ಹೊಸದಿಲ್ಲಿ: ಭಾರತೀಯ ಒಲಂಪಿಕ್ ಅಸೋಸಿಯೇಷನ್ (Indian Olympic Association) ಅನ್ನು “ನಿರಂಕುಶ” ರೀತಿಯಲ್ಲಿ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಕುರಿತು ಅಧ್ಯಕ್ಷೆ ಪಿಟಿ ಉಷಾ ಅವರು ಭಾನುವಾರ (ಸೆ29)ಕಿಡಿ ಕಾರಿದ್ದಾರೆ.
ಬಂಡಾಯ ಎದ್ದಿರುವ ಕಾರ್ಯಕಾರಿ ಮಂಡಳಿಯ ಸದಸ್ಯರ ವಿರುದ್ಧ ಆಕ್ರೋಶ ಹೊರ ಹಾಕಿದ ಪಿ.ಟಿ. ಉಷಾ, ದೇಶದ ಕ್ರೀಡೆಯ ಸುಧಾರಣೆಗಾಗಿ ಕೆಲಸ ಮಾಡುವುದಕ್ಕಿಂತ ಸ್ವಾರ್ಥಕ್ಕಾಗಿ ಮತ್ತು ಹಣಕಾಸು ಲಾಭದ ಮೇಲೆ ಹೆಚ್ಚು ಗಮನಹರಿಸುತ್ತಿದ್ದಾರೆ” ಎಂದಿದ್ದಾರೆ.
ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ, ” ಕಾರ್ಯಕಾರಿ ಮಂಡಳಿಯ ಸದಸ್ಯರಲ್ಲಿ ಕೆಲವರು ಲಿಂಗ ಪಕ್ಷಪಾತದ ಆರೋಪಗಳು ಮತ್ತು ಅವರ ವಿರುದ್ಧ ದಾಖಲಾಗಿರುವ ಲೈಂಗಿಕ ಕಿರುಕುಳದ ಪ್ರಕರಣಗಳು ಸೇರಿದಂತೆ ಬಹಳ ಪ್ರಶ್ನಾರ್ಹ ದಾಖಲೆಗಳನ್ನು ಹೊಂದಿದ್ದಾರೆ” ಎಂದು ಆರೋಪಿಸಿದ್ದಾರೆ.
45-ವರ್ಷದ ನನ್ನ ಕ್ರೀಡಾ ಜೀವನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, ನಮ್ಮ ಕ್ರೀಡಾಪಟುಗಳ ಆಕಾಂಕ್ಷೆಗಳು ಮತ್ತು ನಮ್ಮ ರಾಷ್ಟ್ರದ ಕ್ರೀಡಾ ಭವಿಷ್ಯದ ಬಗ್ಗೆ ಅಸಡ್ಡೆ ಹೊಂದಿರುವ ವ್ಯಕ್ತಿಗಳನ್ನು ನಾನು ಎಂದಿಗೂ ಎದುರಿಸಿಲ್ಲ” ಎಂದಿದ್ದಾರೆ.
ಭಾರತೀಯ ಒಲಂಪಿಕ್ ಅಸೋಸಿಯೇಷನ್ ನ 12 ಕ್ಕೂ ಹೆಚ್ಚು ಮಂದಿ ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರು ಐಒಸಿಯ(IOC) ಹಿರಿಯ ಅಧಿಕಾರಿ ಜೆರೋಮ್ ಪೊವಿ ಅವರಿಗೆ ಪತ್ರವೊಂದನ್ನು ಬರೆದು, ”ಉಷಾ ಸಂಸ್ಥೆಯನ್ನು ನಿರಂಕುಶ ರೀತಿಯಲ್ಲಿ ನಡೆಸುತ್ತಿದ್ದಾರೆ” ಎಂದು ಆರೋಪಿಸಿದ್ದರು.