Advertisement

ಕೊನೆಗೂ ದಾವೆ ಹಿಂಪಡೆದ ತುರ್ವಿಹಾಳ: ನಿಟ್ಟುಸಿರು ಬಿಟ್ಟ ಪ್ರತಾಪ್‌ ಗೌಡ ಪಾಟೀಲ್‌

09:54 AM Dec 13, 2019 | sudhir |

ರಾಯಚೂರು: ಮಸ್ಕಿ ಶಾಸಕರಿಂದ ಅಡ್ಡ ಮತದಾನ ನಡೆದಿದೆ ಎಂದು ಆರೋಪಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಬಸನಗೌಡ ತುರ್ವಿಹಾಳ ಕೊನೆಗೂ ಹಿಂಪಡೆದಿದ್ದು, ಉಪ ಚುನಾವಣೆ ಹಾದಿ ಸುಗಮವಾಗಿದೆ. ಇದರಿಂದ ಇಷ್ಟು ದಿನ ಆತಂಕಗೊಂಡಿದ್ದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್‌ ನಿಟ್ಟುಸಿರು ಬಿಡುವಂತಾಗಿದೆ.

Advertisement

ಬಿಜೆಪಿ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ತುರ್ವಿಹಾಳ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೇವಲ 213 ಮತಗಳಿಂದ ಸೋಲುಂಡಿದ್ದರು. ಆದರೆ ವಿದೇಶದಲ್ಲಿರುವ ಶಾಸಕ ಪ್ರತಾಪ್‌ ಗೌಡ ಅವರ ಪುತ್ರಿಯ ಮತವೂ ಚಲಾವಣೆಯಾಗಿತ್ತು. ಇದೇ ರೀತಿ ಸಾಕಷ್ಟು ಅಡ್ಡ ಮತಗಳು ಚಲಾವಣೆಗೊಂಡಿದ್ದು, ನನ್ನ ಸೋಲಿಗೆ ಕಾರಣವಾಗಿದೆ. ಹೀಗಾಗಿ ತನಿಖೆ ನಡೆಸುವಂತೆ ತುರ್ವಿಹಾಳ ನ್ಯಾಯಾಲಯದ ಮೊರೆ ಹೋಗಿದ್ದರು.

ತುರ್ವಿಹಾಳ ಅವರನ್ನು ಕಣದಿಂದ ಹಿಂದೆ ಸರಿಸುವ ನಿಟ್ಟಿನಲ್ಲಿ ಬಿಜೆಪಿ ವರಿಷ್ಠರು ನಿರಂತರ ಪ್ರಯತ್ನದಲ್ಲಿದ್ದರು. ಅದರ ಭಾಗವಾಗಿಯೇ ಅವರಿಗೆ ಕಾಡಾ ಅಧ್ಯಕ್ಷ ಸ್ಥಾನ ಕೂಡ ನೀಡಲಾಗಿತ್ತು. ಆರಂಭದಲ್ಲಿ ಅದನ್ನು ಸ್ವೀಕರಿಸದೆ ಹಠ ಸಾಧಿಸಿದ್ದ ಅವರು ತಿಂಗಳ ಬಳಿಕ ಅಧಿಕಾರ ಸ್ವೀಕರಿಸಿದ್ದರು. ಮತ್ತೆ ಕೆಲವು ದಿನಗಳಲ್ಲಿಯೇ ಕಾರ್ಯಕರ್ತರ ನೆಪ ಹೇಳಿ ರಾಜೀನಾಮೆ ನೀಡಿದ್ದರು.

ತುರ್ವಿಹಾಳ ಅವರು ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪ ರ್ಧಿಸುವ ಸಾಧ್ಯತೆ ಇದೆ ಎಂಬ ಗುಮಾನಿ ಜೋರಾಗಿತ್ತು. ಹಾಗೇನಾದರು ಆಗಿದ್ದರೆ ಬಿಜೆಪಿಗೆ ಇಲ್ಲಿ ಗೆಲುವು ಸಾಧಿಸುವುದು ಸವಾಲಿನ ಕೆಲಸವಾಗಿತ್ತು. ಅಷ್ಟರಲ್ಲೇ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡ ಕಾರಣ ಬಿಜೆಪಿ ಸರಕಾರಕ್ಕೆ ಬೇಕಿರುವ ಅಗತ್ಯ ಬೆಂಬಲ ಸಿಕ್ಕಿದೆ. ಈಗ ಮೂರು ಪಕ್ಷಗಳ ಪಾಲಿಗೆ ಮಸ್ಕಿ ಅಷ್ಟೊಂದು ಮಹತ್ವದ ಕ್ಷೇತ್ರವಾಗಿ ಉಳಿದಿಲ್ಲ. ಇದರಿಂದ ಹೈಕಮಾಂಡ್‌ ಒತ್ತಡಕ್ಕೆ ಮಣಿದು ಅರ್ಜಿ ಹಿಂಪಡೆಯುವ ಮೂಲಕ ಪ್ರತಾಪ್‌ ಗೌಡ ಅವರ ದಾರಿ ಸುಗಮ ಮಾಡಿಕೊಡಲಾಗಿದೆ. ಅದರ ಜತೆಗೆ ಕಾಡಾ ಅಧ್ಯಕ್ಷ ಸ್ಥಾನವನ್ನು ಮತ್ತೆ ಸ್ವೀಕರಿಸುವಂತೆ ವರಿಷ್ಠರು ಸೂಚಿಸಿದ್ದು ಶೀಘ್ರದಲ್ಲಿಯೇ ಅವರು ಅಧಿಕಾರ ಸ್ವೀಕರಿಸುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next