ಹುಮನಾಬಾದ: ಸರ್ಕಾರಿ ಶಾಲೆಗಳಲ್ಲಿ ಪ್ರತೀ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವುದರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಮೇರೆಗೆ ಈ ಶಾಲೆ ಆರಂಭಿಸಲಾಗಿದೆ ಎಂದು ಸಚಿವ ಬಂಡೆಪ್ಪ ಖಾಶೆಂಪೂರ ಹೆಳಿದರು.
ಚಿಟಗುಪ್ಪ ತಾಲೂಕು ಬೆಮಳಖೇಡಾ ಗ್ರಾಮದಲ್ಲಿ ಸೋಮವಾರ ಕರ್ನಾಟಕ ಪಬ್ಲಿಕ್ ಶಾಲೆ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ ಮತ್ತು ಎಸ್‌ಎಸ್‌ಎಲಸಿ, ಪಿಯುಸಿ ಫಲಿತಾಂಶ ಕುಸಿತವಾದ ಹಿನ್ನೆಲೆಯಲ್ಲಿ ಕರ್ನಾಟಕ ಜ್ಞಾನ ಆಯೋಗ ವರದಿ ಆಧರಿಸಿ, 1ರಿಂದ 12ನೇ ತರಗತಿ ವರೆಗೆ ಒಂದೇ ಸೂರಿನಡಿ ಶಿಕ್ಷಣ ನೀಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಮುಂದಾಗಿದೆ. ಪ್ರತೀ ತಾಲೂಕಿಗೆ ಒಂದರಂತೆ ರಾಜ್ಯದ ಒಟ್ಟು 176 ತಾಲೂಕುಗಳಲ್ಲಿ ಈ ಶಾಲೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಸರ್ಕಾರ ಹೊರಡಿಸಿರುವ ಆದೇಶದ ಮೇರೆಗೆ ಈ ಶಾಲೆ ಉದ್ಘಾಟಿಸಲಾಗಿದೆ ಎಂದು ಹೇಳಿದರು.
ಈ ಶಾಲೆಗಳ ಯಶಸ್ಸು ಆಧರಿಸಿ, ಮುಂದಿನ ದಿನಗಳಲ್ಲಿ ಹೋಬಳಿ ವ್ಯಾಪ್ತಿಯಲ್ಲೂ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ವರ್ಗ ಆಧರಿಸಿ, ಗುಣಮಟ್ಟದ ಕೊಠಡಿ, ಸುಸಜ್ಜಿತ ಪ್ರಯೋಗಾಲಯ, ಪ್ರತ್ಯೇಕ ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಶುದ್ಧ ಕುಡಿಯುವ ನೀರು, ಆಟದ ಮೈದಾನ, ಬಾಲಕರು ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ ಶೌಚಾಲಯ ಸೇರಿದಂತೆ ಮಹತ್ವದ ಸೌಲಭ್ಯವನ್ನು ಈ ಶಾಲೆಗಳು ಹೊಂದಿರುತ್ತವೆ ಎಂದು ಹೇಳಿದರು.
ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ನಿಯೋಜನೆ, ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಶಾಲಾ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ವಿಧಾನ ಕುರಿತು ಮಾರ್ಗದರ್ಶನ ನೀಡಲಾಗುವುದು. ಒಟ್ಟಾರೆ ಪ್ರೌಢ ಹಾಗೂ ಪದವಿಪೂರ್ವ ಹಂತದಿಂದಲೇ ತಂತ್ರಜ್ಞಾನ ಆಧಾರಿತ ನೆರವಿನ ಕಲಿಕೆಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಈ ಶಾಲೆಗಳ ಕಟ್ಟಡ ನಿರ್ಮಾಣಕ್ಕಾಗಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ರೂ.10ಲಕ್ಷ ಮತ್ತು ಮೂಲಸೌಲಭ್ಯಕ್ಕಾಗಿ ರೂ.5ಲಕ್ಷ ಸೇರಿ ಒಟ್ಟು ರೂ.15 ಲಕ್ಷ ಅನುದಾನ ನೀಡಲಾಗುತ್ತಿದೆ ಎಂದು ವಿವರಿಸಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ, ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಸುಗಂಧಾ ಅಣ್ಯಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಳಸಿಬಾಯಿ ಭೂರೆ, ಉಪಾಧ್ಯಕ್ಷೆ ಮಾಣಿಕಬಾಯಿ, ಪಬ್ಲಿಕ್ ಶಾಲೆಯ ಪ್ರಾಚಾರ್ಯ ವಿಜಯಲಕ್ಷ್ಮೀ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಓಂಕಾರ ರೂಗನ್, ಪಿಆರ್‌ಇ ಎಇಇ ವಾಮನರಾವ್ ಇನ್ನಿತರರು ವೇದಿಕೆಯಲ್ಲಿದ್ದರು. ಗ್ರಾಮದ ಗಣ್ಯರು, ಶಿಕ್ಷಣ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಬಿಇಒ ಶಿವರಾಚಪ್ಪ ವಾಲಿ ಸ್ವಾಗತಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಶೇಖರ ಪ್ರಾಸ್ತಾವಿಕ ಮಾತನಾಡಿದರು. ಸದಾಶಿವಯ್ಯ ಹಿರೇಮಠ ನಿರೂಪಿಸಿದರು. ಶಾಂತಕುಮಾರ ಭಾಲ್ಕೆ ವಂದಿಸಿದರು.