ಬೆಳಗಾವಿ: ರಾಜ್ಯದ ರೈತರ ಸಾಲ ಮನ್ನಾ ಮಾಡಬೇಕು. ಬಿತ್ತನೆ ಬೀಜ ಹಾಗೂ ಗೊಬ್ಬರ ನೀಡಬೇಕು ಎಂದು ಆಗ್ರಹಿಸಿ ರೈತ ಸೇವಾ ಸಂಘದ ನೇತೃತ್ವದಲ್ಲಿ ರೈತರು ಸೋಮವಾರ ಜಿಲ್ಲಾ ಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು. ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಖರೀದಿ ಕೇಂದ್ರಗಳನ್ನು ಪ್ರತಿ ಗ್ರಾಮದಲ್ಲಿ ಸ್ಥಾಪಿಸಬೇಕು. ಪಕ್ಕದ ರಾಜ್ಯವಾದ ಕೇರಳ ಸರ್ಕಾರವು ತರಕಾರಿಗೆ ಬೆಲೆ ನಿಗದಿ ಮಾಡಿದಂತೆ ಕರ್ನಾಟಕ ಸರ್ಕಾರ ತರಕಾರಿ ಬೆಳೆಗಳಿಗೆ ನಿರ್ದಿಷ್ಟ ಬೆಲೆ ನಿಗದಿ ಪಡಿಸಬೇಕು ಎಂದು ಆಗ್ರಹಿಸಿದರು.
ತುಂತುರು ನೀರಾವರಿ ಮತ್ತು ಹನಿ ನೀರಾವರಿ ಸೌಲಭ್ಯವನ್ನು ಶೇ. 90ರಷ್ಟು ಸಬ್ಸಿಡಿಯಲ್ಲಿ ಎಲ್ಲ ರೈತರಿಗೂ ಸಿಗುವಂತೆ ಕ್ರಮ ಕೈಗೊಳ್ಳಬೇಕು. ಮತ್ತು ಈ ಎರಡು ರಿಯಾಯಿತಿ ಏಕಕಾಲದಲ್ಲಿ ಎಲ್ಲ ರೈತರಿಗೆ ಸಿಗುವಂತೆ ಕ್ರಮ ಕೈಗೊಳ್ಳಬೇಕು. ಗಂಗಾ ಕಲ್ಯಾಣ ಯೋಜನೆಯನ್ನು ಎಲ್ಲ ಸಣ್ಣ ರೈತರಿಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಭತ್ತ, ಸೊಯಾಬಿನ್, ರಾಗಿ, ಗೊಂಜಾಳ, ಶೇಂಗಾ, ಹತ್ತಿ, ಮುಂತಾದ ಬೆಳೆಗಳನ್ನು ಖರೀದಿಸುವ ಕೇಂದ್ರಗಳು ಸುಲಲಿತವಾಗಿ ನಡೆಯುವಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಕ್ರಮ ಕೈಗೊಳ್ಳಬೇಕು. ರೈತರ ಮಕ್ಕಳ ಶೈಕ್ಷಣಿಕ ಸಾಲ ಹಾಗೂ ಸೌರ್ಹಾದ ಸಹಕಾರಿ ಸಂಘಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಅಕಾಲಿಕ ಮಳೆಯಲ್ಲಿ ಬೆಳೆ ಹಾನಿಯಾದರೂ ಬೆಳೆ ವಿಮೆ ರೈತರಿಗೆ ಇನ್ನೂ ಸಮರ್ಪಕವಾಗಿ ತಲುಪುತ್ತಿಲ್ಲ. ಹೀಗಾಗಿ ಪ್ರಕೃತಿ ವಿಕೋಪದಿಂದ ಬೆಳೆ ನಾಶವಾದ ಸಂದರ್ಭಗಳಲ್ಲಿ ಬೆಳೆ ವಿಮೆ ಎಲ್ಲ ರೈತರಿಗೂ ಸಮರ್ಪಕವಾಗಿ ಸಿಗುವಂತಾಗಬೇಕು ಎಂದು ಆಗ್ರಹಿಸಿದರು.
ಬಿತ್ತನೆ ಬೀಜ ಹಾಗೂ ಗೊಬ್ಬರವನ್ನು ರೈತರು ಬೇರೆ ಕಡೆಯಿಂದ ಖರೀದಿಸಿ ತರುತ್ತಿದ್ದಾರೆ. ಬೀಜಗಳನ್ನು ವಿತರಿಸುವಂತೆ ಕೃಷಿ ಸಚಿವರ ಗಮನಕ್ಕೆ ತಂದರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಬೀಜಗಳನ್ನು ವಿತರಿಸುವ ಮೂಲಕ ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.
ಕಳ್ಳ ಮಾರ್ಗದ ಮೂಲಕ ರೈತ ಹೋರಾಟವನ್ನು ಕುಗ್ಗಿಸುವ ಕೆಲಸ ಯಾರಾದರೂ ಮಾಡಿದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಶಕ್ತಿ ರೈತರ ಹಸಿರು ಶಾಲಿಗೆ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.