ಕಲಬುರಗಿ : 545 ಪಿಎಸ್ಐ ನೇಮಕಾತಿಯ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ ಪೋಲಿಸ್ ಕಾನ್ ಸ್ಟೇಬಲ್ ನನ್ನು ಬಂಧಿಸಿದ್ದು, ಈ ಮೂಲಕ ಬಂಧಿತರ ಸಂಖ್ಯೆ 42 ಕ್ಕೆ ಏರಿಕೆಯಾದಂತಾಗಿದೆ.
ಇಸ್ಮಾಯಿಲ್ ಜಮಾದಾರ್ ಎಂಬ ಪೇದೆಯೇ ಬಂಧನವಾಗಿದ್ದು, ಕಳೆದ ರಾತ್ರಿ ಬಂಧಿಸಿ ಸಿಐಡಿ ಅಧಿಕಾರಿಗಳು ಕರೆ ತಂದಿದ್ದಾರೆ. ಕಲಬುರಗಿಯ ನ್ಯೂ ನೊಬೇಲ್ ಶಾಲೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ಎಸಗಿರುವ ಆರೋಪದ ಮೇರೆಗೆ ಇಸ್ಮಾಯಿಲ್ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಪೇದೆಗಳ- ಪರೀಕ್ಷಾರ್ಥಿಗಳ ಬಂಧನಕ್ಕೆ ಸಿಮಿತ: ಪಿಎಸ್ಐ ನೇಮಕದ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ ಈ ಮುಂಚೆ ದೊಡ್ಡ – ದೊಡ್ಡ ಕುಳಗಳಿಗೆ ಹೊಂಚುಹಾಕಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಈ ಹಗರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿರುವ ಬಗ್ಗೆ ಸಂಶಯಗಳಿವೆ.
ಕುರಿತು ಪೊಲೀಸ್ ಅಧಿಕಾರಿಗಳನ್ನು ತನಿಖೆ ಇಲ್ಲವೇ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿತ್ತು ಆದರೆ ಈಗ ಪೊಲೀಸ್ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸುವ ಗೋಜಿಗೆ ಅಧಿಕಾರಿಗಳು ಹೋಗುತ್ತಿಲ್ಲ ಎಂಬುದು ಆರೋಪ ಕೇಳಿಬರುತ್ತಿದೆ.
ಜಾಮೀನು ಅರ್ಜಿ ವಜಾ: ಪಿಎಸ್ಐ ನೇಮಕಾತಿಯ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಮುಖ ಕಿಂಗ್ ಪಿನ್ ಗಳಾದ ಆರ್ ಡಿ ಪಾಟೀಲ್, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ಕಾಂಗ್ರೆಸ್ ಮುಖಂಡ ಮಹಾಂತೇಶ ಪಾಟೀಲ್, ಸೋಲಾಪುರ ಕಾಳಿದಾಸ, ನೀರಾವರಿ ಇಲಾಖೆಯ ಜೆಇ ಮಲ್ಲಿಕಾರ್ಜುನ ಮೇಳಕುಂದಿ ಸೇರಿದಂತೆ 8 ಜನರ ಜಾಮೀನು ಅರ್ಜಿ ಇಲ್ಲಿನ ನ್ಯಾಯಾಲಯ ವಜಾಗೊಳಿಸಿದೆ.
ಒಂದನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಹೇಮಾವತಿಯವರು ಅವರು ಅರ್ಜಿಯನ್ನು ವಜಗೊಳಿಸಿದ್ದಾರೆ.
ತನಿಖೆ ನಿಧಾನಗತಿ : ಸಿಐಡಿ ತನಿಖೆ ಯು ಪಿಎಸ್ಐ ಅಕ್ರಮ ಪರೀಕ್ಷೆ ಸಂಬಂಧಿಸಿದಂತೆ ನಿಧಾನಗತಿಯಲ್ಲಿ ಅನುಸರಿಸುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಮೊದಲಿನ ಉತ್ಸಾಹ ಕಂಡುಬರುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.