ಮಂಡ್ಯ: ತಾಲೂಕಿನ ಕೆರೆಗೋಡು ಹೋಬಳಿ ಆಲಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಹೊನಗಳ್ಳಿಮಠ ಇನಾಂ ಗ್ರಾಮವಾಗಿದ್ದು, ಇದುವರೆಗೂ ಗಣಕೀಕೃತ ಆರ್‌ಟಿಸಿ ಆಗದೇ ಇರುವುದರಿಂದ ರೈತರು ಆರ್‌ಟಿಸಿ ಪಡೆಯಲು ತಮ್ಮಲ್ಲಿರುವ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮಂಜುಶ್ರೀ ಮನವಿ ಮಾಡಿದರು.
ತಾಲೂಕಿನ ಹೊನಗಳ್ಳಿಮಠ ಗ್ರಾಮದಲ್ಲಿ ನಡೆದ ಪಹಣಿ ಗಣಕೀಕೃತ ಆರ್‌ಟಿಸಿ ತಿದ್ದುಪಡಿ ಆಂದೋಲನ ಕಂದಾಯ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೊನಗಳ್ಳಿಮಠ ಗ್ರಾಮದ ಕೆಲವು ಕೈ ಬರಹ ಪಹಣಿಯನ್ನು ಆಕಾರ್ ಬಂದ್‌ನಂತೆ ಗಣಕೀಕೃತ ಆರ್‌ಟಿಸಿಗೆ ತಾಳೆ ಮಾಡಲಾಗಿದ್ದು, ಇನ್ನು ಕೆಲವು ಬಾಕಿ ಇರುವ ಪಹಣಿಗಳನ್ನು ತಾಳೆ ಮಾಡಬೇಕಾಗಿದೆ. ಈ ಪಹಣಿಗಳನ್ನು ತಾಳೆ ಮಾಡಲು ದಾಖಲೆಗಳು ಅವಶ್ಯವಾಗಿರುತ್ತದೆ ಎಂದು ತಿಳಿಸಿದರು.
ದಾಖಲೆ ನೀಡಿ ಸಹಕರಿಸಿ: ಹಿಂದುಳಿದ ಜಿಲ್ಲೆ ರಾಯಚೂರಿನ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿ ಯಾವ ಗ್ರಾಮಕ್ಕೂ ಆರ್‌ಟಿಸಿ ಇಲ್ಲದೆ ಇರಲಿಲ್ಲ. ಆದರೆ, ಇಲ್ಲಿ ಹೊನಗಹಳ್ಳಿಮಠ ಗ್ರಾಮಕ್ಕೆ ಆರ್‌ಟಿಸಿ ಇಲ್ಲ. ಕೂಡಲೇ ಆರ್‌ಟಿಸಿ ನೀಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದ್ದರಿಂದ ರೈತರು ಸಹ ತಮ್ಮಲ್ಲಿರುವ ದಾಖಲಾತಿಗಳನ್ನು ಅಧಿಕಾರಿಗಳಿಗೆ ನೀಡಿ ಸಹಕಾರ ನೀಡಬೇಕು ಎಂದು ಹೇಳಿದರು.
ಈ ಗ್ರಾಮದ ವ್ಯಾಪ್ತಿಗೆ ಬರುವ ಗ್ರಾಮ ಲೆಕ್ಕಾಧಿಕಾರಿಗಳು 10 ದಿನ ಬೆಳಿಗ್ಗೆ 9 ರಿಂದ 11 ಗಂಟೆವರೆಗೂ ಗ್ರಾಮದಲ್ಲಿದ್ದು, ರೈತರಿಂದ ಎಲ್ಲ ರೀತಿಯ ದಾಖಲೆಗಳನ್ನು ಪಡೆದುಕೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿ ಗಳು, ಏನಾದರೂ ವ್ಯತ್ಯಾಸವಾಗಿದ್ದಲ್ಲಿ ರೈತರು ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಸರಿಪಡಿಸಿಕೊಳ್ಳಿ ಎಂದು ಹೇಳಿದರು.
ಆರ್‌ಟಿಸಿಗೆ ವಂಶವೃಕ್ಷ ಕಡ್ಡಾಯ: ಆರ್‌ಟಿಸಿ ಪಡೆಯಲು ವಂಶವೃಕ್ಷ ಕಡ್ಡಾಯವಾಗಿರುತ್ತದೆ. ಆದ್ದರಿಂದ ರೋಟರಿ ಮೂಲಕ ತಮ್ಮ ವಂಶವೃಕ್ಷವನ್ನು ದೃಢೀಕರಿಸಿಕೊಂಡು ನಂತರ ನಾಡಕಚೇರಿ ಅಧಿಕಾರಿಗಳಿಗೆ ಕೊಟ್ಟರೆ ಅವರು ವಾರದೊಳಗೆ ನಿಮಗೆ ವಂಶವೃಕ್ಷ ನೀಡುತ್ತಾರೆ ಎಂದು ತಿಳಿಸಿದರು.
ಆರ್‌ಟಿಸಿಯಲ್ಲಿ ಯಾವುದೇ ರೀತಿಯ ತಂಟೆ ತಕರಾರು ಬಂದರೆ ಅವುಗಳನ್ನು ಸರಿಪಡಿಸಲು ಹಾಗೂ ಅವರೊಂದಿಗೆ ಚರ್ಚೆ ನಡೆಸಲು ಪ್ರತಿ ಮಂಗಳವಾರ ವಿಶೇಷ ದಿನ ಎಂದು ನಡೆಸಲು ತೀರ್ಮಾನಿಸಲಾಗಿದೆ. ಅಂದು ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಂಡ್ಯ ಉಪ ವಿಭಾಗಧಿಕಾರಿಗಳಾದ ಹೋಟೆಲ್ ಶಿವಪ್ಪ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ನಿರಂಜನ್, ಮಂಡ್ಯ ತಹಶೀಲ್ದಾರ್ ಎಲ್. ನಾಗೇಶ್ ಮತ್ತಿತರರು ಉಪಸ್ಥಿತರಿದರು.