Advertisement

ಕಾಡುವ ಪೀಟಿ ಪೀರಿಯೆಡ್‌ ನೆನಪುಗಳು

12:30 AM Feb 15, 2019 | |

ಈಗ ಆಟದ ಪೀರಿಯೆಡ್‌ ಎಂದ ಕೂಡಲೇ ಮಕ್ಕಳು “ಹೋ’ ಎನ್ನುತ್ತ ಮೈದಾನಕ್ಕೆ ಜಿಗಿಯುತ್ತಾರೆ. ಪೀಟಿ ಪೀರಿಯೆಡ್‌ ಎಂದರೆ ಯಾವ ಮಕ್ಕಳಿಗೆ ತಾನೆ ಇಷ್ಟವಿರುವುದಿಲ್ಲ ಹೇಳಿ. ಪ್ರತಿಯೊಂದು ಶಾಲೆಯಲ್ಲೂ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಗಾಗಿ ಪೀಟಿ ಪೀರಿಯಡ್‌ ಇದ್ದೇ ಇರುತ್ತದೆ. ಮಕ್ಕಳಿಗೆ ಪಾಠದೊಂದಿಗೆ ಆಟಗಳೂ ಉತ್ಸಾಹವನ್ನು ನೀಡುತ್ತವೆ. ನನಗಂತೂ ಹೈಸ್ಕೂಲ್‌, ಪ್ರೈಮರಿಯಲ್ಲಿರುವಾಗ ಪೀಟಿ ಪೀರಿಯೆಡ್‌ ಎಂದರೆ ಎಲ್ಲಿಲ್ಲದ ಉತ್ಸಾಹ. ಆದರೆ, ನಾನು ಹೈಸ್ಕೂಲ್‌ನಲ್ಲಿ ಓದುವಾಗ ಮೊದಲು ಕೆಲವು ದಿನಗಳಲ್ಲಿ ಪೀಟಿ ಪೀರಿಯೆಡ್‌ಗೆ ಹೋಗುತ್ತಿರಲಿಲ್ಲ. ನಮ್ಮ ತರಗತಿಯಲ್ಲಿ ಆಟ ಆಡಲು ಹೋಗದ ಕೆಲವು ವಿದ್ಯಾರ್ಥಿಗಳ ಒಂದು ಗುಂಪಿತ್ತು. ನಾನು ಸಹ ಆ ಗುಂಪಿನೊಂದಿಗೆ ಸೇರಿಕೊಂಡಿದ್ದೆ. ನಮ್ಮ ಈ ಗುಂಪು ಪೀಟಿ ಪೀರಿಯೆಡ್‌ ಬಂದಾಗ ಆಡಲು ಹೋಗದೆ ತರಗತಿಯಲ್ಲೇ ಕುಳಿತು ಹರಟೆ ಹೊಡೆಯುತ್ತಿತ್ತು. ಆದರೆ, ನನಗೆ ಪೀಟಿ ಎಂದರೆ ತುಂಬಾನೆ ಇಷ್ಟ. ನಾನು ತರಗತಿಯಲ್ಲೇ ಹರಟೆ ಹೊಡೆಯುವ ಆ ಗುಂಪಿಗೆ ಸೇರಿಕೊಳ್ಳಲು ಒಂದು ಕಾರಣವೂ ಇತ್ತು. ಅದೆಂದರೆ, ನನಗೆ ವಾಲಿಬಾಲ್‌, ತ್ರೋಬಾಲ್‌ ಆಟಗಳ ಬಗ್ಗೆ ಏನೂ ಗೊತ್ತಿರಲಿಲ್ಲ. ನಾನು ಅವರೊಂದಿಗೆ ಆಡಲು ಹೋದರೆ “ನಿನಗೆ ಆಟದ ಬಗ್ಗೆ ಏನೂ ಗೊತ್ತಿಲ್ಲ’ ಎಂದು ಅವರೆಲ್ಲ ಗೇಲಿ ಮಾಡುತ್ತಿದ್ದರು. ಹಾಗಾಗಿ, ನಾನು ಅವರೊಂದಿಗೆ ಆಡಲು ಹೋಗುತ್ತಿರಲಿಲ್ಲ. ಆದರೆ, ನನಗೆ ಟೆನ್ನಿಸ್‌ ಆಟ ಆಡಲು ಚೆನ್ನಾಗಿಯೇ ಬರುತ್ತಿತ್ತು. ಅದೇ ಹೊತ್ತಿಗೆ ನಮ್ಮ ಶಾಲೆಯ ಪೀಟಿ ಮಾಸ್ಟರರು ಸ್ಕೂಲಿಗೆ  ಬ್ಯಾಟು, ಕಾಕ್‌ ತರಿಸಿದರು. ಇದರಿಂದ ನನಗೆ ತುಂಬಾ ಸಂತೋಷವಾಯಿತು. ಪೀಟಿಗೆ ಬೆಲ್‌ ಹೊಡೆದಾಗ ನಾನು ಎಲ್ಲರಿಗಿಂತ ಮೊದಲು ಬ್ಯಾಟು ಮತ್ತು ಕಾಕ್‌ ಹಿಡಿದುಕೊಂಡು ಮೈದಾನದೆಡೆಗೆ ಹೆಜ್ಜೆ ಹಾಕುತ್ತಿದ್ದೆ. ಟೆನ್ನಿಸ್‌ ಆಟದಲ್ಲಿದ್ದ ನನ್ನ ಉತ್ಸಾಹ, ಆಟದ ವೈಖರಿ ಕಂಡು ನನ್ನ ಸಹಪಾಠಿಗಳಿಗೂ ಆಶ್ಚರ್ಯವಾಯಿತು. ಮತ್ತೆಂದೂ ಪೀಟಿ ಪೀರಿಯಡ್‌ ಅನ್ನೂ ಮಿಸ್‌ ಮಾಡಿಕೊಳ್ಳಲಿಲ್ಲ. ನನ್ನನ್ನು ಗೇಲಿ ಮಾಡುತ್ತಿದ್ದವರೂ ಅದನ್ನು ನಿಲ್ಲಿಸಿದರು. ಗೇಲಿ ಮಾಡಿದವರ ಬಾಯಿಯಿಂದಲೇ ನನಗೆ ಪ್ರಶಂಸೆಗಳು ಬರತೊಡಗಿದಾಗ ನನಗೆ ಎಲ್ಲಿದ ಸಂತೋಷವಾಯಿತು. 

Advertisement

ನಮ್ಮ ಬಿಂಬ-ಪ್ರತಿಬಿಂಬಗಳು ಯಾವತ್ತೂ ನಮ್ಮ ಆಸಕ್ತಿಯ ವಿಷಯಗಳತ್ತ ತುಂಬಿಕೊಂಡಿರಬೇಕೇ ಹೊರತು ಇನ್ನೊಬ್ಬರ ಆಸಕ್ತಿಯನ್ನು ಅನುಸರಿಸುವಂತಿರಬಾರದು. ಇನ್ನೊಬ್ಬರ ಕಲೆ ನಮ್ಮದಾಗಲು ಸಾಧ್ಯವೂ ಇಲ್ಲ ! ಅಚ್ಚರಿಯ ಸಂಗತಿ ಎಂದರೆ ನಾವು ಶಾಲಾದಿನಗಳಲ್ಲಿ ಎಷ್ಟೊಂದು ಪಾಠಗಳನ್ನು ಓದುತ್ತಿರುತ್ತೇವೆ. ಆದರೆ, ನಮಗೆ ಚೆನ್ನಾಗಿ ನೆನಪಿರುವುದು “ಆಟ’ದ ಪೀರಿಯೆಡ್‌ ಮಾತ್ರ !

ಟಿ. ಸುಶ್ಮಿತಾ
ದ್ವಿತೀಯ ವರ್ಷ
ಕೆನರಾ ಇಂಜಿನಿಯರಿಂಗ್‌ ಕಾಲೇಜು, ಬೆಂಜನಪದವು
 

Advertisement

Udayavani is now on Telegram. Click here to join our channel and stay updated with the latest news.

Next