Advertisement

ಪಿಯು ಮೌಲ್ಯಮಾಪಕರಿಗೆ ಇನ್ನೂ ಸಿಕ್ಕಿಲ್ಲ ವೇತನ

06:55 AM May 28, 2018 | Team Udayavani |

ಬೆಂಗಳೂರು: ದ್ವಿತೀಯ ಪಿಯು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕಾಗಿ ಕಾರ್ಯದೊತ್ತಡದ ನಡುವೆಯೂ ನಿರ್ದಿಷ್ಟ ಕಾಲಮಿತಿಯೊಳಗೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದ ಮೌಲ್ಯಮಾಪ‌ಕರಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಇನ್ನೂ ವೇತನ ಬಂದಿಲ್ಲ.

Advertisement

ರಾಜ್ಯದ 52 ಕೇಂದ್ರದಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪ‌ನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.

ಮೌಲ್ಯಮಾಪಕರೊಬ್ಬರಿಗೆ ಒಂದು ಉತ್ತರ ಪತ್ರಿಕೆಯ ಮೌಲ್ಯಮಾಪನಕ್ಕೆ 30ರಿಂದ 32 ರೂ.ಗಳನ್ನು ನಿಗದಿ ಮಾಡಲಾಗಿತ್ತು.ಯಾವುದೇ ಗೊಂದಲವಿಲ್ಲದೆ ಏಪ್ರಿಲ್‌ 3ನೇ ವಾರದೊಳಗೆ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡಿದೆ. ಏ.30ರಂದು ದ್ವಿತೀಯ ಪಿಯು ಫ‌ಲಿತಾಂಶವನ್ನು ಪ್ರಕಟಿಸಲಾಗಿದೆ. ಬಹುತೇಕ ವಿದ್ಯಾರ್ಥಿಗಳು ಶೈಕ್ಷಣಿಕ ಬದುಕಿನ ಮುಂದಿನ ದಾರಿಯನ್ನು ಈಗಾಗಲೇ ಸ್ಪಷ್ಟಗೊಳಿಸಿಕೊಂಡಿದ್ದಾರೆ. ಆದರೆ, ಮೌಲ್ಯಮಾಪನ ಕಾರ್ಯದಲ್ಲಿ ಪಾಲ್ಗೊಂಡಿದ್ದ 20 ಸಾವಿರ ಮೌಲ್ಯಮಾಪಕರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನೀಡ ಬೇಕಿದ್ದ ವೇತನ ಇನ್ನೂ ಬಿಡುಗಡೆಯಾಗಿಲ್ಲ.

ಮಾರ್ಚ್‌ 1ರಿಂದ 17ರ ವರೆಗೆ ನಡೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ 6.90 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಮಾರ್ಚ್‌ 24ರಂದು ಆರಂಭವಾದ ಮೌಲ್ಯಮಾಪನ ಪ್ರಕ್ರಿಯೆ ಏಪ್ರಿಲ್‌ 3ನೇ ವಾರದೊಳಗೆ ಪೂರ್ಣಗೊಂಡಿತ್ತು. ಸರ್ಕಾರಿ,ಅನುದಾನಿತ ಹಾಗೂ ಅನುದಾನರಹಿತ ಪಿಯು ಕಾಲೇಜಿನ ಉಪನ್ಯಾಸಕರು ಹಾಗೂ ಅತಿಥಿ ಉಪನ್ಯಾಸಕರು ಸೇರಿ ಸುಮಾರು 20 ಸಾವಿರ ಬೋಧಕರನ್ನು ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿಸಲಾಗಿತ್ತು.

ಸರ್ಕಾರಿ ಉಪನ್ಯಾಸಕರ ಜತೆಗೆ ಅತಿಥಿ ಉಪನ್ಯಾಸಕರನ್ನು ಹಾಗೂ ಅನುದಾನರಹಿತ ಕಾಲೇಜಿನ ಉಪನ್ಯಾಸಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮೌಲ್ಯಮಾಪ‌ನ ಕಾರ್ಯಕ್ಕೆ ಬಳಸಿಕೊಳ್ಳಲಾಗಿತ್ತು. ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಿ ಉಪನ್ಯಾಸಕರು ಮೌಲ್ಯಮಾಪನ ಪ್ರಕ್ರಿಯೆಯನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ
ಪರ್ಯಾಯ ವ್ಯವಸ್ಥೆಗಾಗಿ ಅತಿಥಿ ಉಪನ್ಯಾಸಕರು ಮತ್ತು ಅನುದಾನರಹಿತ ಕಾಲೇಜಿನ ಉಪನ್ಯಾಸಕರನ್ನು ಮೌಲ್ಯಮಾಪನ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ಆದರೆ,ಮೌಲ್ಯಮಾಪಕರಾಗಿ ಸೇವೆ ಸಲ್ಲಿಸಿದ ಯಾರಿಗೂ ಕೂಡ ಇಲಾಖೆಯಿಂದ ವೇತನ ನೀಡಿಲ್ಲ.

Advertisement

ಬೇಸಿಗೆ ರಜೆಯೂ ಇರಲಿಲ್ಲ: ಸರ್ಕಾರಿ ಪಿಯು ಕಾಲೇಜು ಈ ವರ್ಷ ಅವಧಿಗೂ ಒಂದು ತಿಂಗಳ ಮೊದಲೇ ಆರಂಭವಾಗಿತ್ತು. ಸಾಮಾನ್ಯವಾಗಿ ಪ್ರತಿ ವರ್ಷ ಮೇ ಅಂತ್ಯಕ್ಕೆ ಕಾಲೇಜು ಆರಂಭವಾಗುತ್ತಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಮೇ 2ಕ್ಕೆ ದ್ವಿತೀಯ ಪಿಯು ಹಾಗೂ ಮೇ 14ಕ್ಕೆ ಪ್ರಥಮ ಪಿಯು ತರಗತಿಗಳು ಆರಂಭಗೊಂಡಿವೆ.

ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಉಪನ್ಯಾಸಕರಿಗೆ 2 ವಾರದ ಬೇಸಿಗೆ ರಜೆ ಕೂಡ ಸಿಕ್ಕಿರಲಿಲ್ಲ.
ಇಲಾಖೆಯ ಈ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದರೂ, ಯಾವುದೇ ಬದಲಾವಣೆ ಮಾಡಿಲ್ಲ.

ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯೆ ನೀಡಿರುವ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಉಪನ್ಯಾಸಕರಿಗೂ ವೇತನ ನೀಡುತ್ತಿದ್ದೇವೆ. ತಾಂತ್ರಿಕ 
ತೊಂದರೆಯಿಂದಾಗಿ ಸ್ವಲ್ಪ ವಿಳಂಬವಾಗಿದೆ. ಮಾಸಾಂತ್ಯದೊಳಗೆ ಎಲ್ಲರಿಗೂ ವೇತನ ತಲುಪಲಿದೆ ಎಂದು ತಿಳಿಸಿದ್ದಾರೆ.

ವೇತನವನ್ನು ಆದಷ್ಟು ಬೇಗ ನೀಡುವಂತೆ 2 ಬಾರಿ ಮನವಿ ಸಲ್ಲಿಸಿದ್ದೇವೆ. ಇಲಾಖೆಯ ನಿರ್ದೇಶಕರುಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೆಚ್ಚುವರಿ ಕಾರ್ಯ ಮಾಡಿಸಿಕೊಂಡಿರುವ ಇಲಾಖೆ, ಉಪನ್ಯಾಸಕರಿಗೆ ಸೂಕ್ತ ಸಮಯದಲ್ಲಿ ಸೌಲಭ್ಯವನ್ನು ನೀಡಬೇಕು.
– ತಿಮ್ಮಯ್ಯ ಪುರ್ಲೆ, ಅಧ್ಯಕ್ಷ, ಸರ್ಕಾರಿ
ಪಿಯು ಕಾಲೇಜು ಉಪನ್ಯಾಸಕರ ಸಂಘ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next