅತೀ ಚಿಕ್ಕ, ಕಡಿಮೆ ಜನಸಂಖ್ಯೆ ಹೊಂದಿರುವ ಫಿನ್ ಲ್ಯಾಂಡ್  ಶಿಕ್ಷಣ ಕ್ಷೇತ್ರದಲ್ಲಿ ಜಗತ್ತಿಗೇ ಮಾದರಿಯಾಗಿದೆ. ಫಿನ್ ಲ್ಯಾಂಡ್ ಮಾದರಿಯದಲ್ಲೇ ಗುಣಮಟ್ಟದ ಶಿಕ್ಷಣ ನೀಡುವತ್ತ ಎಲ್ಲರೂ ಗಮನ ನೀಡಬೇಕಿದೆ. 
 ಜಿ.ಎಂ.ಸಿದ್ದೇಶ್ವರ್‌, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next