ಚಿಕ್ಕಬಳ್ಳಾಪುರ: ರೌಡಿಯೊಬ್ಬನ ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸಿ ಸ್ಥಳ ಪರಿಶೀಲನೆ ತೆರಳಿದ್ದ ವೇಳೆ ಪೊಲೀಸರ ಮೇಲೆ ದುಷ್ಕರ್ಮಿ ಹಲ್ಲೆಗೆ ಯತ್ನಿಸಿದ್ದು ಈ ವೇಳೆ ಪೊಲೀಸರು ಆತ್ಮರಕ್ಷಣೆಗೆ ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ಗುರುವಾರ ನಡೆಸಿದೆ.
ಕಳೆದ ಬುಧವಾರ ಹಳೆ ದ್ವೇಷದ ಹಿನ್ನಲೆಯ ತಾಲೂಕಿನ ಕಾದಲವೇಣಿ ಗ್ರಾಮದ ಸಮೀಪ ರೌಡಿ ಶೀಟರ್ ರಮೇಶ ಎಂಬಾತನ್ನು ಮೂವರು ದುಷ್ಕರ್ಮಿಗಳು ಪಲ್ಸರ್ ವಾಹನದಲ್ಲಿ ಬಂದು ರಮೇಶನನ್ನು ಅಟ್ಟಿಸಿಕೊಂಡು ಹೋಗಿ ಬರ್ಬರವಾಗಿ ಕೊಲೆ ಮಾಡಿದ್ದರು.
ಈ ಬಗ್ಗೆ ಗೌರಿಬಿದನೂರು ತಾಲೂಕಿನ ಗ್ರಾಮಾಂತರ ಠಾಣೆ ಪೊಲೀಸರು ಗುರುವಾರ ಕೊಲೆ ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಬಂದ ಕೂಡಲೇ ಅವರ ಬಂಧನಕ್ಕೆ ಬೆನ್ನಟ್ಟಿ ಹೊರಟಾಗ ವೆಂಕಟರೆಡ್ಡಿ, ನರೇಂದ್ರ. ಅರ್ಜುನ ಹಾಗೂ ಅಂಬರೀಶ್ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಅಂಬರೀಶ್ ಎಂಬಾತನನ್ನು ಕರೆದುಕೊಂಡು ಪೊಲೀಸರು ಸ್ಥಳ ಪರಿಶೀಲಿಸುವ ಸಂದರ್ಭದಲ್ಲಿ ಪೊಲೀಸ್ ಪೇದೆ ಮಧು ಎಂಬುವರನ್ನು ಪಕ್ಕಕ್ಕೆ ತಳ್ಳಿ ಅವರ ಮೇಲೆ ದೊಡ್ಡ ಸೈಜು ಕಲ್ಲು ಎತ್ತಿ ಹಾಕಲು ಹೊರಟಾಗ ಪಿಎಸ್ಐ ಮೋಹನ್ ಅಂಬರೀಶ್ ಗೆ ಎಚ್ವರಿಕೆ ನೀಡಿದರೂ ಕೇಳದೇ ಪೊಲೀಸರ ಮೇಲೆಯೆ ಹಲ್ಲೆಗೆ ಯತ್ನಿಸಿದ್ದಾನೆ. ಆಗ ಪಿಎಸ್ಐ ಮೋಹನ್ ಮತ್ತೊಮ್ಮೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೆ ಅಂಬರೀಶ್ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಾಣದಿದ್ದಕ್ಕೆ ಕಾಲಿಗೆ ಗುಂಡು ಹಾರಿಸಿದ್ದಾರೆ. ಕೂಡಲೇ ಗಾಯಳು ಪೇದೆಯನ್ನು ಹಾಗೂ ಪೊಲೀಸರಿಂದ ಕಾಲಿಗೆ ಗುಂಡು ತಗಲಿಸಿಕೊಂಡ ಕೊಲೆ ಆರೋಪಿ ಅಂಬರೀಶ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆರೋಪಿಗಳ ಬಂಧನಕ್ಕೆ ಜಿಲ್ಲೆಯ ಬಾಗೇಪಲ್ಲಿ ಸಿಪಿಐ ನೈಯಾಜ್ ಬೇಗ್ ಹಾಗೂ ಗೌರಿಬಿದನೂರು ಗ್ರಾಮಾಂತರ ಠಾಣೆ ಪಿಎಸ್ಐ ಮೋಹನ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರೆಂದು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಉದಯವಾಣಿ ತಿಳಿಸಿದರು.