ಯಲಬುರ್ಗಾ: ಗುತ್ತಿಗೆ ಕೆಲಸಕ್ಕೆ ಪ್ರತ್ಯೇಕವಾಗಿ ಟೆಂಡರ್ ಕರೆಯುವುದು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬುಧವಾರ ಪಟ್ಟಣದ ತಾಪಂ ಕಚೇರಿ ಎದುರು ಎಸ್‌ಸಿ, ಎಸ್‌ಟಿ ತಾಲೂಕು ಗುತ್ತಿಗೆದಾರರು ಉಪವಾಸ ಸತ್ಯಾಗ್ರಹ ನಡೆಸಿದರು.
ಎಸ್‌ಸಿ, ಎಸ್‌ಟಿ ಗುತ್ತಿಗೆದಾರರ ಸಂಘದ ತಾಲೂಕಾಧ್ಯಕ್ಷ ಮುತ್ತಣ್ಣ ಬಾರಿನಾರ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ಸಣ್ಣ ಗುತ್ತಿಗೆ ಕೆಲಸಗಳನ್ನು ಸೇರಿಸಿಕೊಂಡು ಪ್ಯಾಕೆಜ್ ಮಾಡಿ ಟೆಂಡರ್ ಕರೆಯುತ್ತಿದ್ದಾರೆ. ಇದರಿಂದಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ ಯಾವುದೇ ಕೆಲಸಗಳು ಸಿಗುತ್ತಿಲ್ಲ. ರಾಜ್ಯ ಸರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗುತ್ತಿಗೆ ಕೆಲಸದಲ್ಲಿ ಮೀಸಲಾತಿ ನೀಡಿದೆ. ಆದರೆ, ಎಸ್ಸಿ ಮತ್ತು ಎಸ್ಟಿ ಗುತ್ತಿಗೆದಾರರಿಗೆ ಸಣ್ಣ ಕೆಲಸಗಳೂ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ಯಾಕೆಜ್ ಟೆಂಡರ್ ಕರೆಯುವುದನ್ನು ಕೈ ಬಿಡಬೇಕು. ಸಣ್ಣ ಗುತ್ತಿಗೆ ಕೆಲಸಗಳಿಗೂ ಟೆಂಡರ್ ಕರೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು. ಎಸ್ಟಿ, ಎಸ್ಟಿ ಗುತ್ತಿಗೆದಾರರಿಗೆ ಶೇ. 25ರಷ್ಟು ಕಾಮಗಾರಿಗಳನ್ನು ಮೀಸಲಿಡಲು ಆದೇಶವಿದ್ದರೂ ತಾಪಂ ಅಧಿಕಾರಿಗಳು ನೀಡುತ್ತಿಲ್ಲ. ಕೇವಲ ಚುನಾಯಿತ ಪ್ರತಿನಿಧಿ ಗಳು ಹಾಗೂ ಅವರ ಬೆಂಬಲಿಗರಿಗೆ ಕಾಮಗಾರಿಗಳು ಸಿಮೀತವಾಗಿವೆ ಕೂಡಲೇ ಅವುಗಳನ್ನು ತಡೆಗಟ್ಟುವ ಮೂಲಕ ಗುತ್ತಿಗೆದಾರರಿಗೆ ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕು ಪಂಚಾಯಿತಿ ಪ್ರತಿಯೊಂದು ಕಾಮಗಾರಿಗಳನ್ನು ಟೆಂಡರ್ ಕರೆದು ಹಂಚಿಕೆ ಮಾಡಬೇಕು. ಪ್ರತಿವರ್ಷ ಬರುವ ತಾಪಂ ಅನುದಾನದಲ್ಲಿ ಶೇ. 25ರಷ್ಟು ಕಾಮಗಾರಿಗಳನ್ನು ನಮಗೆ ನೀಡಬೇಕು ಹಾಗೂ ತಾಪಂ ಇಒ ಅವರು ಸ್ಥಳಕ್ಕೆ ಆಗಮಿಸಿ ನಮ್ಮ ಬೇಡಿಕೆಗಳನ್ನು ಈಡೇರಿಕೆಯ ಭರವಸೆ ನೀಡುವವರೆಗೊ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಹೇಳಿದರು.
ಹನುಮಂತಪ್ಪ ಮುತ್ತಾಳ, ಲಕ್ಷ್ಮಣ್ಣ ಕಾಳಿ, ರಾಮಣ್ಣ ಮನ್ನಾಪೂರ, ದೇವೇಂದ್ರಪ್ಪ ಭಾವಿ, ಅಬ್ಬಿಗೇರಿ, ಹನುಮಂತಪ್ಪ ಹಿರೇಬಿಡನಾಳ, ಯಮನೂರಪ್ಪ ಅರಬರ, ಮುತ್ತಣ್ಣ ಭೋವಿ, ಮಲ್ಲಿಕಾರ್ಜುನ, ಗಾಳೆಪ್ಪ ವೀರಾಪೂರ, ಪಕ್ಕಣ್ಣ ಕೋಮಲಾಪೂರ, ಭೀಮಪ್ಪ ಹವಳಿ ಇತರರು ಇದ್ದರು.