ಬೆಂಗಳೂರು: ಪಿಎಸ್ಐ ಪರೀಕ್ಷೆ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಐಪಿಎಸ್ ಅಧಿಕಾರಿ ಎಡಿಜಿಪಿ ಅಮೃತ್ಪೌಲ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 24ನೇ ಸಿಸಿಎಚ್ ಕೋರ್ಟ್ ವಜಾಗೊಳಿಸಿದೆ.
ಪ್ರಕರಣದಲ್ಲಿ ಆರೋಪಿ ಪ್ರಮುಖ ಪಾತ್ರವಹಿಸಿದ್ದು, ಸ್ಟ್ರಾಂಗ್ ಕೋಣೆಯ ಕೀಲಿ ಕೀ ಅಮೃತ್ಪೌಲ್ ಬಳಿಯೇ ಕೊಡಲಾಗಿತ್ತು. ಅದನ್ನು ತನ್ನ ಕಿರಿಯ ಅಧಿಕಾರಿಗಳಿಗೆ ನೀಡಿ ದುರುಪಯೋಗ ಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಆರೋಪಿ ಯಾವುದೇ ಮಾಹಿತಿ ನೀಡಿಲ್ಲ. ಜತೆಗೆ ಪ್ರಕರಣದ ತನಿಖೆ ಮುಕ್ತಾಯಗೊಂಡಿಲ್ಲ. ಈ ವೇಳೆ ಜಾಮೀನು ನೀಡಬಾರದು. ಜತೆಗೆ ಕೆಲ ಸಾಕ್ಷಿಗಳ ಹೇಳಿಕೆಯನ್ನು ಇನ್ನೂ ಪರಿಶೀಲಿಸಬೇಕಿದೆ. ಅಲ್ಲದೆ, ಅರೋಪಿ ರಾಜ್ಯದ ಉನ್ನತ ಮಟ್ಟದ ಅಧಿಕಾರಿಯಾಗಿದ್ದು, ಜಾಮೀನು ನೀಡಿ ಬಿಡುಗಡೆ ಮಾಡಿದರೆ ಪ್ರಾಸಿಕ್ಯೂಷನ್ ಮೇಲೆ ಪರಿಣಾಮ ಬೀರಬಹುದು.
ಅಲ್ಲದೆ, ಸಾಕ್ಷಿಗಳಿಗೆ ಬೆದರಿಕೆಯೊಡ್ಡುವ ಸಾಧ್ಯತೆಯಿದೆ. ಹೀಗಾಗಿ ಜಾಮೀನು ನೀಡಬಾರದು ಎಂದು ಕೋರ್ಟ್ಗೆ ಸರ್ಕಾರಿ ವಿಶೇಷ ಅಭಿಯೋಜಕ ಪಿ.ಪ್ರಸನ್ನ ಕುಮಾರ್ ಮನವಿ ಮಾಡಿದರು.ಮನವಿ ಪುರಸ್ಕರಿಸಿದ ಕೋರ್ಟ್ ಆರೋಪಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.