ಬೆಂಗಳೂರು: ನಗರ ಮತ್ತು ಬೆಂಗಳೂರು ಗ್ರಾಮಾಂತರದ ಶಾಲೆಗಳಿಗೆ ಇ-ಮೇಲ್ ಮೂಲಕ ಹುಸಿ ಬಾಂಬ್ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ನಗರ ಪೊಲೀಸರು, 16 ಶಾಲೆಗಳಿಗೂ ಇ-ಮೇಲ್ ಬಂದಿದ್ದ ಐಪಿ ವಿಳಾಸವನ್ನು ಪಡೆದುಕೊಂಡಿದ್ದಾರೆ. ಅಲ್ಲದೇ, ಈ ವಿಳಾಸ ಯಾರದ್ದು? ಎಲ್ಲಿಂದ ಬಂದಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಗೂಗಲ್ ಸಂಸ್ಥೆಗೆ ಪತ್ರ ಬರೆದಿದ್ದಾರೆ. ಜತೆಗೆ ಆರೋಪಿಗಳ ಐಪಿ ವಿಳಾಸ ಪತ್ತೆ ಹಚ್ಚಲು ಸಿಐಡಿ ಸೈಬರ್ ಕ್ರೈಂ ಪೊಲೀಸರ ಜತೆ ತಾಂತ್ರಿಕ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಜಂಟಿ ಕಾರ್ಯಾಚರಣೆ: ನಗರದ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಸೈಬರ್ ತಜ್ಞರು, ವಿಶೇಷ ತಂಡ ಹಾಗೂ ಸಂಬಂಧಿಸಿದ ಇಲಾಖೆಗಳ ಜತೆ ಜಂಟಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸದ್ಯದಲ್ಲೇ ಆರೋ ಪಿಗಳನ್ನು ಪತ್ತೆ ಹಚ್ಚಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
5 ದಿನಗಳ ಹಿಂದೆ 15 ಶಾಲೆಗಳಿಗೆ ಬೆದರಿಕೆ: ಐದು ದಿನಗಳ ಹಿಂದಷ್ಟೇ ನಗರದ 15 ಶಾಲೆಗಳ ಇ-ಮೇಲ್‌ಗೆ ಸಂದೇಶ ಬಂದಿದ್ದು, ಮಹದೇವಪುರದ ಗೋಪಾಲನ್ ಇಂಟರ್ ನ್ಯಾಷನಲ್ ಶಾಲೆ, ವರ್ತೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್, ಮಾರತ್ತಹಳ್ಳಿಯ ನ್ಯೂ ಅಕಾಡೆಮಿ ಸ್ಕೂಲ್, ಹೆಣ್ಣೂರಿನ ಸೇಂಟ್ ವಿನ್ಸೆಂಟ್ ಪೌಲ್ ಶಾಲೆ, ಗೋವಿಂದಪುರದ ಪಬ್ಲಿಕ್ ಶಾಲೆ, ಹೈಗ್ರೌಂಡ್ಸ್‌ನ ಸೋಫಿಯಾ ಶಾಲೆ, ಚಿಕ್ಕಜಾಲದ ಸ್ಟೋನಿ ಹಿಲ್ ಸ್ಕೂಲ್, ಕೊಡಿಗೇಹಳ್ಳಿಯ ಟ್ರಿಯೋ ಸ್ಕೂಲ್, ವಿದ್ಯಾರಣ್ಯಪುರದ ವ್ಯಾಸ ಸ್ಕೂಲ್‌ಗಳಿಗೆ ಇ-ಮೇಲ್ ಸಂದೇಶ ಬಂದಿತ್ತು. ಬೆಂಗಳೂರು ಗ್ರಾಮಾಂತರದಲ್ಲಿ ಸರ್ಜಾಪುರದ ಕುನ್ಸ್ ಕ್ಯಾಪ್ಸ್ ಕೋಲಂ ಇಂಟರ್ ನ್ಯಾಷನಲ್ ಸ್ಕೂಲ್, ಹೆಬ್ಬಗೋಡಿಯ ಎಬೆನೇಜರ್ ಇಂಟರ್ ನ್ಯಾಷನಲ್ ಸ್ಕೂಲ್, ಬನ್ನೇರುಘಟ್ಟದ ಕ್ಯಾಂಡರ್, ರೆಡ್ ಬ್ರಿಡ್ಜ್ ಹಾಗೂ ಇನ್ವೆಂಚರ್ ಅಕಾಡೆಮಿ ಹಾಗೂ ಬಿವಿಎಂ ಗ್ಲೋಬಲ್ ಶಾಲೆಗಳಿಗೂ ಇ-ಮೇಲ್ ಸಂದೇಶ ಬಂದಿತ್ತು. ಕೂಡಲೇ ಶಾಲಾ ಮುಖ್ಯಸ್ಥರು ಸಹಾಯವಾಣಿ 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಶಾಲೆ ಮಕ್ಕಳು ಹಾಗೂ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಶೋಧಿಸಿದ್ದರು. ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿರಲಿಲ್ಲ.
4 ದಿನ ತಡವಾಗಿ ಸಂದೇಶ ನೋಡಿದ ಬಿಷಪ್ ಕಾಟನ್ ಶಾಲೆ!
ಐದು ದಿನಗಳ ಹಿಂದಷ್ಟೇ ನಗರದ 15 ಖಾಸಗಿ ಶಾಲೆಗಳ ಆವರಣದಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್‌ನಲ್ಲಿ ಬೆದರಿಕೆ ಹುಸಿ ಸಂದೇಶ ಕಳುಹಿಸಿದ ಕಿಡಿಗೇಡಿಗಳು ಸೋಮವಾರ ಕಬ್ಬನ್ ಠಾಣೆ ವ್ಯಾಪ್ತಿಯ ರಿಚ್ಮಂಡ್ ವೃತ್ತದ ಸಮೀಪದಲ್ಲಿರುವ ಬಿಷಪ್ ಕಾಟನ್ ಶಾಲೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಮತ್ತೂಂದು ಇ-ಮೇಲ್ ಸಂದೇಶ ಬಂದಿದೆ.
ಆದರೆ, ಈ ಸಂದೇಶ ಏಪ್ರಿಲ್ 8ರಂದು ನಗರದ 15 ಶಾಲೆಗಳಿಗೆ ಬಂದ ದಿನವೇ ಬಂದಿದೆ. ಆದರೆ, ಶಾಲಾ ಆಡಳಿತ ಮಂಡಳಿ ಸೋಮವಾರ ನೋಡಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದೆ. ಕಬ್ಬನ್ ಪಾರ್ಕ್ ಪೊಲೀಸರು ಕೂಡಲೇ ಶ್ವಾನದಳ, ಬಾಂಬ್ ನಿಷ್ಕ್ರೀಯ ದಳದ ಜತೆ ಸ್ಥಳಕ್ಕೆ ಬಂದ ತಂಡ, ಶಿಕ್ಷಕರು, ಶಾಲಾ ಆಡಳಿತ ಸಿಬ್ಬಂದಿಯನ್ನು ಹೊರಗಡೆ ಕಳುಹಿಸಿ ಶೋಧಿಸಿದ್ದಾರೆ. ಶಾಲೆಯ ಎಲ್ಲ ತರಗತಿಗಳು, ಆಟದ ಮೈದಾನ, ಆಟಿಕೆಗಳು, ಉಪಕರಣಗಳು, ಶೌಚಾಲಯ ಸೇರಿ ಎಲ್ಲೆಡೆ ಹುಡುಕಾಟ ನಡೆಸಲಾಗಿದೆ. ಆದರೆ, ಬಾಂಬ್ ಅಥವಾ ಸ್ಫೋಟಕ ವಸ್ತುಗಳು ಅಥವಾ ಅನುಮಾನಾಸ್ಪದ ವಸ್ತುಗಳಾಗಲಿ ಕಂಡು ಬಂದಿಲ್ಲ. ಇದೊಂದು ಹುಸಿ ಸಂದೇಶ ಎಂಬುದು ಗೊತ್ತಾಗಿದೆ. ಹೀಗಾಗಿ ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ಶಾಲಾ ಆಡಳಿತ ಮಂಡಳಿಗೆ ತಿಳಿಸಿದ್ದರಿಂದ ಎಲ್ಲರು ನಿರಾಳರಾದರು.
ಬೇಸಿಗೆ ರಜೆ, ವಿದ್ಯಾರ್ಥಿಗಳು ಇರಲಿಲ್ಲ
ಶಾಲೆಯಲ್ಲಿ ಬೇಸಿಗೆ ರಜೆ ನೀಡಿರುವುದರಿಂದ ಯಾವುದೇ ವಿದ್ಯಾರ್ಥಿಗಳು ಇರಲಿಲ್ಲ. ಕೇವಲ ಶಿಕ್ಷಕರು, ಸಿಬ್ಬಂದಿ ಮಾತ್ರ ಇದ್ದರು. ಆದರೆ, ಶಾಲೆಗೆ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ನಡೆಯುತ್ತಿತ್ತು. ಹೀಗಾಗಿ ಪೊಲೀಸರು ಶಾಲೆಯ ಎಲ್ಲೆಡೆ ಶೋಧಿಸಿದರು. ಈ ಸಂಬಂಧ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಹುಸಿ ಬಾಂಬ್ ಸಂದೇಶ ಬಂದಿದ್ದ ಇ-ಮೇಲ್ ಹೆಸರು ಮತ್ತು ಐಪಿ ವಿಳಾಸ ಪಡೆಯಲಾಗಿದೆ. ತನಿಖೆ ಚುರುಕುಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದರು.