Advertisement

ಮಾಸಾಂತ್ಯದಲ್ಲಿ ರಾಜ್ಯಕ್ಕೆ ವಿದೇಶಿ ಕಲ್ಲಿದ್ದಲು ಪೂರೈಕೆ

06:10 AM Jan 15, 2018 | Team Udayavani |

ಬೆಂಗಳೂರು: ಉಷ್ಣ ಸ್ಥಾವರಗಳಿಗೆ ಕಲ್ಲಿದ್ದಲು ಕೊರತೆ ವಿಚಾರದಲ್ಲಿ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿದಿದ್ದ
ರಾಜ್ಯ ಸರ್ಕಾರ ಕೊನೆಗೂ ವಿದೇಶದಿಂದ ಕಲ್ಲಿದ್ದಲು ಆಮದು ಮಾಡಿಕೊಂಡು ಪರಿಸ್ಥಿತಿ ನಿಭಾಯಿಸಲು ಸಿದಟಛಿತೆ ಮಾಡಿಕೊಂಡಿದ್ದು ಈ ಮಾಸಾಂತ್ಯಕ್ಕೆ ಕಲ್ಲಿದ್ದಲು ಪೂರೈಕೆಯಾಗುವ ಸಾಧ್ಯತೆಯಿದೆ.

Advertisement

10 ಲಕ್ಷ ಟನ್‌ ಕಲ್ಲಿದ್ದಲು ರಾಜ್ಯಕ್ಕೆ ಬರಲಿದ್ದು ಮುಂದಿನ ಒಂದು ವರ್ಷ ತುರ್ತು ನಿರ್ವಹಣೆಗೆ ಸಹಕಾರಿಯಾಗಲಿದೆ.
ಇದಕ್ಕೆ ಕರ್ನಾಟಕ ವಿದ್ಯುತ್‌ ನಿಗಮ(ಕೆಪಿಸಿಎಲ್‌) ಟೆಂಡರ್‌ ಪ್ರಕ್ರಿಯೆಯೂ ನಡೆದಿದೆ.

ಕೇಂದ್ರ ಸರ್ಕಾರಿ ಸ್ವಾಮ್ಯದ ಮೆಟಲ್‌ ಆ್ಯಂಡ್‌ ಸಾಪ್‌ ಕಂಪನಿಯೂ (ಎಂಎಸ್‌ಟಿಸಿ) ಬಿಡ್‌ ಮಾಡಿದ್ದು, ಈ ಸಂಸ್ಥೆಗೆ ಟೆಂಡರ್‌ ಮಂಜೂರಾಗುವ ಸಾಧ್ಯತೆಯಿದೆ. ಎಲ್ಲ ಪ್ರಕ್ರಿಯೆ ನಿಗದಿಯಂತೆ ನಡೆದರೆ ಮಾಸಾಂತ್ಯದಿಂದ ವಿದೇಶಿ ಕಲ್ಲಿದ್ದಲು ಪೂರೈಕೆ ಆರಂಭವಾಗುವ ಸಾಧ್ಯತೆ ಇದೆ. ಆಂಧ್ರ ಪ್ರದೇಶದ ಕೃಷ್ಣಪಟ್ಟಣಂಗೆ ಪೂರೈಕೆಯಾಗುವ ಕಲ್ಲಿದ್ದಲು ನಂತರ ರೈಲಿನಲ್ಲಿ ರಾಜ್ಯದ ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಸಾಗಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಅರ್ಧ ದಿನಕ್ಕಾಗುವಷ್ಟು ದಾಸ್ತಾನು: ದಿನ ಕಳೆದಂತೆ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ಪ್ರಮಾಣವೂ ಕ್ಷೀಣಿಸುತ್ತಿದೆ. ರಾಯಚೂರಿನ ಆರ್‌ಟಿಪಿಎಸ್‌ನ ಎಲ್ಲ ಘಟಕ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು 28,000 ಟನ್‌ ಕಲ್ಲಿದ್ದಲು ಅಗತ್ಯವಿದ್ದು, ಸದ್ಯ 18,000 ಟನ್‌ ದಾಸ್ತಾನು ಇದೆ. ಅಂದರೆ ಅರ್ಧ ದಿನ ಬಳಸಬಹುದಾಷ್ಟು ದಾಸ್ತಾನು ಮಾತ್ರ ಇದ್ದು, ಗಂಭೀರ ಸ್ಥಿತಿಗೆ ತಲುಪಿದೆ. ನಿರ್ವಹಣೆಗೆಂದು ಮೂರು ಘಟಕಗಳು ಸ್ಥಗಿತವಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಹೇಳಿದಷ್ಟು ಕಲ್ಲಿದ್ದಲು ಪೂರೈಕೆ ಇಲ್ಲ: ಆರ್‌ಟಿಪಿಎಸ್‌ ಹಾಗೂ ಬಿಟಿಪಿಎಸ್‌ಗೆ ನಿತ್ಯ 9 ರೈಲ್ವೆ ಲೋಡ್‌ನ‌ಷ್ಟು ಕಲ್ಲಿದ್ದಲು ಅಗತ್ಯವಿದೆ. ಆದರೆ ಎಸ್‌ಸಿಸಿಎಲ್‌ ಸಂಸ್ಥೆ ನವೆಂಬರ್‌ವರೆಗೆ ನಾಲ್ಕು ರೈಲ್ವೆ ಲೋಡ್‌ ಕಲ್ಲಿದ್ದಲು ಮಾತ್ರ ಪೂರೈಸುತ್ತಿತ್ತು. ಕೆಪಿಸಿಎಲ್‌ ಮನವಿ ಮೇರೆಗೆ ನವೆಂಬರ್‌ನಿಂದ 5 ರೈಲ್ವೆ ಲೋಡ್‌ ಪೂರೈಸುವುದಾಗಿ ಭರವಸೆ ನೀಡಿದರೂ 
ವಾಗ್ಧಾನವೂ ಈಡೇರದೆ, 4.7 ರೈಲ್ವೆ ಲೋಡ್‌ನ‌ಷ್ಟು ಮಾತ್ರ ಪೂರೈಕೆಯಾಗಿತ್ತು. ಜನವರಿಯಿಂದ ಏಳು ರೈಲ್ವೆ ಲೋಡ್‌ ಪೂರೈಸುವುದಾಗಿ ಈ ಹಿಂದೆ ಸಂಸ್ಥೆ ಭರವಸೆ ನೀಡಿದ್ದರೂ ಸದ್ಯ 4.8 ರೈಲ್ವೆ ಲೋಡ್‌ ಕಲ್ಲಿದ್ದಲಷ್ಟೇ ಪೂರೈಕೆಯಾಗುತ್ತಿದೆ. ಅಂದರೆ ಭರವಸೆ ನೀಡಿದ್ದ ಪ್ರಮಾಣಕ್ಕಿಂತ ಎರಡು ರೈಲ್ವೆ ಲೋಡ್‌ನಷ್ಟು ಕಲ್ಲಿದ್ದಲು ಪೂರೈಕೆ ಕಡಿಮೆ ಇದೆ.

Advertisement

ವೈಟಿಪಿಎಸ್‌ನಲ್ಲಿ ವಿದೇಶಿ ಕಲ್ಲಿದ್ದಲು ಬಳಕೆ: ಆರ್‌ ಟಿಪಿಎಸ್‌ ಸ್ಥಾವರ ಹಳೆಯದಾಗಿರುವ ಕಾರಣ ಅಲ್ಲಿ ಶೇ.20ರಷ್ಟು ವಿದೇಶಿ ಕಲ್ಲಿದ್ದಲು ಬಳಕೆಗಷ್ಟೇ ಅವಕಾಶವಿದ್ದು, ಉಳಿದ ಶೇ.80 ದೇಶೀಯ ಕಲ್ಲಿದ್ದಲು ಅಗತ್ಯವಿದೆ. ಬಿಟಿಪಿಎಸ್‌ನ ಮೂರನೇ ಘಟಕ ಹಾಗೂ ವೈಟಿಪಿಎಸ್‌ನ ಎರಡು ಘಟಕಗಳಲ್ಲಿ ಆಧುನಿಕ ವ್ಯವಸ್ಥೆಯಿದ್ದು, ಶೇ.50ರಷ್ಟು, ತುರ್ತು ಸಂದರ್ಭದಲ್ಲಿ ಶೇ.70ರಷ್ಟರವರೆಗೆ ವಿದೇಶಿ ಕಲ್ಲಿದ್ದಲು ಬಳಸಲು ಅವಕಾಶವಿದೆ. ಹಾಗಾಗಿ ವಿದೇಶಿ ಕಲ್ಲಿದ್ದಲನ್ನು ವೈಟಿಪಿಎಸ್‌ ಘಟಕದಲ್ಲಿ ಪ್ರಧಾನವಾಗಿ ಬಳಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ವಿದೇಶಿ ಕಲ್ಲಿದ್ದಲು ಪೂರೈಕೆ ಸಂಬಂಧ ಟೆಂಡರ್‌ನಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಎಂಎಸ್‌ಟಿಸಿ ಸಂಸ್ಥೆ ಪಾಲ್ಗೊಂಡಿದ್ದು, ಅಂತಿಮವಾಗಿ ಟೆಂಡರ್‌ ಮಂಜೂರು ಸಂಬಂಧ ಕೆಪಿಸಿಎಲ್‌ ಮಂಡಳಿ ಸಭೆಯಲ್ಲಿ ಇನ್ನಷ್ಟೇ ನಿರ್ಧಾರ  ಕೈಗೊಳ್ಳಬೇಕಿದ್ದು, ಮಾಸಾಂತ್ಯಕ್ಕೆ ಪೂರೈಕೆ ಆರಂಭವಾಗಲಿದೆ. 10 ಲಕ್ಷ ಟನ್‌ ವಿದೇಶಿ ಕಲ್ಲಿದ್ದಲು ಪೂರೈಕೆಯನ್ನು ಪೂರ್ಣವಾಗಿ ಒಂದೇ ಸಂಸ್ಥೆಗೆ ವಹಿಸಬೇಕೆ ಅಥವಾ ವಿಭಜಿಸಿ ಹಂಚಿಕೆ ಮಾಡಬೇಕೆ ಎಂಬ ಬಗ್ಗೆಯೂ ಚರ್ಚಿಸಿ ನಿರ್ಧರಿಸಲಾಗುವುದು.
– ಡಿ.ಕೆ.ಶಿವಕುಮಾರ್‌, ಇಂಧನ ಸಚಿವ

– ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next