ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಸಂಬಂಧ ಎಡಿಜಿಪಿ ಅಮೃತ್ ಪೌಲ್ ಗುರುವಾರ ಎರಡನೇ ಬಾರಿಗೆ ಸಿಐಡಿ ವಿಚಾರಣೆಗೆ ಹಾಜರಾಗಿದ್ದಾರೆ.
ಬೆಳಗ್ಗೆ 11 ಗಂಟೆ ಸುಮಾರಿಗೆ ಸಿಐಡಿ ಕಚೇರಿಗೆ ಆಗಮಿಸಿದ ಅಮೃತ್‌ಪೌಲ್‌ರನ್ನು ಖುದ್ದು ಸಿಐಡಿ ಎಡಿಜಿಪಿ ಉಮೇಶ್ ಕುಮಾರ್ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
ಈ ಹಿಂದೆ ನೇಮಕಾತಿ ವಿಭಾಗದಲ್ಲಿ ಅಮೃತ್ ಪೌಲ್ ಎಡಿಜಿಪಿ ಆಗಿದ್ದ ಸಂದರ್ಭದಲ್ಲಿ ಹಗರಣ ನಡೆದಿತ್ತು. ತಮ್ಮ ಅಧಿಕಾರವಾಧಿಯಲ್ಲಿಯೇ ದೊಡ್ಡ ಮಟ್ಟದ ಅಕ್ರಮ ನಡೆದಿದ್ದರೂ ಅಮೃತ್‌ಪೌಲ್ ಯಾವುದೇ ಕ್ರಮಕೈಗೊಂಡಿರಲಿಲ್ಲ. ಅಲ್ಲದೆ, ಈ ಅಕ್ರಮದಲ್ಲಿ ಬಂಧನಕ್ಕೊಳಗಾದ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್‌ವಿಚಾರಣೆ ವೇಳೆ ಅಮೃತ್‌ಪೌಲ್‌ಗೂ ಅಕ್ರಮದಲ್ಲಿ ಪಾಲು ನೀಡಲಾಗಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದರು ಎಂದು ಹೇಳಲಾಗಿದೆ.
ಹೀಗಾಗಿ ಈ ಹಿಂದೆ ಒಂದು ಅಮೃತ್‌ಪೌಲ್‌ರನ್ನು ವಿಚಾರಣೆ ನಡೆಸಲಾಗಿತ್ತು. ಅಂದು ಕೆಲವೊಂದು ಪ್ರಶ್ನೆಗಳಿಗೆ ಗೊಂದಲದ ಉತ್ತರ ನೀಡಿದ್ದ ಅಮೃತ್‌ಪೌಲ್‌ರನ್ನು ಗುರುವಾರ ಮತ್ತೂಮ್ಮೆ ವಿಚಾರಣೆ ನಡೆಸಲಾಗಿದೆ. ಈ ವೇಳೆಯೂ ಕೆಲವೊಂದು ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡಿಲ್ಲ. ಅಗತ್ಯಬಿದ್ದರೆ ಮತ್ತೂಮ್ಮೆ ವಿಚಾರಣೆಗೆ ಬರಬೇಕಾಗುತ್ತದೆ ಎಂದು ಸೂಚಿಸಿ ಕಳುಹಿಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಐದಾರು ಮಂದಿ ಡಿವೈಎಸ್ಪಿಗಳು ಸೇರಿ 15ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ-ಸಿಬ್ಬಂದಿ ಹಾಗೂ ಅಭ್ಯರ್ಥಿಗಳು ಸೇರಿ 55ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಬೆಂಗಳೂರು ಮತ್ತು ಕಲಬುರಗಿಯಲ್ಲಿ ಪ್ರತ್ಯೇಕವಾಗಿ ಸಿಐಡಿ ತನಿಖೆ ನಡೆಸುತ್ತಿದೆ.