ಪೃಥ್ವಿ ಅಂಬಾರ್, ಮಿಲನಾ ನಾಗರಾಜ ಜೋಡಿಯಾಗಿ ನಟಿಸುತ್ತಿರುವ “ಫಾರ್ ರಿಜಿಸ್ಟ್ರೇಷನ್’ ಚಿತ್ರದ ಮೊದಲ ಝಲಕ್ ಬಿಡುಗಡೆಯಾಗಿದೆ. ಇತ್ತೀಚೆಗೆ ಚಿತ್ರತಂಡ ತನ್ನ ಚಿತ್ರದ ಮೊದಲ ಟೀಸರ್ ಬಿಡುಗಡೆ ಮಾಡಿದ್ದು, ಜೊತೆಯಲ್ಲಿ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಚಿತ್ರ ಮುಂದಿನ ವರ್ಷ ಫೆಬ್ರವರಿ 10ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.
ರಂಗಭೂಮಿ ಹಿನ್ನೆಲೆ ಹಾಗೂ ಸಾಕಷ್ಟು ಕಿರುಚಿತ್ರಗಳನ್ನು ಮಾಡಿ ಅನುಭವ ಹೊಂದಿರುವ ನವೀನ್ ದ್ವಾರಕನಾಥ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, “ನಿಶ್ಚಲ್ ಫಿಲಂಸ್ ‘ ಬ್ಯಾನರ್‌ನಲ್ಲಿ ನವೀನ್ ರಾವ್ ಬಂಡವಾಳ ಹೂಡಿದ್ದಾರೆ.
ಚಿತ್ರ ನಿರ್ಮಾಪಕ ನವೀನ್ ರಾವ್ ಮಾತನಾಡಿ, “ಸಿನಿಮಾ ಆರಂಭ ಮಾಡಲು ಸ್ಫೂರ್ತಿ ನಿರ್ದೇಶಕರು. ಚಿತ್ರಕಥೆಯ ಒಂದು ಎಳೆಯನ್ನು ನಾನು ಹೇಳಿದೆ. ಅದಕ್ಕೆ ಬೇಕಾದನ್ನು ನಿರ್ದೇಶಕರು ಸೇರಿಸಿ, ಚಿತ್ರ ಇಲ್ಲಿಯವರೆಗೆ ತಂದಿದ್ದಾರೆ. ವೃತ್ತಿಯಿಂದ ಗುತ್ತಿಗೆದಾರನಾದ ನಾನು, ಇಂದು ಚಿತ್ರ ನಿರ್ಮಾಣದ ಕೆಲಸವನ್ನು ಇಷ್ಟಪಟ್ಟು ಮಾಡಿದ್ದೇನೆ’ ಎಂದರು.
ನಿರ್ದೇಶಕ ನವೀನ್ ದ್ವಾರಕನಾಥ್ ಮಾತನಾಡಿ, “ಚಿತ್ರ ಆರಂಭ ಮಾಡುವ ಮೊದಲು ಒಂದು ಕ್ರೈಂ ಕಂಟೆಂಟ್ ಮಾಡುವ ಆಲೋಚನೆ ಇತ್ತು. ಆದರೆ ಮೊದಲ ಬಾರಿಗೆ ಮಾಡುತ್ತಿರುವ ಚಿತ್ರವನ್ನು ಒಂದು ಫ್ಯಾಮಿಲಿ ಜೊತೆಗೆ ಕಾಮಿಡಿ ಹಿನ್ನೆಲೆಯಲ್ಲಿ ಮಾಡಬೇಕು ಎಂದು ನಿರ್ಧರಿಸಿ ಫಾರ್ ರಿಜಿಸ್ಟ್ರೇಷನ್ ಆರಂಭಿಸಿದೆವು. ಇದೊಂದು ಕಂಪ್ಲೀಟ್ ಫ್ಯಾಮಿಲಿ ಡ್ರಾಮಾ. ಜೊತೆಗೆ ರೊಮ್ಯಾಂಟಿಕ್- ಕಾಮಿಡಿ ಕೂಡಾ ಇದೆ. ವಾಹನಗಳಿಗೆ ರಿಜಿಸ್ಟ್ರೇಷನ್ ಇಲ್ಲವಾದರೆ ಅದಕ್ಕೆ ಮಾನ್ಯತೆ ಇರುವುದಿಲ್ಲವೋ ಅದೇ ರೀತಿ ಸಂಬಂಧಗಳಿಗೂ ಮುದ್ರೆ ಇಲ್ಲದಿದ್ದರೆ ಅರ್ಥವಿರುವುದಿಲ್ಲ. ಯಂಗ್ ಹಾಗೂ ಓಲ್ಡ್ ಜನರೇಷನ್ ನಡುವಿನ ಸಂಬಂಧಗಳಲ್ಲಿ ಯಾವ ರೀತಿ ಹೊಂದಾಣಿಕೆ ಇರಬೇಕು ಅನ್ನುವುದರ ಕುರಿತ ಚಿತ್ರ ಇದಾಗಿದೆ’ ಎಂದು ಮಾಹಿತಿ ಹಂಚಿಕೊಂಡರು.
“ಮಂಗಳೂರಿನಲ್ಲಿ ನಿರ್ದೇಶಕರು ಭೇಟಿಯಾಗಿ ಚಿತ್ರದ ಕುರಿತು ಹೇಳಿದ್ದರು. ನಂತರ ಆಫೀಸ್ ಗೆ ಹೋಗಿ ಕಥೆ ಕೇಳುವಾಗ ಚಿತ್ರದ ಬಗ್ಗೆ ನಿರ್ದೇಶಕರು, ನಿರ್ಮಾಪಕರಿಗೆ ಇರುವ ಆಸಕ್ತಿ ತಿಳಿದಿತ್ತು. ಯಾವುದೇ ಗಾಡಿ, ಜಾಗ ನಮ್ಮದಾಗಬೇಕು ಅಂದರೆ ರಿಜಿಸ್ಟರ್ ಆಗಬೇಕು. ಅದೇ ರೀತಿ ಚಿತ್ರದಲ್ಲಿ ಅಶು- ಅನ್ವಿ ಅಂದರೆ ನಾನು ಮತ್ತು ಮಿಲನಾ ಅವರ ನಡುವಿನ ರಿಲೇಷನ್‌ಶಿಪ್ ರಿಜಿಸ್ಟರ್ ಹೇಗೆ ಆಗುತ್ತೇ ಅನ್ನುವುದೇ ಕಥೆ’ ಎಂದು ಚಿತ್ರದ ಕುರಿತಾಗಿ ಮಾತನಾಡಿದರು ನಾಯಕ ಪೃಥ್ವಿ ಅಂಬಾರ್.
ನಾಯಕಿ ಮಿಲನಾ ನಾಗರಾಜ್ ಮಾತನಾಡಿ, “ಈ ಚಿತ್ರಕ್ಕೆ ಮೊದಲು ಕರೆ ಬಂದಿದ್ದು ನಿರಂಜನ್ ಅವರಿಂದ. ಕಾಲ್ ಮಾಡಿ ಫಾರ್ ರಿಜಿಸ್ಟ್ರೇಷನ್ ಅನ್ನುವ ಕಥೆ ಕೇಳ್ತಿರಾ ಎಂದು ಕೇಳಿದರು. ನಾನು ಚಿತ್ರದ ಟೈಟಲ್ ಕೇಳಿಯೇ ಖುಷಿಪಟ್ಟೆ. ಟೈಟಲ್ ತುಂಬಾ ಡಿಫರೆಂಟ್ ಆಗಿದ್ದು, ನನ್ನನ್ನ ಸೆಳೆದಿತ್ತು. ನಂತರ ಕಥೆ ಕೇಳಲು ಒಪ್ಪಿಕೊಂಡೆ. ನಿರ್ದೇಶಕರು, ನಿರ್ಮಾಪಕರು ಇಬ್ಬರೂ ಬಂದು ಕಥೆ ಹೇಳಿದ ರೀತಿ ತುಂಬಾ ಇಷ್ಟವಾಯಿತು. ಆದ್ದರಿಂದ ಚಿತ್ರಕ್ಕೆ ಓಕೆ ಎಂದೆ’ ಎಂದರು.
ಇನ್ನು ಚಿತ್ರದಲ್ಲಿ ರವಿಶಂಕರ್, ತಬಲಾ ನಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ಸ್ವಾತಿ, ರಮೇಶ್ ಭಟ್, ಉಮೇಶ್ ಎಂಬ ದೊಡ್ಡ ತಾರಾ ಬಳಗವೇ ಇದೆ. ಚಿತ್ರದ ಚಿತ್ರಕಥೆ, ನಿರ್ದೇಶನ ದ್ವಾರಕನಾಥ್, ಸಂಗೀತ ಸಂಯೋಜನೆ ಆರ್.ಕೆ ಹರೀಶ್, ಅಭಿಲಾಷ್ ಕಲಾತಿ, ಅಭಿಷೇಕ್ ಜಿ.ಕಾಸರಗೋಡು ಛಾಯಾಗ್ರಹಣ, ಮನು ಶೇಡ್ಗರ್ ಸಂಕಲನ ಚಿತ್ರಕ್ಕಿದೆ.