ಸಂಡೂರು: ಅತಿಥಿ ಶಿಕ್ಷಕರಿಗೆ ತಕ್ಷಣ ವಿಶೇಷ ಪ್ಯಾಕೇಜ್ ನೀಡುವ ಮೂಲಕ ರಕ್ಷಿಸಿ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ಮಹ್ಮದ್ ಖಾಸೀಂ ಮನವಿ ಮಾಡಿದರು. ಅವರು ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ತಾಲೂಕಿನಾದ್ಯಂತ 200ಕ್ಕೂ ಹೆಚ್ಚು ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು ರಾಜ್ಯಾದ್ಯಂತ 20 ಸಾವಿರ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು ಯಾರಿಗೂ ಸಹ ಮಾರ್ಚ್ ತಿಂಗಳಿಂದ ವೇತನವೇ ಇಲ್ಲವಾಗಿದೆ.
ಖಾಸಗಿ ಶಾಲಾ ಶಿಕ್ಷಕರಿಗೆ ವೇತನ ಕೊಡಲು ಒತ್ತಾಯವಿದೆ. ಗಾರೆ ಕೆಲಸದವರಿಗೆ, ಕೂಲಿಕಾರರಿಗೆ, ಎಲ್ಲರಿಗೂ ಒಂದಲ್ಲ ಒಂದು ರೀತಿಯ ಪ್ಯಾಕೇಜ್ ನೀಡಿ ರಕ್ಷಿಸಿದ ಸರ್ಕಾರ ಅತಿಥಿ ಶಿಕ್ಷಕರಿಗೆ ಮಾತ್ರ ನೀಡದೆ ಅವರ ತಿಥಿಯನ್ನು ಮಾಡುತ್ತಿದ್ದು ಇದರಿಂದ ಕುಟುಂಬಗಳು ಬೀದಿಪಾಲಾಗುತ್ತಿವೆ. ಆದ್ದರಿಂದ ಸರ್ಕಾರ ತಕ್ಷಣ ಮಾರ್ಚ್ ತಿಂಗಳಿಂದ ವೇತನ ನೀಡಬೇಕು, ಅಲ್ಲದೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಆರ್. ಜಗದೀಶ್ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಿರುವ ಶಾಸಕರು ಇಲ್ಲಿಯವರಿಗಾದರೂ ವಿಶೇಷವಾಗಿ ಗಣಿ ನಿಧಿಯಿಂದಲಾದರೂ ವೇತನವಾಗಲಿ, ವಿಶೇಷ ಪ್ಯಾಕೇಜ್ ಅಗಲಿ ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕರಾದ ಕುಮಾರಸ್ವಾಮಿ, ಕವಿತಾ, ಶಾಂತಮ್ಮ, ನಂದಿನಿ, ಷಣ್ಮುಖಪ್ಪ, ಅಬ್ದುಲ್, ಶಿವರಾಜ್, ಪುರುಷೋತ್ತಮ ಮತ್ತಿತರರು ತಹಶೀಲ್ದಾರ್ ಎಚ್.ಜೆ. ರಶ್ಮಿಯವರಿಗೆ ಮನವಿ ಸಲ್ಲಿಸಿದರು.
ಅತಿಥಿ ಉಪನ್ಯಾಸಕರ ವೇತನ ಬಿಡುಗಡೆಗೆ ಒತ್ತಾಯ : ಹಗರಿಬೊಮ್ಮನಹಳ್ಳಿ: ಯುವಜನತೆ ಸದೃಢವಾಗಿ ನಿರ್ಮಾಣವಾಗುವುದರಲ್ಲಿ ಉಪನ್ಯಾಸಕರ ಪಾತ್ರ ಮಹತ್ವದ್ದು ಎಂದು ಮಾಜಿ ಶಾಸಕ ಕೆ. ನೇಮಿರಾಜನಾಯ್ಕ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿ ಮುಂಭಾಗ ಅತಿಥಿ ಉಪನ್ಯಾಸಕರಿಗೆ ಆಹಾರಕಿಟ್ ವಿತರಿಸಿ ಅವರು ಮಾತನಾಡಿದರು. ಕೋವಿಡ್ ವೇತನವಿಲ್ಲದೆ ದಿನಿತ್ಯದ ಜೀವನ ಸಾಗಿಸುವುದು ಕಷ್ಟಕರವಾಗಿದೆ. ಕೂಡಲೇ ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರೊಂದಿಗೆ ಚರ್ಚಿಸಿ ಕೂಡಲೇ ವೇತನ ಬಿಡುಗಡೆಗೊಳಿಸುವಂತೆ ಒತ್ತಾಯಿಸಲಾಗುವುದು. ಯಾವುದೇ ಸೇವಾ ಭದ್ರತೆಯಿಲ್ಲದೆ ಕನಿಷ್ಟ ವೇತನದಲ್ಲೇ ಗರಿಷ್ಠ ಸೇವೆ ಸಲ್ಲಿಸುತ್ತಿರುವ ಇವರಿಗೆ 7 ತಿಂಗಳಿನಿಂದ ವೇತನ ಬಿಡುಗಡೆಯಾಗಿಲ್ಲದಿರುವುದು ಖೇದಕರ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅತಿಥಿ ಉಪನ್ಯಾಸಕ ಪಿ. ರಾಜಲಿಂಗಪ್ಪ ಮಾತನಾಡಿ, ಕ್ಷೇತ್ರದ 2 ಸರ್ಕಾರಿ ಪ್ರಥಮದರ್ಜೆ ಹಾಗೂ 2 ಸರ್ಕಾರಿ ಪದವಿಪೂರ್ವ ಕಾಲೇಜಿನಿಂದ ಒಟ್ಟು 125 ಜನ ಅತಿಥಿ ಉಪನ್ಯಾಸಕರಿಗೆ ಬಿಜೆಪಿಯಿಂದ ಮಾಜಿ ಶಾಸಕ ಕೆ.ನೇಮಿರಾಜ ನಾಯ್ಕ ಆಹಾರ ಕಿಟ್ ವಿತರಿಸಿದ್ದು ಮಾಜಿ ಶಾಸಕರ ಕಾಳಜಿ ನಿಜಕ್ಕೂ ಮೆಚ್ಚುವಂತಹದ್ದು ಎಂದು ತಿಳಿಸಿದರು. ಪುರಸಭೆ ಸದಸ್ಯರಾದ ಲಕ್ಷ್ಮಣ, ಪ್ರಕಾಶ ಚಿತ್ತವಾಡ್ಗಿ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಬ್ಯಾಟಿ ನಾಗರಾಜ, ನಗರ ಘಟಕಾಧ್ಯಕ್ಷ ಜಿ.ಎಂ.ಜಗದೀಶ್, ಎಸ್‌ಟಿ ಮೋರ್ಚಾ ಅಧ್ಯಕ್ಷ ಪ್ರಕಾಶ್ ಪೂಜಾರ್, ಓಬಿಸಿ ಕಾರ್ಯದರ್ಶಿ ವೆಂಕಟೇಶ್ ಬಾಗಳಿ, ಹಿರಿಯ ಮುಖಂಡರಾದ ಪಿ.ಸೂರ್ಯಬಾಬು, ಕಿನ್ನಾಳ ಸುಭಾಷ್, ಭದ್ರವಾಡಿ ಚಂದ್ರಶೇಖರ್, ನರೇಗಲ್ ಕೊಟ್ರೇಶ, ರಾಹುಲ್, ಬಿ. ಶ್ರೀನಿವಾಸ, ಬಂಟರ ಹುಲುಗಪ್ಪ, ಭಂಗ್ಯಾನಾಯ್ಕ, ಹೋಟೆಲ್ ಸಿದ್ದರಾಜು, ಹರ್ಷಗೌಡ, ಅತಿಥಿ ಉಪನ್ಯಾಸಕರಾದ ಎಂ.ಶಿವಮೂರ್ತಿ, ಅಕ್ಕಿ ಬಸವೇಶ, ಸೋಮೇಶ ಉಪ್ಪಾರ, ನಾಗರಾಜ, ಕೆ.ರಂಗನಾಥ, ಪ್ರವೀಣ್ ಕುಮಾರ್, ಗುರುಪ್ರಸಾದ್, ಅಮೀನ್‌ಜಾನ್, ರೆಹಮಾನ್, ಕೆ.ಭೀಮಪ್ಪ, ಎಚ್.ಎಂ.ಬಸವರಾಜಯ್ಯ, ಸವಿತಾ, ಗಣೇಶ್, ವಿಜಯಲಕ್ಷ್ಮೀ, ಮಂಜುಳಾ ಇತರರಿದ್ದರು.