ಸಿಂಧನೂರು: ಕೇಂದ್ರ ಸರಕಾರ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳನ್ನು ತೆರೆದಿದೆ. ವಿಧಿಸಿರುವ ಷರತ್ತಿನಿಂದ ನೋಂದಣಿ ಮಾಡಿಸಲಿಕ್ಕೂ ರೈತರು ಹಿಂದೇಟು ಹಾಕಿದ್ದು, ಕೂಡಲೇ ರಾಜ್ಯ ಸರಕಾರ ಪ್ರತಿ ರೈತನಿಂದ 20 ಕ್ವಿಂಟಲ್ ಜೋಳ ಖರೀದಿ ಎಂಬ ನಿಯಮ ತೆಗೆದು ಹಾಕಬೇಕು ಎಂದು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಪನಗೌಡ ಬಾದರ್ಲಿ ಆಗ್ರಹಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಪ್ರತಿ ಎಕರೆಗೆ 15 ಕ್ವಿಂಟಲ್‌ನಂತೆ ಎಷ್ಟು ಎಕರೆಗೆ ಬೇಕಾದರೂ ಮಾರಾಟ ಮಾಡಬಹುದು ಎಂಬ ಅವಕಾಶ ನೀಡಿದ್ದರು. ಇದರ ಫಲವಾಗಿ 80 ಸಾವಿರ ಟನ್ ಜೋಳ, 2 ಲಕ್ಷ ಟನ್ ಭತ್ತ, 4.74 ಲಕ್ಷ ಟನ್‌ರಾಗಿ ಖರೀದಿ ಕೇಂದ್ರಕ್ಕೆ ಮಾರಾಟವಾಗಿತ್ತು. ಈ ವರ್ಷ ಒಬ್ಬ ರೈತ ಎಕರೆಗೆ 10 ಕ್ವಿಂಟಲ್‌ನಂತೆ 20 ಕ್ವಿಂಟಲ್ ಜೋಳವನ್ನು ಮಾತ್ರ ಖರೀದಿ ಕೇಂದ್ರಕ್ಕೆ ಕೊಡಬೇಕು. ಭತ್ತದ ಬೆಳೆದ ರೈತ 40 ಕ್ವಿಂಟಲ್ ಮಾತ್ರ ಮಾರಾಟ ಮಾಡಬೇಕು ಎಂಬ ನಿರ್ಬಂಧ ಹಾಕಿರುವುದರಿಂದ ರೈತರು ಕಂಗೆಟ್ಟಿದ್ದಾರೆ. ಈವರೆಗೂ ಜೋಳ ಬೆಳೆದ ರೈತರ ಪೈಕಿ 7 ಜನ ಮಾತ್ರ ಹೆಸರು ನೋಂದಾಯಿಸಿದ್ದಾರೆ. ಅವೈಜ್ಞಾನಿಕ ನಿಯಮ ತೆಗೆದು ಹಾಕಬೇಕೆಂಬ ಬೇಡಿಕೆ ಇಟ್ಟುಕೊಂಡು ಕಾಂಗ್ರೆಸ್ ಹೋರಾಟಕ್ಕೆ ನಿರ್ಧರಿಸಿದೆ ಎಂದರು.
ತಾಲೂಕಿನಲ್ಲಿ 35ರಿಂದ 40 ಸಾವಿರ ಎಕರೆಯಲ್ಲಿ ಜೋಳ ಬೆಳೆಯಲಾಗಿದೆ. ವಳಬಳ್ಳಾರಿ, ರಾಗಲಪರ್ವಿ ಸೇರಿದಂತೆ ಅನೇಕ ಕಡೆಯ ರೈತರು ಪ್ರತಿಭಟನೆಗೆ ಆಗಮಿಸಲಿದ್ದಾರೆ. ಜ.4ರಂದು ಸಿಂಧನೂರು ತಹಶೀಲ್ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ಹೋರಾಟ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳಬೇಕು. ಕಳೆದ 15 ದಿನಗಳಿಂದ ಜೋಳ, ಭತ್ತ ಕೊಯ್ಲು ಮಾಡಿದ ರೈತರು ಮಾರಾಟ ಮಾಡಲು ಹಿಂದೇಟು ಹಾಕಿ, ಸಂಕಷ್ಟದಲ್ಲಿದ್ದಾರೆ. ಜೋಳದ ಬೆಲೆ ಕ್ವಿಂಟಲ್ ಗೆ ಮುಕ್ತ ಮಾರುಕಟ್ಟೆಯಲ್ಲಿ 1 ಸಾವಿರ ರೂ. ಕಡಿಮೆ ಇದೆ. ಬೆಂಬಲ ಬೆಲೆ ಪ್ರತಿ ಕ್ವಿಂಟಲ್‌ಗೆ 2,738 ರೂ. ದರವಿದೆ. ಇದರ ಪ್ರಯೋಜನ ರೈತರಿಗೆ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಲು ಪ್ರತಿಭಟನೆ ನಡೆಸಲಾಗುವುದು ಎಂದರು.
ಜಿಪಂ ಮಾಜಿ ಸದಸ್ಯರಾದ ಬಾಬುಗೌಡ ಬಾದರ್ಲಿ, ಬಸವರಾಜ ಹಿರೇಗೌಡರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿಮಲಿಕ್, ಪ್ರಧಾನ ಕಾರ್ಯದರ್ಶಿ ವೈ. ಅನಿಲ್ ಕುಮಾರ್ ಸೇರಿದಂತೆ ಅನೇಕರು ಇದ್ದರು.
ರೈತರು ಸಂಪೂರ್ಣ ಸಂಕಷ್ಟದಲ್ಲಿದ್ದಾರೆ. ಬೆಂಬಲ ಬೆಲೆ ಕಾಗದದಲ್ಲಿದೆ. ಅದು ರೈತರಿಗೆ ತಲುಪಬೇಕು. ಖರೀದಿ ಗರಿಷ್ಠ ಮಿತಿ ನಿರ್ಬಂಧ ತೆಗೆಯುವಂತೆ ಕಾಂಗ್ರೆಸ್‌ನಿಂದ ಹಿರಿಯ ಮುಖಂಡರು, ಕಾರ್ಯಕರ್ತರೆಲ್ಲ ಸೇರಿ ಹೋರಾಟಕ್ಕೆ ಮುಂದಾಗಿದ್ದು, ಮಿತಿ ತೆಗೆಯುವ ತನಕವೂ ನಾವು ಸುಮ್ಮನಿರುವುದಿಲ್ಲ. ನಮ್ಮ ರೈತರು ಉಳಿಯಬೇಕು ಎಂಬುದೇ ನಮ್ಮ ಉದ್ದೇಶ. ರೈತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟಕ್ಕೆ ಆಗಮಿಸಬೇಕು.
-ಬಾಬುಗೌಡ ಬಾದರ್ಲಿ, ಜಿಪಂ ಮಾಜಿ ಸದಸ್ಯ