Advertisement
ಜಿಲ್ಲೆಯ ಹಿಂದಿನ ಪಿಯುಸಿ ವಾರ್ಷಿಕ ಪರೀಕ್ಷೆಗಳ ಫಲಿತಾಂಶಗಳನ್ನು ಅವಲೋಕಿಸಿದರೆ ರಾಜ್ಯ ಕ್ರಮಾಂಕದಲ್ಲಿ 10ರ ಒಳಗೆ ಎಂದೂ ಕೂಡ ಫಲಿತಾಂಶ ಪಡೆದಿರಲಿಲ್ಲ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯಾದ 13 ವರ್ಷಗಳ ಪೈಕಿ ಇದೇ ಮೊದಲಿಗೆ ರಾಜ್ಯ ಕ್ರಮಾಂಕದಲ್ಲಿ ಉತ್ತಮ ಫಲಿತಾಂಶ ಪಡೆದುಈ ವರ್ಷ 9ನೇ ಸ್ಥಾನಕ್ಕೆ ಏರಿರುವುದು ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಸಂತಸ ಮನೆ ಮಾಡಿದೆ.
2020ನೇ ಸಾಲಿನಲ್ಲಿ ಜಿಲ್ಲಾದ್ಯಂತ ಒಟ್ಟು 22 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೊಸದಾಗಿ ಪರೀಕ್ಷೆ ಬರೆದಿದ್ದ ಒಟ್ಟು 11,252 ವಿದ್ಯಾರ್ಥಿಗಳ ಪೈಕಿ 8,297 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಶೇ.73.74 ರಷ್ಟು ಫಲಿತಾಂಶದ ಮೂಲಕ ವಿಶೇಷ ಸಾಧನೆ ಮಾಡಿದ್ದು ಕಳೆದ ವರ್ಷಕ್ಕಿಂತ ಈ ಬಾರಿ ಶೇ.4 ರಷ್ಟು ಫಲಿತಾಂಶ ಹೆಚ್ಚಾಗಿ ಪಡೆದಿದ್ದಾರೆ. ಹೊಸ ವಿದ್ಯಾರ್ಥಿಗಳು, ಖಾಸಗಿ ಹಾಗೂ ಪುನರಾವರ್ತಿತ ಸೇರಿ ಒಟ್ಟು 13,144 ವಿದ್ಯಾರ್ಥಿಗಳ ಪೈಕಿ 8,809 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಖಾಸಗಿಯಾಗಿ ಪರೀಕ್ಷೆ ಬರೆದಿದ್ದ ಒಟ್ಟು 274 ವಿದ್ಯಾರ್ಥಿಗಳ ಪೈಕಿ ಕೇವಲ 52 ಮಂದಿ ಮಾತ್ರ ಉತ್ತೀರ್ಣರಾಗಿ ಶೇ.18.98 ರಷ್ಟು ಫಲಿತಾಂಶ ಪಡೆದರೆ ಪುನಾವರ್ತಿತ ಒಟ್ಟು 1,618 ವಿದ್ಯಾರ್ಥಿಗಳ ಪೈಕಿ ಕೇವಲ 460 ಮಂದಿ ಉತ್ತೀರ್ಣರಾಗಿ ಶೇ.28.43 ರಷ್ಟು ಫಲಿತಾಂಶ ಪಡೆದಿದ್ದಾರೆ. ಜಿಲ್ಲೆಯಲ್ಲಿ ಬಾಲಕಿಯರೇ ಮೇಲುಗೈ
ಈ ಜಿಲ್ಲೆಯಲ್ಲಿ ಈ ವರ್ಷವು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಾಲಕರಗಿಂತ ಎಂದಿನಂತೆ ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗುವ ಮೂಲಕ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ಒಟ್ಟು ಪರೀಕ್ಷೆ ಬರೆದಿದ್ದ 6,445 ಮಂದಿ ಬಾಲಕರ ಪೈಕಿ 3994 ಮಂದಿ ಉತ್ತೀರ್ಣರಾಗಿ ಶೇ. 61.97 ರಷ್ಟು ಫಲಿತಾಂಶ ದಾಖಲಿಸಿದರೆ ಪರೀಕ್ಷೆ ಬರೆದಿದ್ದ ಒಟ್ಟು 6,699 ಬಾಲಕಿಯರ ಪೈಕಿ 4,815 ಮಂದಿ ಉತ್ತೀರ್ಣರಾಗಿ ಶೇ.71.88 ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.