ಕುಮಟಾ: ಸಾಧಿಸುವ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ತಾಲೂಕಿನ ಬಾಡದ ಗ್ರಾಮೀಣ ಪ್ರತಿಭೆಯೊಬ್ಬಳು ಸಾಕ್ಷಿಯಾಗಿದ್ದಾಳೆ. ಅಂಧತ್ವದಲ್ಲಿ ಕಾಲೇಜಿಗೆ ತೃತೀಯ ಸ್ಥಾನ ಪಡೆದು ವಿಶೇಷ ಸಾಧನೆ ಮಾಡಿದ್ದಾಳೆ.
ತಾಲೂಕಿನ ಬಾಡದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸೌಮ್ಯ ಭಟ್ಟ 563 ಅಂಕ ಪಡೆದು ಶೇ.93ರಷ್ಟು ಫಲಿತಾಂಶ ದಾಖಲಿಸಿದ್ದಾನೆ. ತನ್ನ ಅಂಧತ್ವವನ್ನು ಮೆಟ್ಟಿನಿಂತು ಕಾಲೇಜಿಗೆ ತೃತೀಯ ಸ್ಥಾನ ಪಡೆದು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ.
ಈಕೆ ಬಾಡ ಗ್ರಾಮದ ಸುರೇಶ ವಿಶ್ವನಾಥ ಭಟ್ಟ ಹಾಗೂ ಲತಾ ಸುರೇಶ ಭಟ್ಟ ದಂಪತಿ ಪುತ್ರಿ. ಹುಟ್ಟಿದ 3 ವರ್ಷದ ನಂತರ ಈಕೆಗೆ ದೃಷ್ಟಿದೋಷ ಕಂಡು ಬಂದಿದ್ದು, ಛಲ ಬಿಡದೇ ಆತ್ಮವಿಶ್ವಾಸದಿಂದ ಮುನ್ನುಗ್ಗುವ ಈಕೆ ಗ್ರಾಮೀಣ ಭಾಗದಲ್ಲಿಯೇ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ಪೂರೈಸಿ ಇತರರಿಗೆ ಹುಬ್ಬೇರುವಂತೆ ಮಾಡಿದ್ದಾಳೆ.
ತಂದೆ-ತಾಯಿಯ ಪ್ರೇರಣೆ: ಅಂಧತ್ವ ಹೊಂದಿದ್ದಾಳೆ ಎಂದು ಶಿಕ್ಷಣವನ್ನು ವಂಚಿಸದೇ, ವಿದ್ಯಾಭ್ಯಾಸಕ್ಕೆ ಪ್ರೇರಣೆ ನೀಡುತ್ತ ಈಕೆಯ ತಂದೆ ಮತ್ತು ತಾಯಿ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ. ಅಲ್ಲದೇ, ಅಂಗವೈಕಲ್ಯ ಸಾಧನೆಗೆ ತಡೆಯಾಗಬಾರದು ಎಂಬ ಉದ್ದೇಶದಿಂದ ವಿದ್ಯಾಭ್ಯಾಸಕ್ಕೆ ಅಗತ್ಯ ವಸ್ತುಗಳನ್ನು ಕಾಲ ಕಾಲಕ್ಕೆ ಪೂರೈಸುವ ಮೂಲಕ ಆಕೆಯನ್ನು ಹುರಿದುಂಬಿಸುತ್ತಿದ್ದಾರೆ. ಆಕೆಯೂ ಅದಮ್ಯ ವಿಶ್ವಾಸ ಬೆಳೆಸಿಕೊಂಡು ಯಾವುದಾದರೊಂದು ಸಾಧನೆಗೆ ಅಡಿಯಿಟ್ಟಲ್ಲಿ ಅದನ್ನು ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ.
ಅಂಧತ್ವ ಮೆಟ್ಟಿನಿಂತ ವಿದ್ಯಾರ್ಥಿನಿ: ಈಕೆ ಮೊದಲನಿಂದಲೂ ವಿದ್ಯಾಭ್ಯಾಸದಲ್ಲಿ ಅಪಾರ ಆಸಕ್ತಿ ಹೊಂದಿದ್ದಳು. ಓದುವುದನ್ನು ಸರಿಯಾಗಿ ಅರ್ಥೈಸಿಕೊಂಡು ಓದು ಎಂದು ನಾವು ಹೇಳುತ್ತಿದ್ದೆವು. ಈಕೆಯ ಸಾಧನೆಗೆ ಅಂಧತ್ವ ಅಡ್ಡಿಯಾಗಿಲ್ಲ. ಈಕೆ ಎಲ್ಲ ಕ್ಷೇತ್ರದಲ್ಲಿಯೂ ಆಸಕ್ತಿ ಬೆಳೆಸಿಕೊಳ್ಳುವ ಗುಣ ಹೊಂದಿದ್ದಾಳೆ. ನಾವು ಸಹ ಆಕೆಗೆ ಸದಾ ಪ್ರೋತ್ಸಾಹ ನೀಡುತ್ತ ಬಂದಿದ್ದೇವೆ. ಅವಳ ಆತ್ಮವಿಶ್ವಾಸವೇ ಈ ಸಾಧನೆಗೆ ಪ್ರೇರಣೆ ಎನ್ನುತ್ತಾರೆ ಆಕೆಯ ತಂದೆ ಸುರೇಶ ಭಟ್ಟ. ಸಂಗೀತದಲ್ಲಿಯೂ ಸೈ: ಈಕೆ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೇ, ಸಂಗೀತ ಕ್ಷೇತ್ರದಲ್ಲಿಯೂ ಹೆಚ್ಚಿನ ಆಸಕ್ತಿ ಹೊಂದಿ, ಕುಮಟಾ ಪಟ್ಟಣಕ್ಕೆ ವಾರಕ್ಕೊಮ್ಮೆ ಆಗಮಿಸಿ, ತಬಲಾ ಅಭ್ಯಾಸ ಮಾಡುತ್ತಿದ್ದಾಳೆ. ಅಲ್ಲದೇ, ಸ್ಥಳೀಯವಾಗಿ ನಡೆಯುತ್ತಿರುವ ಸಂಗೀತ ತರಗತಿಗೂ ತೆರಳಿ ಸಂಗೀತಾಭ್ಯಾಸ ಅಧ್ಯಯನ ಮಾಡಿ, ಇತರರಿಗೆ ಮಾದರಿಯಾಗಿದ್ದಾಳೆ.
ಮಗಳ ವಿದ್ಯಾಭ್ಯಾಸಕ್ಕೆ ಅಂಧತ್ವ ಅಡ್ಡಿಯಾಗಿಲ್ಲ. ಓದುವುದನ್ನು ಸದಾ ಗಮನವಿಟ್ಟು ಓದುತ್ತಿದ್ದಳು. ಕಾಲೇಜಿನಲ್ಲಿ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಈಕೆಯ ಓದಿಗೆ ಮತ್ತಷ್ಟು ಪ್ರೋತ್ಸಾಹ ನೀಡಿರುವುದೇ ನನ್ನ ಮಗಳ ಸಾಧನೆಗೆ ಕಾರಣವಾಗಿದೆ.-
ಸುರೇಶ ಭಟ್ಟ, ಸೌಮ್ಯ ಭಟ್ಟ ತಂದೆ.