Advertisement

ಪಿಯು ಫ‌ಲಿತಾಂಶ: 14ನೇ ಸ್ಥಾನಕ್ಕೆ ಮೈಸೂರು

12:38 PM May 12, 2017 | Team Udayavani |

ಮೈಸೂರು: ಶೈಕ್ಷಣಿಕವಾಗಿ ಸಾಕಷ್ಟು ಹೆಸರು ಮಾಡಿದ್ದ, ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರ ತವರು ಮೈಸೂರು ಜಿಲ್ಲೆ ದ್ವಿತೀಯ ಪಿಯು ಫ‌ಲಿತಾಂಶದಲ್ಲಿ ಮೊದಲ ಹತ್ತರ ಪಟ್ಟಿಯಲ್ಲಿ ಸ್ಥಾನಪಡೆಯಲಾಗದೆ, 14ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಕಳೆದ ವರ್ಷ 9ನೇ ಸ್ಥಾನ ಸಂಪಾದಿಸಿದ್ದ ಜಿಲ್ಲೆ, ಗುರುವಾರ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡ ಫ‌ಲಿತಾಂಶದ ಪಟ್ಟಿಯಲ್ಲಿ 14ನೇ ಸ್ಥಾನದಲ್ಲಿದೆ.

Advertisement

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 1560 ಖಾಸಗಿ, 30115 ಹೊಸ ವಿದ್ಯಾರ್ಥಿಗಳು, 5516 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿದಂತೆ ಒಟ್ಟಾರೆ 36891 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದರು. ಈ ಪೈಕಿ ವಿಜ್ಞಾನ ವಿಭಾಗದಲ್ಲಿ 11905 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 12153 ವಿದ್ಯಾರ್ಥಿಗಳು ಹಾಗೂ ಕಲಾ ವಿಭಾಗದಲ್ಲಿ 12833 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಮರಿಮಲ್ಲಪ್ಪ ಪಿಯು ಕಾಲೇಜಿನ ವಿದ್ಯಾರ್ಥಿನಿ ಆಯಿಷಾ ಮರಿಯಮ್‌ 600ಕ್ಕೆ 580 ಅಂಕ ಪಡೆಯುವ ಮೂಲಕ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 4ನೇ ಸ್ಥಾನಗಳಿಸಿದ್ದರೆ, ವಿಜಯ ವಿಠಲ ಪಿಯು ಕಾಲೇಜಿನ ವಿದ್ಯಾರ್ಥಿ ವೈ.ಆರ್‌.ಪ್ರಜ್ವಲ್‌ 600ಕ್ಕೆ 593 ಅಂಕಗಳನ್ನು ಪಡೆಯುವ ಮೂಲಕ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 10ನೇ ಸ್ಥಾನ ಸಂಪಾದಿಸಿದ್ದಾನೆ.

ವಿದ್ಯಾರ್ಥಿಗಳ ಹರ್ಷ: ಗುರುವಾರ ಮಧ್ಯಾಹ್ನ 3 ಗಂಟೆಗೆ ವೆಬ್‌ಸೈಟ್‌ನಲ್ಲಿ ಫ‌ಲಿತಾಂಶ ಪ್ರಕಟಗೊಳ್ಳುವ ವಿಷಯ ತಿಳಿದಿದ್ದ ವಿದ್ಯಾರ್ಥಿಗಳು ಮಧ್ಯಾಹ್ನ 2 ಗಂಟೆಯಿಂದಲೇ ಫ‌ಲಿತಾಂಶ ನೋಡುವ ಕಾತರದಿಂದ ತಮ್ಮ ತಮ್ಮ ಕಾಲೇಜುಗಳತ್ತ ಪೋಷಕರ ಜತೆಯಲ್ಲಿ ಧಾವಿಸಿ ಬಂದಿದ್ದರು.

ಹೀಗಾಗಿ ನಗರದ ಮರಿಮಲ್ಲಪ್ಪ, ಸದ್ವಿದ್ಯಾ, ವಿಜಯವಿಠಲ, ಸಂತ ಜೋಸೆಫ್ ಸೇರಿದಂತೆ ಬಹುತೇಕ ಖಾಸಗಿ ಕಾಲೇಜುಗಳ ಬಳಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ದಂಡೇ ನೆರೆದಿತ್ತು. ವೆಬ್‌ಸೈಟ್‌ನಲ್ಲಿ ಫ‌ಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಮುಗಿಬಿದ್ದು ತಮ್ಮ ಫ‌ಲಿತಾಂಶವನ್ನು ನೋಡಿದ ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರು ಹಾಗೂ ಸ್ನೇಹಿತರ ಜತೆಗೆ ಶುಭಾಶಯ ವಿನಿಮಯ ಮಾಡಿಕೊಂಡು ಖುಷಿಪಟ್ಟರು.

Advertisement

ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು ಖುಷಿಯಿಂದ ಮುಂದಿನ ವಿದ್ಯಾಭ್ಯಾಸದ ಬಗ್ಗೆ ತಮ್ಮ ನೆಚ್ಚಿನ ಉಪನ್ಯಾಸಕರುಗಳಿಂದ ಸಲಹೆ ಪಡೆಯುತ್ತಿದ್ದರೆ, ತಮ್ಮ ನಿರೀಕ್ಷೆಯಂತೆ ಅಂಕ ಬಾರದ ವಿದ್ಯಾರ್ಥಿಗಳು ಕಾರಣ ಹುಡುಕುವ ಪ್ರಯತ್ನದಲ್ಲಿ ತೊಡಗಿದ್ದು, ಶುಕ್ರವಾರ ಮತ್ತೂಮ್ಮೆ ಫ‌ಲಿತಾಂಶವನ್ನು ಕಾಲೇಜಿನ ನೋಟಿಸ್‌ ಬೋರ್ಡ್‌ನಲ್ಲಿ ಪ್ರಕಟಿಸಿದ ನಂತರ ಅಂಕಗಳನ್ನು ಖಾತ್ರಿಪಡಿಸಿಕೊಂಡು ಮರು ಮೌಲ್ಯಮಾಪನಕ್ಕೆ ಹಾಕಬೇಕೇ? ಬೇಡವೇ ಎಂಬ ಬಗ್ಗೆ ನಿರ್ಧರಿಸೋಣ ಎಂಬ ಬಗ್ಗೆ ಉಪನ್ಯಾಸಕರು, ಪೋಷಕರೊಟ್ಟಿಗೆ ಚರ್ಚೆಯಲ್ಲಿ ತೊಡಗಿದ್ದು ಕಂಡುಬಂತು.

ಪರೀಕ್ಷೆಗಾಗಿ ಓದುತ್ತಿರಲಿಲ್ಲ. ಪ್ರತಿನಿತ್ಯ ಓದುತ್ತಿದ್ದರಿಂದ ಪರೀಕ್ಷೆ ಕಷ್ಟ ಎನಿಸಲಿಲ್ಲ. ಪೋಷಕರು, ಶಾಲಾ ಸಿಬ್ಬಂದಿ ನೀಡಿದ ಉತ್ತೇಜನ  ಇಷ್ಟು ಅಂಕ ಪಡೆಯಲು ಸಾಧ್ಯ ವಾಯಿತು. ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಜಿನಿಯರಿಂಗ್‌ ಮಾಡಬೇಕು ಅಂತಿರುವೆ. 
-ವೈ.ಆರ್‌.ಪ್ರಜ್ವಲ್‌, ವಿಜ್ಞಾನ ವಿಭಾಗ, 10ನೇ ಸ್ಥಾನ

ಪರೀಕ್ಷೆ ನನಗೆ ಕಷ್ಟ ಎನಿಸಲಿಲ್ಲ. ಇಷ್ಟಪಟ್ಟು ಮನಸ್ಸಿಟ್ಟು ಓದಿದರೆ ಪರೀಕ್ಷೆ ಕಷ್ಟ ಎನಿಸುವುದಿಲ್ಲ. ನನ್ನ ಈ ಸಾಧನೆಗೆ ಉಪನ್ಯಾಸಕರ ಮಾರ್ಗದರ್ಶನವೇ ಕಾರಣ.
-ಆಯಿಷಾ ಮರಿಯಮ್‌, ಕಲಾ ವಿಭಾಗ, 4ನೇ ಸ್ಥಾನ

ಸಿಟಿಜನ್‌ ಕಾಲೇಜು ಉತ್ತಮ ಸಾಧನೆ
ನಂಜನಗೂಡು:
ಪಿಯುಸಿ ಫ‌ಲಿತಾಂಶ ಹೊರಬಿದ್ದಿದ್ದು ನಗರದ ಸಿಟಿಜನ್‌ ಪದವಿ ಪೂರ್ವ ಕಾಲೇಜು ಅತ್ಯುತ್ತಮ ಸಾಧನೆಗೈದು ಈ ಬಾರಿಯೂ ಮೇಲುಗೈ ಸಾಧಿಸಿದೆ.
ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ 

ಪಿಸಿಎಂಸಿ, ವಾಣಿಜ್ಯ ಹಾಗೂ ಇಎಸ್‌ಬಿಎ ವಿಭಾಗಗಳಲ್ಲಿ  ಶೇ.100ರಷ್ಟು ಫ‌ಲಿತಾಂಶ ಪಡೆದ್ದರೆ, ಪಿಸಿಎಂಬಿ ವಿಭಾಗದಲ್ಲಿ ಶೇ.98.15 ರಷ್ಟು ಫ‌ಲಿತಾಂಶ ಬಂದಿದೆ. ಕಾಲೇಜಿನ ವಿದ್ಯಾರ್ಥಿನಿ ಪ್ರಿಯದರ್ಶಿನಿ.ಕೆ 587 ಅಂಕಗಳನ್ನು ಪಡೆಯುವ ಮೂಲಕ ಮೈಸೂರು ಜಿಲ್ಲೆಯ ಗ್ರಾಮಾಂತರ ವಿಭಾಗದ ಪ್ರಥಮ ಸ್ಥಾನಕ್ಕೆ ಪಡೆದಿದ್ದಾರೆ. ಉಳಿದಂತೆ ರಮ್ಯ.ಬಿ. 581, ಸಂಜಯ್‌ 574, ಅನೂಷ ಆರ್‌. 570, ಸಚ್ಚಿನ್‌.ಎಂ 556 ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಸಂಗೀತ 550, ಅಮೃತವರ್ಷಿಣಿ 546, ಅಂಜುಂ 542, ಅಂಕ ಪಡೆದಿದ್ದು ಈ ಎಲ್ಲಾ ವಿದ್ಯಾರ್ಥಿಗಳನ್ನು ಸಿಟಿಜನ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ  ಮಶೂದ ಬೇಗಂ, ಕಾರ್ಯದರ್ಶಿ ನೂರ್‌ ಅಹಮದ್‌ ಅಲಿ, ಸದಸ್ಯೆ ಅನಿಯಾ ಅಲಿ, ಪ್ರಾಚಾರ್ಯ ಪ್ರಸಾದ್‌ ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next